ಮೈಸೂರು: ಕ್ಯಾನ್ಸರ್ ಚಿಕಿತ್ಸೆಯಲ್ಲಿ ಮೈಸೂರಿಗೆ ಮಹತ್ವದ ಮೈಲುಗಲ್ಲು ಸಿಕ್ಕಿದ್ದು, ಭಾರತ್ ಆಸ್ಪತ್ರೆ ಮತ್ತು ಅಂಕಾಲಜಿ ಸಂಸ್ಥೆಯಲ್ಲಿ ಮೈಸೂರಿನ ಮೊದಲ ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್ ಘಟಕವನ್ನು ಸೋಮವಾರ ಉದ್ಘಾಟಿಸಲಾಯಿತು.
ಇದು ಪ್ರಾದೇಶಿಕವಾಗಿ ಹೆಮಟಾಲಜಿ ಮತ್ತು ಆಂಕಾಲಜಿ ಸೇವೆಗಳಲ್ಲಿ ದೊಡ್ಡ ಪ್ರಗತಿಯಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ (ಪ್ರಾ.) ಲಿಮಿಟೆಡ್ ಮೈಸೂರು ಸಹಯೋಗದೊಂದಿಗೆ ಹೆಬ್ಬಾಳದ ಬಿಹೆಚ್‌ಐಓ ಸಂಸೈಎಯಲ್ಲಿ ಸೋಮವಾರ ಈ ಅತ್ಯಾಧುನಿಕ ಘಟಕ ಉದ್ಘಾಟನೆಯಾಗಿದೆ.
ಈ ಘಟಕವನ್ನು ಸಂಸ್ಥೆಯ ಅಧ್ಯಕ್ಷ ಡಾ. ಬಿ.ಎಸ್. ಅಜಯ್ ಕುಮಾರ್ ಉದ್ಘಾಟಿಸಿದರು. ಇದು ಉನ್ನತ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳ ನಕ್ಷೆಯಲ್ಲಿ ಮೈಸೂರು ಹೆಸರನ್ನು ಸ್ಥಾಪಿಸುವ ಮೈಲುಗಲ್ಲು ಎಂದು ಅವರು ಬಣ್ಣಿಸಿದರು. ಇದುವರೆಗೆ ಮೈಸೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳ ರೋಗಿಗಳು ಈ ಚಿಕಿತ್ಸೆಗೆ ಬೆಂಗಳೂರಿಗೆ ತೆರಳಬೇಕಾಗುತ್ತಿತ್ತು. ಇದಕ್ಕೆ ಹೆಚ್ಚಿನ ವೆಚ್ಚ, ದೀರ್ಘ ಸಮಯ ಕಾಯುವಿಕೆ ಮತ್ತು ಲಾಜಿಸ್ಟಿಕ್ ಸಮಸ್ಯೆಗಳು ಎದುರಾಗುತ್ತಿದ್ದವು.
ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್ (ಮೂಳೆ ಮಜ್ಜೆಯ ಕಸಿ) ಒಂದು ವಿಶೇಷ ವಿಧಾನವಾಗಿದ್ದು, ಇದರಲ್ಲಿ ಅನಾರೋಗ್ಯಕರ ರಕ್ತ-ರೂಪಿಸುವ ಕಾಂಡಕೋಶಗಳನ್ನು ರೋಗಿಯಿಂದ ಅಥವಾ ಹೊಂದಾಣಿಕೆಯ ದಾನಿಯಿಂದ ಪಡೆದ ಆರೋಗ್ಯಕರವಾದವುಗಳೊಂದಿಗೆ ಬದಲಾಯಿಸಲಾಗುತ್ತದೆ. ಲ್ಯುಕೇಮಿಯಾ, ಲಿಂಫೋಮಾ ಮತ್ತು ಮಲ್ಟಿಪಲ್ ಮೈಲೋಮಾದಂತಹ ರಕ್ತದ ಕ್ಯಾನ್ಸರ್‌ಗಳು ಹಾಗೂ ಕೆಲವು ಜನ್ಮಜಾತ ಮತ್ತು ರೋಗನಿರೋಧಕ-ಸಂಬಂಧಿತ ಅಸ್ವಸ್ಥತೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಇದು ನಿರ್ಣಾಯಕ ಮತ್ತು ಹೆಚ್ಚಾಗಿ ಜೀವ ಉಳಿಸುವ ಚಿಕಿತ್ಸೆಯಾಗಿದೆ.
ಉದ್ಘಾಟನೆ ನಂತರ ಮಾತನಾಡಿದ ಡಾ.ಅಜಯ್ ಕುಮಾರ್, ಈ ಘಟಕ ಅಂತರರಾಷ್ಟ್ರೀಯ ಮಟ್ಟದ ಸೈರಿಲಿಟಿ ಮತ್ತು ಇನ್‌ಫೆಕ್ಷನ್ ನಿಯಂತ್ರಣಕ್ಕೆ ಅನುಗುಣವಾಗಿದ್ದು, ರೋಗಿಗಳ ಸುರಕ್ಷತೆಗೆ ಅತ್ಯುನ್ನತ ಆದ್ಯತೆ ನೀಡಲಾಗಿದೆ ಎಂದರು.
"ಈ ಬಿಎಂಟಿ ಘಟಕ ಬಿಹೆಚ್‌ಐಓ ಅನ್ನು ಮೈಸೂರು ಮತ್ತು ಸುತ್ತಲಿನ ಪ್ರದೇಶದಲ್ಲಿ ಉನ್ನತ ಹೆಮಟಾಲಜಿ ಮತ್ತು ಅಂಕಾಲಜಿ ಕೇಂದ್ರವನ್ನಾಗಿ ಸ್ಥಾಪಿಸಿದೆ. ಮನೆಯ ಹತ್ತಿರವೇ ವಿಶ್ವದರ್ಜೆಯ ಕ್ಯಾನ್ಸರ್ ಚಿಕಿತ್ಸೆ ನೀಡುವುದು ನಮ್ಮ ಗುರಿ,” ಎಂದು ಹೇಳಿದರು.
ಸಿಎಆರ್-ಟಿ ಸೆಲ್ ಥೆರಪಿ ಮತ್ತು ಇಮ್ಯುನೋಥೆರಪಿ ಮುಂತಾದ ಉನ್ನತ ಚಿಕಿತ್ಸೆಗಳಿಗೂ ಈ ಘಟಕ ಸಜ್ಜಾಗಿದ್ದು ಅನುಭವಿ ವೈದ್ಯರ ತಂಡವಿದೆ ಎಂದರು.
ರಕ್ತ ಸಂಬಂಧಿತ ಕ್ಯಾನ್ಸರ್‌ಗಳ ಸಂಖ್ಯೆ ಹೆಚ್ಚುತ್ತಿರುವ ಸಮಯದಲ್ಲಿ ಮೈಸೂರಿನಲ್ಲಿ ಬಿಎಂಟಿ ಘಟಕ ಆರಂಭವಾಗಿರುವುದು ಮಹತ್ವದ್ದು ಎಂದು ಅವರು ಉಲ್ಲೇಖಿಸಿದರು.
"ಈ ಸೌಲಭ್ಯದಿಂದ ರೋಗಿಗಳು ಸ್ಥಳೀಯವಾಗಿಯೇ ಅಂತರರಾಷ್ಟ್ರೀಯ ಮಟ್ಟದ ಚಿಕಿತ್ಸೆ ಪಡೆಯಬಹುದು. ದೂರದ ಮಹಾನಗರಗಳಿಗೆ ಹೋಗುವ ಆರ್ಥಿಕ ಮತ್ತು ಭಾವನಾತ್ಮಕ ಹೊರೆ ತಪ್ಪಿಸಬಹುದು,” ಎಂದರು.
ರಿಜರ್ವ್ ಬ್ಯಾಂಕ್‌ನ ಸೀನಿಯರ್ ಜನರಲ್ ಮ್ಯಾನೇಜರ್ ಕುಮಾರ್ ರಾಕೇಶ್ ಗುಪ್ತಾ ಮಾತನಾಡಿ, ಈ ಉದ್ಘಾಟನೆ ಮೈಸೂರಿನ ಆರೋಗ್ಯ ಸೇವೆಗೆ ದೊಡ್ಡ ಉತ್ತೇಜನ ಎಂದರು. "ಕೈಗೆಟುಕುವ ಚಿಕಿತ್ಸೆ, ತಜ್ಞ ವೈದ್ಯರು ಮತ್ತು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಈ ಬಿಎಂಟಿ ಘಟಕ ಮೈಸೂರು ಮತ್ತು ಸುತ್ತಲ ಜಿಲ್ಲೆಗಳ ಕ್ಯಾನ್ಸರ್ ಚಿಕಿತ್ಸೆಯನ್ನು ಬದಲಾಯಿಸಲಿದೆ. ಪ್ರಾಣಘಾತಕ ರಕ್ತ ವ್ಯಾಧಿಗಳೊಂದಿಗೆ ಹೋರಾಡುತ್ತಿರುವ ಅನೇಕ ಕುಟುಂಬಗಳಿಗೆ ಇದು ಆಸರೆಯ ಕಿರಣ," ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ರೇಡಿಯೇಷನ್ ಅಂಕಾಲಜಿಸ್ಟ್ರ ಹಾಗೂ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ವೈ.ಎಸ್. ಮಾಧವಿ, ಮುಖ್ಯ ಮೆಡಿಕಲ್ ಅಂಕಾಲಜಿಸ್ಟ್ ಡಾ. ಅವಿನಾಶ್ ಸಿ.ಬಿ.. ಕನ್ಸಲೆಂಟ್ ಹೆಮಟೋ ಆಂಕಾಲಜಿಸ್ಟ್ ಮತ್ತು ಬಿಎಂಟಿ ವೈದ್ಯ ಡಾ. ನಟರಾಜ್, ಡಾ. ಸಂತೋಷ್ ಕುಮಾರ್ ಕೆ.ಎನ್. ಸೀನಿಯರ್ ಕನ್ನಲೈಂಟ್ ಮೆಡಿಕಲ್ ಆಂಕಾಲಜಿಸ್ಟ್ ಡಾ. ಅಭಿಲಾಷ್ ಜಿ.ಎಚ್, ಕನ್ನಲೆಂಟ್ ಪೀಡಿಯಾಟ್ರಿಕ್ ಹೆಮಟಾಲಜಿಸ್ಟ್ ಮತ್ತು ಅಂಕಾಲಜಿಸ್ಟ್ ಡಾ. ಸೌಮ್ಮ, ಸಿಓಓ ಗೌತಮ್ ಧಾಮರ್ಲಾ, ಬಿಆರ್‌ಬಿಎಂ ಜನರಲ್ ಮ್ಯಾನೇಜರ್ ಕೆ. ದಿನಕರ್, ದಿನೇಶ್ ಕುಮಾರ್ ಆನಂದ್, ಮ್ಯಾನೇಜರ್ ಮೋಹಿತ್ ಅಗರ್ವಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.




