ಮನೆ ಮಗ ಪುಟ್ಟರಾಜು ಬೇಕಾ? ಕಷ್ಟದಲ್ಲಿ ಕೈ ಕೊಟ್ಟು ಚುನಾವಣೆಗಾಗಿ ಈಗ ಬಂದಿರುವವರು ಬೇಕಾ?

ಜಕ್ಕನಹಳ್ಳಿಯಲ್ಲಿ ರೋಡ್ ಶೋ ವೇಳೆ ಜೆಡಿಎಸ್ ಅಭ್ಯರ್ಥಿ ಶಾಸಕ ಪುಟ್ಟರಾಜು ಹೇಳಿಕೆ  
ರ‍್ಯಾಲಿಯಲ್ಲಿ ಸಾವಿರಾರು ಕಾರ್ಯಕರ್ತರು, ಮುಖಂಡರು ಭಾಗಿ,  ಮಹಿಳೆಯರಿಂದ ಪೂರ್ಣಕುಂಭ ಸ್ವಾಗತ

ಪಾಂಡವಪುರ : ಮೇಲುಕೋಟೆ ಕ್ಷೇತ್ರದಲ್ಲಿ ೭೫೦ ಕೋಟಿ ರೂ. ವೆಚ್ಚದ ನೀರಾವರಿ ಯೋಜನೆಗಳನ್ನು ಸಾಕಾರಗೊಳಿಸಿ, ಕರೋನಾ ಕಷ್ಟದಲ್ಲಿ ಪ್ರಾಣದ ಹಂಗನ್ನು ತೊರೆದು ಜನರ ನೆರವಿಗೆ ನಿಂತ ನಿಮ್ಮ ಮನೆ ಮಗ ಪುಟ್ಟರಾಜು ಬೇಕಾ? ಅಥವಾ ಕಷ್ಟದಲ್ಲಿ ಕೈ ಕೊಟ್ಟು ಅಮೆರಿಕಾ ಸೇರಿ ಈಗ ಚುನಾವಣೆಗಾಗಿ ಬಂದಿರುವವರು ನಿಮಗೆ ಬೇಕಾ? ಎಂಬುದನ್ನು ಮತದಾರರೇ ನಿರ್ಧರಿಸಿ ಎಂದು ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಹೇಳಿದರು.
ತಾಲ್ಲೂಕಿನ ಜಕ್ಕನಹಳ್ಳಿ ಗ್ರಾಮದಲ್ಲಿ ಭರ್ಜರಿ ರೋಡ್ ಶೋ ನಡೆಸುವ ಮೂಲಕ ಚುನಾವಣಾ ಪ್ರಚಾರ ನಡೆಸಿ ಮಾತನಾಡಿ, ಮೇಲುಕೋಟೆ ಹೋಬಳಿಯಲ್ಲಿ ಜಕ್ಕನಹಳ್ಳಿ ಸರ್ಕಲ್ ಜನನಿಬಿಡ ಪ್ರದೇಶವಾಗಿದ್ದು, ಇದನ್ನು ಮುಂದಿನ ದಿನಗಳಲ್ಲಿ ಪ್ರಮುಖ ವಾಣಿಜ್ಯ ಕೇಂದ್ರವನ್ನಾಗಿ ಮಾಡಲಾಗುವುದು. ಈ ಭಾಗದ ಜನರಿಗೆ ಅಗತ್ಯವಿರುವ ಎಲ್ಲ ವಸ್ತುಗಳು ಇಲ್ಲಿ ದೊರಕಲಿದ್ದು, ಅತ್ಯುತ್ತಮ ಆಸ್ಪತ್ರೆ ನಿರ್ಮಿಸಿ ವೈದ್ಯಕೀಯ ಸೇವೆ ನೀಡಲಾಗುವುದು ಎಂದರು.
ಈಗಾಗಲೇ ಹಲವಾರು ಗ್ರಾಮಗಳಲ್ಲಿ ಪ್ರಚಾರ ನಡೆಸಲಾಗಿದೆ. ಮತದಾರರು ನಮಗೆ ಅತ್ಯುತ್ತಮವಾಗಿ ಸ್ಪಂದಿಸುತ್ತಿದ್ದು ವಿರೋಧಿಗಳ ಅಪಪ್ರಚಾರಕ್ಕೆ ಮನ್ನಣೆ ನೀಡಬೇಡಿ ಮತ್ತು ಸುಳ್ಳು ಆರೋಪಗಳಿಗೆ ಮರುಳಾಗಬೇಡಿ ಎಂದು ಮತದಾರರಿಗೆ ಸಲಹೆ ನೀಡಿದರು.

ಗ್ರಾಮದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಆದಿ ಚುಂಚನಗಿರಿಗೆ ಸಂಪರ್ಕ ಕಲ್ಪಿಸುವ ಬೀದರ್-ಚಾಮರಾಜನಗರ ಹೆದ್ದಾರಿಯನ್ನು ಉನ್ನತೀಕರಿಸಲಾಗಿದೆ. ಮೇಲುಕೋಟೆ ಕ್ಷೇತ್ರದಲ್ಲಿ ಈ ಹಿಂದೆ ಕೇವಲ ಒಂದೇ ಒಂದು ವಿದ್ಯುತ್ ಸಬ್ ಸ್ಟೇಷನ್ ಇತ್ತು. ನನ್ನ ಅವಧಿಯಲ್ಲಿ ೧೨ ಸಬ್ ಸ್ಟೇಷನ್ ನಿರ್ಮಿಸಿ ರೈತರ ವಿದ್ಯುತ್ ಕೊರತೆಯನ್ನು ನೀಗಿಸಲಾಗಿದೆ. ಮೇಲುಕೋಟೆ ಕ್ಷೇತ್ರದಲ್ಲಿ ಮೂರು ಪದವಿ ಕಾಲೇಜು, ಐದು ಪಿಯುಸಿ ಕಾಲೇಜು, ೧೨ ಪ್ರೌಢಶಾಲೆ, ೮ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಐತಿಹಾಸಿಕ ಮೇಲುಕೋಟೆಯನ್ನು ಸರ್ವಾಂಗೀಣ ಅಭಿವೃದ್ಧಿ ಮಾಡಿದ್ದೇವೆ. ಅತ್ಯುತ್ತಮ ಪ್ರಾಥಮಿಕ ಆರೋಗ್ಯ ಕೇಂದ್ರ ಮಾಡಲಾಗಿದೆ. ಜಕ್ಕನಹಳ್ಳಿ ಸರ್ಕಲ್‌ನಲ್ಲಿ ಹಲವಾರು ಜನರ ವಿರೋಧದ ನಡುವೆ ಗಣಪತಿ ದೇವಾಲಯ ನಿರ್ಮಿಸಲಾಗಿದೆ ಎಂದು ಹೇಳಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೇಲುಕೋಟೆ ಹೋಬಳಿಯಲ್ಲಿ ನನಗೆ ೭ ಸಾವಿರ ಮತಗಳನ್ನು ಲೀಡ್ ನೀಡಲಾಗಿತ್ತು. ಅದರಲ್ಲೂ ಜಕ್ಕನಹಳ್ಳಿ ಪಂಚಾಯ್ತಿಯಲ್ಲಿ ೧೯೮೦ ಮತಗಳು ಲೀಡ್ ಸಿಕ್ಕಿದ್ದವು. ಈ ಭಾಗದ ಜನರು ನನ್ನ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ನಾನು ಋಣಿಯಾಗಿದ್ದೇನೆ.
ನೀರಾವರಿ ವಂಚಿತ ಪ್ರದೇಶವಾದ ಮೇಲುಕೋಟೆ ಹೋಬಳಿಯ ಹಲವಾರು ಗ್ರಾಮಗಳಿಗೆ ನೀರುಣಿಸಲು ೨೦೦ ಕೋಟಿ ರೂ. ವೆಚ್ಚದಲ್ಲಿ ಕಾವೇರಿ ನದಿಯಿಂದ ಕದಲಗೆರೆ ಕೆರೆ ಅಗಲೀಕರಣ ಮಾಡಿ, ಏತ ನೀರಾವತಿ ಯೋಜನೆ ರೂಪಿಸಿ ಕದಲಗೆರೆಯಲ್ಲಿ ಮಿನಿ ಡ್ಯಾಂ ನಿರ್ಮಾಣ ಮಾಡಿ ಸುತ್ತಮುತ್ತಲಿನ ಕೆರೆಗಳಿಗೆ ನೀರು ತುಂಬಿಸುವ ಮೂಲಕ ಇಲ್ಲಿನ ಸಂಪೂರ್ಣ ಮಳೆಯಾಶ್ರಿತ ಬರಡು ಭೂಮಿಯನ್ನು ನೀರಾವರಿ ಪ್ರದೇಶವನ್ನಾಗಿ ಮಾಡಲಾಗಿದೆ. ಇದನ್ನು ಮನಗಂಡು ಈ ಭಾಗದ ರೈತ ಬಂಧುಗಳು ನನಗೆ ಇನ್ನೂ ಹೆಚ್ಚಿನ ಲೀಡ್ ಕೊಡಿಸುವ ಮೂಲಕ ತಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ವಿನಂತಿಸಿದರು.

ನನ್ನ ಬಗ್ಗೆ ಅಪಾರ ಕಳಕಳಿ ಇಟ್ಟುಕೊಂಡು ಅಮೆರಿಕಾದಿಂದ ಅಕ್ಕ ಸಂಘಟನೆಯ ಅಮರ್‌ನಾಥ್ ಮುಂತಾದ ಗಣ್ಯರು ನನ್ನ ಪರ ಪ್ರಚಾರ ನಡೆಸುತ್ತಿದ್ದಾರೆ. ಕರೋನಾ ಸಂದರ್ಭದಲ್ಲಿ ನಾನು ಯಾವುದೇ ರೀತಿಯ ಪ್ರಾಣಾಪಾಯ ಲೆಕ್ಕಿಸದೆ ಜನರ ನಡುವೆ ನಿಂತು ಸಾಕಷ್ಟು ಸಹಾಯ ಮಾಡಿದ್ದೇನೆ. ನೂರಾರು ಜನರ ಜೀವ ಉಳಿದಿದೆ. ಲಾಕ್‌ಡೌನ್ ವೇಳೆ ಸಾವಿರಾರು ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸಲಾಗಿದೆ. ಕಷ್ಟ ಕಾಲದಲ್ಲಿ ಜನರ ಜತೆ ನಿಲ್ಲದವರು ಈಗ ಚುನಾವಣೆಗಾಗಿ ಬಂದು ನನ್ನ ವಿರುದ್ಧ ಅಪ ಪ್ರಚಾರ ನಡೆಸಿ ಮತಯಾಚನೆ ಮಾಡುತ್ತಿದ್ದಾರೆ. ಜನರು ಮತ್ತೊಮ್ಮೆ ನಿಮ್ಮ ಮನೆ ಮಗ ಪುಟ್ಟರಾಜುಗೆ ಆಶೀರ್ವಾದ ಮಾಡಬೇಕು ಎಂದು ಕೋರಿದರು. 
ತಾಲೂಕಿನ ಸಂಗಾಪುರ, ಅರಕನಗೆರೆ, ಶಂಭೂನಹಳ್ಳಿ, ಬೋರಾಪುರ, ಕಜ್ಜಿಕೊಪ್ಪಲು, ಗರುಡಾಪುರ, ದೊಡ್ಡಿಘಟ್ಟ, ಲಕ್ಷಿö್ಮಪುರ, ಅಮೃತಿ, ಕಾಡೇನಹಳ್ಳಿ, ದೇವರಹಳ್ಳಿ, ಕದಲಗೆರೆ ಮೂಲಕ ಜಕ್ಕನಹಳ್ಳಿ ಸರ್ಕಲ್‌ಗೆ ರ‍್ಯಾಲಿ ಮೂಲಕ ಆಗಮಿಸಿದ ಅವರು ಗ್ರಾಮದ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ನಡೆಸಿದರು.  

ಈ ವೇಳೆ ಪುಟ್ಟರಾಜು ಅವರನ್ನು ಜೆಡಿಎಸ್ ಕಾರ್ಯಕರ್ತರು ಭಾರಿ ಪ್ರಮಾಣದ ಪಟಾಕಿ ಸಿಡಿಸಿ ತಮ್ಮ ನಾಯಕನನ್ನು ಅದ್ದೂರಿಯಾಗಿ ಸ್ವಾಗತಿಸಿದರು.ರ‍್ಯಾಲಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ಎ.ಮಲ್ಲೇಶ್, ವಿಎಸ್‌ಎಸ್‌ಎನ್‌ಬಿ ಅಧ್ಯಕ್ಷ ಜೆ.ಶಿವಶಂಕರ್, ಉದ್ಯಮಿ ಚಂದ್ರಶೇಖರ್, ಅಮೆರಿಕಾದ ಅಮರ್‌ನಾಥ್, ಶಂಭೂನಹಳ್ಳಿ ಆನಂದ್, ಶ್ರೇಯಸ್, ಲಯನ್ ಜಯರಾಮು, ಬೆಟ್ಟಸ್ವಾಮಿಗೌಡ, ಗ್ರಾಪಂ ಮಾಜಿ ಉಪಾಧ್ಯಕ್ಷ ಲೋಕೇಶ್, ಅಂಗಡಿ ಜಯಣ್ಣ, ನಾಗಣ್ಣ ಮುಂತಾದವರು ಇದ್ದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು