ಚಾಮುಂಡೇಶ್ವರಿ ಸೋಲಿಗೆ ಮಾವಿನಹಳ್ಳಿ ಸಿದ್ದೇಗೌಡರ ನಿರ್ಲಕ್ಷ್ಯ, ಬೇಜವಾಬ್ದಾರಿ ಕಾರಣ : ಮರೀಗೌಡ ಆರೋಪ

ಮೈಸೂರು : ರಾಜ್ಯಾದ್ಯಂತ ಬೀಸುತ್ತಿದ್ದ ಕಾಂಗ್ರೆಸ್ ಪಕ್ಷದ ಅಲೆಯಲ್ಲಿ ಸುಲಭವಾಗಿ ಗೆಲ್ಲಬಹುದಾಗಿದ್ದ ಚಾಮುಂಡೇಶ್ವರಿ ಕ್ಷೇತ್ರವನ್ನು ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡರ ನಿರ್ಲಕ್ಷ್ಯದಿಂದ ಕಳೆದುಕೊಳ್ಳಬೇಕಾಯಿತು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡ ಆರೋಪಿಸಿದರು.
ಕಾಂಗ್ರೆಸ್ ಪಕ್ಷದ ಅಭೂತಪೂರ್ವ ಗೆಲುವು ಮತ್ತು ಸಿದ್ದರಾಮಯ್ಯ ಮುಖ್ಯಮಂತ್ರಿ ಹಾಗೂ ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿಯಾದ ಹಿನ್ನಲೆಯಲ್ಲಿ ಇಲವಾಲ ಗ್ರಾಮದ ಶ್ರೀ ಶಕ್ತಿ ಗಣಪತಿ ದೇವಾಲಯದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರಲ್ಲಿ ವಿಶೇಷ ಪೂಜೆ ಹಾಗೂ ಹಜರತ್ ಸೈಯದ್ ಫಕ್ರುದ್ದೀನ್ ಷಾ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಅವರು ಮಾತನಾಡಿದರು.

ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ ಮತದಾನಕ್ಕೂ ಒಂದು ದಿನ ಮುಂಚೆ ಹಣ ಇಲ್ಲ ಎಂದು ಕೈ ಚೆಲ್ಲಿ ಕುಳಿತಿದ್ದರು. ಇಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಅಗತ್ಯ ನೆರವು ನೀಡಿದರು. ಇದರಿಂದ ಬೂತ್‍ಗಳಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಕಾರ್ಯನಿರ್ವಹಿಸಲು ಸಾಧ್ಯವಾಯಿತು. ನಾನು 1983 ರಿಂದಲೂ ಸಿದ್ದರಾಮಯ್ಯ ಅವರ ನೆರಳಿನಲ್ಲಿ ರಾಜಕಾರಣ ಮಾಡುತ್ತಿದ್ದೇನೆ. ಸಿದ್ದೇಗೌಡ ವೃಥಾ ನನ್ನ ಮೇಲೆ ಆರೋಪ ಮಾಡುತ್ತಿದ್ದಾನೆ. ಅವನೊಬ್ಬ ಬಲಹೀನ, ಶಕ್ತಿ ಇಲ್ಲದ ವ್ಯಕ್ತಿಗೆ ಟಿಕೆಟ್ ನೀಡಲಾಗಿತ್ತು. ಶಾಸಕ ಜಿ.ಟಿ.ದೇವೇಗೌಡ ಅವರು ಸಿದ್ದೇಗೌಡನಿಗೆ ಒದ್ದು ಹೊರ ಹಾಕಿದ್ದಕ್ಕೆ ಆತ ಕಾಂಗ್ರೆಸ್ ಪಕ್ಷಕ್ಕೆ ಬಂದು ಸೇರಿಕೊಂಡನು. ಈತನ ಕೊನೆ ಕ್ಷಣದ ತೀರ್ಮಾನದಿಂದ ನಮ್ಮ ಪಕ್ಷ ಸುಲಭವಾಗಿ ಗೆಲ್ಲಬಹುದಾಗಿದ್ದ ಒಂದು ಸ್ಥಾನವನ್ನು ಕಳೆದುಕೊಳ್ಳಬೇಕಾಯಿತು ಎಂದರು. 

ಇಲವಾಲ ಗ್ರಾಮದಲ್ಲಿ ಭಾನುವಾರ ಸಂಜೆ ಹಬ್ಬದ ವಾತಾವಣ ಮೂಡಿತ್ತು. ಕಾಂಗ್ರೆಸ್ ಪಕ್ಷದ ಗೆಲುವನ್ನು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭಾರಿ ಪಟಾಕಿ ಸಿಡಿಸಿ ಸುಮಾರು 25 ಸಾವಿರಕ್ಕೂ ಹೆಚ್ಚು ಜನರಿಗೆ ಲಾಡು ವಿತರಿಸುವ ಮೂಲಕ ಸಂಭ್ರಮಿಸಿದರು. ಗ್ರಾಮದ ಮುಖ್ಯ ರಸ್ತೆಯಲ್ಲಿ ಕೆ.ಮರೀಗೌಡ ತಮ್ಮ ಬೆಂಬಲಿಗರ ಜತೆ ಪಾದಯಾತ್ರೆ ನಡೆಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಕಾಮನಕೆರೆಕರೀಗೌಡೆ, ಅರುಣ್ ಕುಮಾರ್, ಸಿ.ನರೇಂದ್ರ, ಕನಕನಹಳ್ಳಿ ಮಂಜು, ತಾಪಂ ಮಾಜಿ ಸದಸ್ಯೆ ಗೀತಾ, ರವಿಕುಮಾರ್, ರಾಜೇಶ್, ಮಹೇಶ್, ನಾಗರಾಜು, ರಘು, ಅಸ್ಲಂಪಾಷ, ಮೈದನಹಳ್ಳಿ ಶಿವಣ್ಣ, ಮಾರಳ್ಳಿ ನಾಗೇಶ್, ಸಿದ್ದೇಗೌಡ ಮುಂತಾದವರು ಇದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು