ಲಯನ್ ಜಯರಾಂ ತಮ್ಮ ಬೆಂಬಲಿಗರೊಂದಿಗೆ ಜೆಡಿಎಸ್ ಸೇರ್ಪಡೆ

ಶೀಘ್ರದಲ್ಲೇ ಲಕ್ಷ್ಮಿಸಾಗರ ಗ್ರಾಮದಲ್ಲಿ ಬೃಹತ್ ಸೇರ್ಪಡೆ ಕಾರ್ಯಕ್ರಮ

ನಜೀರ್ ಅಹಮದ್, ಪಾಂಡವಪುರ
ಪಾಂಡವಪುರ : ಸಮಾಜ ಸೇವಕ ಲಯನ್ ಎಲ್.ಕೆ.ಜಯರಾಂ ತಮ್ಮ ಬೆಂಬಲಿಗರ ಜತೆ ಇಂದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಶೀಘ್ರದಲ್ಲಿಯೇ ಲಕ್ಷ್ಮಿಸಾಗರ ಗ್ರಾಮದಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ಪಟ್ಟಣದ ಖಾಸಗಿ ಹೋಟೆಲ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ  ಅವರು 
ಮಾತನಾಡಿ, ತಾವು ಈ ಹಿಂದೆ ಜೆಡಿಎಸ್ ಪಕ್ಷದ ಕಾರ್ಯಕರ್ತರಾಗಿದ್ದು, ಕಾರಣಾಂತರದಿಂದ ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರವಾಗಿ ತಮ್ಮದೇ ಆದ ಬೆಂಬಲಿಗರ ಜತೆಗೂಡಿ ಸಮಾಜ ಸೇವೆಯಲ್ಲಿ ನಿರತಾಗಿದ್ದೆವು ಎಂದರು. 
ಶಾಲಾ ಮಕ್ಕಳಿಗೆ ನೋಟ್‍ಬುಕ್ ವಿತರಣೆ, ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ವಿವಿಧ ಸಮಾಜ ಸೇವೆಯಲ್ಲಿ ತೊಡಗಿದ್ದು, ಪ್ರಸ್ತುತ ಚುನಾವಣಾ ಸಂದರ್ಭವಾದ್ದರಿಂದ ತಾವು ಮತ್ತು ತಮ್ಮ ಬೆಂಬಲಿಗರು ರಾಜಕೀಯ ಪಕ್ಷವೊಂದರಲ್ಲಿ ಗುರುತಿಸಿಕೊಳ್ಳಲು ನಿರ್ಧರಿಸಿ, ಜೆಡಿಎಸ್ ಪಕ್ಷದ ಪಂಚರತ್ನ ಕಾರ್ಯಕ್ರಮ ಮತ್ತು ಶಾಸಕ ಸಿ.ಎಸ್.ಪುಟ್ಟರಾಜು ಅವರು ಮೇಲುಕೋಟೆ ಕ್ಷೇತ್ರದಲ್ಲಿ ನಡೆಸಿರುವ ಅಭಿವೃದ್ಧಿ ಕಾರ್ಯಕ್ರಮಗಳಿಂದ ಪ್ರಭಾವಿತರಾಗಿ ಜೆಡಿಎಸ್ ಪಕ್ಷ ಸೇರುತ್ತಿರುವುದಾಗಿ ಅವರು ಘೋಷಣೆ ಮಾಡಿದರು.
ರಾಜ್ಯದಲ್ಲಿ ಈ ಬಾರಿ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಹೆಚ್.ಡಿ.ಕುಮಾರಸ್ವಾಮಿ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗುವುದು ಖಚಿತವಾಗಿದೆ. ಈ ಹಿಂದೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ರೈತರ ಸಾಲಮನ್ನಾ ಮಾಡುವುದರ ಮೂಲಕ ಕೃಷಿಕರ ನೆರವಿಗೆ ನಿಂತರು. ಅದೇ ರೀತಿ ಬಾರಿಯೂ ಪಂಚರತ್ನ ಕಾರ್ಯಕ್ರಮ ಅನುಷ್ಠಾನ ಮಾಡುವುದಾಗಿ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದಾರೆ. ಈ ಕಾರ್ಯಕ್ರಮ ಜಾರಿಯಾದರೆ ರಾಜ್ಯದಲ್ಲಿ ಬಡತನ ನಿರ್ಮೂಲನೆ, ಸ್ವಂತಸೂರು ಭಾಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯಾಗಲಿದೆ. ಈ ಕಾರಣದಿಂದ ತಾವು ಕುಮಾರಸ್ವಾಮಿ ಅವರ ಕೈ ಬಲಪಡಿಸಿ ಮತ್ತೊಮ್ಮೆ ಸಿ.ಎಸ್.ಪುಟ್ಟರಾಜು ಅವರು ಸಚಿವರಾಗಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಲು ಜೆಡಿಎಸ್ ಪಕ್ಷಕ್ಕೆ ಶಕ್ತಿ ತುಂಬುವ ಕಾರಣದಿಂದ ಪಕ್ಷ ಸೇರ್ಪಡೆ ಆಗುತ್ತಿರುವುದಾಗಿ ಹೇಳಿದರು.
ಜೆಡಿಎಸ್ ಮುಖಂಡ ಪಿಎಲ್ ಆದರ್ಶ ಅವರು ಮಾತನಾಡಿ, ಶಾಸಕ ಸಿಎಸ್.ಪುಟ್ಟರಾಜು ಶಾಸಕರಾಗಿ, ಸಂಸದರಾಗಿ ಮತ್ತು ಸಚಿವರಾಗಿ ನಮ್ಮ ಕ್ಷೇತ್ರವನ್ನು ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಮೇಲುಕೋಟೆ ಕ್ಷೇತ್ರದಲ್ಲಿ ಸಾಕಷ್ಟು ನೀರಾವರಿ ಯೋಜನೆಗಳು ಅನುಷ್ಠಾನಗೊಂಡಿವೆ. ಮತದಾರರು ಅವರನ್ನು ಆಧುನಿಕ ಭಗೀರಥ ಎಂದೇ ಕರೆಯುತ್ತಾರೆ. ಈ ನಿಟ್ಟಿನಲ್ಲಿ ಲಯನ್ ಜಯರಾಂ ಅವರು ಜೆಡಿಎಸ್ ಸೇರ್ಪಡೆ ಆಗುತ್ತಿರುವುದು ಕ್ಷೇತ್ರದ ಮತದಾರರಿಗೆ ಅತ್ಯುತ್ತಮ ಸಂದೇಶ ರವಾನಿಸಿದಂತೆ ಎಂದರು.
ಈ ಸಂದರ್ಭದಲ್ಲಿ ರೈತಸಂಘದ ಮುಖಂಡ ಶಂಭೂನಹಳ್ಳಿ ಯಜಮಾನ್ ದೇವೇಗೌಡ, ಲಯನ್ ಜಯರಾಂ ಅಭಿಮಾನಿಗಳಾದ ಶಂಭೂನಹಳ್ಳಿ ಬಲರಾಂ, ಕಟ್ಟೇರಿ ಪ್ರಸನ್ನ ಕುಮಾರ್, ಟಿಎಸ್ ಛತ್ರ ವಿಜಯಕುಮಾರ್, ಮತ್ತು ಮಂಜು ಅವರೂ ಸಹ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್, ಪುರಸಭೆ ಸದಸ್ಯ ಆರ್.ಸೋಮಶೇಖರ್ ಮತ್ತಿತರ ಜೆಡಿಎಸ್ ಮುಖಂಡರು ಲಯನ್ ಜಯರಾಂ ಮತ್ತು ಅವರ ಗೆಳೆಯರನ್ನು ಪಕ್ಷದ ಶಾಲುಹಾಕಿ ಗೌರವದಿಂದ ಬರಮಾಡಿಕೊಂಡರು.
ಜೆಡಿಎಸ್ ಮುಖಂಡರಾದ ಲಯನ್ ಕೃಷ್ಣ, ರಾಜಣ್ಣ, ಹೊಸೂರು ರಮೇಶ್, ಬಲರಾಮು, ಬಿವೈ ಬಾಬು, ಹೊಸಕೋಟೆ ಪುಟ್ಟಣ್ಣ ಮುಂತಾದವರು ಇದ್ದರು.  
   
 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು