ವರದಿ : ನಿಷ್ಕಲ ಎಸ್. ಮೈಸೂರು
ಮೈಸೂರು : ಕಬಾಬ್ ಅಂಗಡಿ ಇಟ್ಟುಕೊಂಡು ಬದುಕು ಕಟ್ಟಿಕೊಂಡಿದ್ದ ವ್ಯಕ್ತಿಯೊಬ್ಬನ ಯುಪಿಐ ಖಾತೆಗೆ ಕನ್ನ ಹಾಕಿರುವ ವಂಚಕರು ಆನ್‌ಲೈನ್ ಮೂಲಕ ೧.೪೩ ಲಕ್ಷ ರೂ. ವಂಚನೆ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಿನಕಲ್ ಸುರೇಶ್ ಎಂಬವರು ವಂಚನೆಗೆ ಒಳಗಾದ ವ್ಯಕ್ತಿ, ಕಳೆದ ಡಿಸೆಂಬರ್ ೨೫ ರಂದು ತಮ್ಮ ವಾಟ್ಸಾಪ್ ಖಾತೆಗೆ ಬಂದ ಒಂದು ಮೆಸೆಜನ್ನು ಒತ್ತಿದ ಕೂಡಲೇ ಎರಡು ಬಾರಿ ಒಟ್ಟು ೧.೪೩ ಲಕ್ಷ ರೂ ಹಣ ಮಾಯವಾಗಿದೆ.
ವ್ಯಾಪಾರದ ಗುಂಗಿನಲ್ಲಿದ್ದ ಸುರೇಶ್ ತಮ್ಮ ಬ್ಯಾಂಕಿನ ಖಾತೆಯಿಂದ ೧.೪೩ ಲಕ್ಷ ರೂ ಹಣ ಬೇರೆಯವರಿಗೆ ಸಂದಾಯ ಆಗಿರುವ ಬಗ್ಗೆ ಮಾಹಿತಿ ಸಿಕ್ಕಿ ಹೌಹಾರಿದ್ದಾರೆ. ಖದೀಮರು ಸುರೇಶ್ ಅವರ ಖಾತೆಯಲ್ಲಿ ಕೇವಲ ೩೦೦ ರೂ. ಉಳಿಸಿ ಉಳಿದ ಹಣವನ್ನು ದೋಚಿದ್ದಾರೆ. ಈ ಬಗ್ಗೆ ಸುರೇಶ್ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ. ವಂಚಕನ ಖಾತೆಯನ್ನು ಅಮಾನತ್ತು ಮಾಡಲಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಒಂದು ವೇಳೆ ಆತನ ಖಾತೆಯಲ್ಲಿ ಹಣ ಇದ್ದರೆ ಖಂಡಿತಾ ನಿಮ್ಮ ಹಣ ವಾಪಸ್ ಸಿಗುತ್ತದೆ ಎಂಬ ಭರವಸೆಯಲ್ಲಿ ಪೊಲೀಸರು ನೀಡಿದ್ದಾರೆಂದು ಸುರೇಶ್ ಹೇಳಿದರು.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿಯ ನಿಕಟಪೂರ್ವ ಬ್ಲಾಕ್ ಅಧ್ಯಕ್ಷ ಕೆ.ಎಂ.ಅನುರಾಜ್ ಮಾತನಾಡಿ, ಬಹುತೇಕ ಸಣ್ಣ ವ್ಯಾಪಾರಿಗಳು ಅನಕ್ಷರಸ್ತರಾಗಿದ್ದು, ತಮಗೆ ಬರುವ ಮೆಸೆಜ್ ಬಗ್ಗೆ ನಿಖರ ಮಾಹಿತಿ ಇರುವುದಿಲ್ಲ. ವಂಚಕ ಮೊದಲು ಸುರೇಶ್ ಖಾತೆಗೆ ಒಂದು ರೂಪಾಯಿ ಕಳಿಸಿ ನಂತರ ಆಪ್ ಹಾಕಿ ಕ್ಲಿಕ್ ಮಾಡಲು ಹೇಳಿದ್ದಾನೆ. ಸುರೇಶ್ ಗೊತ್ತಾಗದೆ ಆ ಆಪ್ ಒತ್ತಿದ ತಕ್ಷಣ ಖಾತೆಯಲ್ಲಿದ್ದ ಹಣ ಮಾಯವಾಗಿದೆ. ಪೊಲೀಸರು ಆನ್‌ಲೈನ್ ವಂಚನೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ದೂರದ ದೆಹಲಿ ಮತ್ತಿತರ ಕಡೆ ಕುಳಿತ ವಂಚಕರು ಗ್ರಾಮೀಣ ಪ್ರದೇಶದ ಜನರಿಗೆ ಏನೇನೋ ಆಮೀಷಗಳನ್ನು ಒಡ್ಡಿ ಈ ರೀತಿ ವಂಚನೆ ಮಾಡುತ್ತಿದ್ದಾರೆ. ಸೂಕ್ತ ಪರಿಶೀಲನೆ ನಡೆಸಿ ಸುರೇಶ್ ಅವರ ಹಣವನ್ನು ವಾಪಸ್ ಕೊಡಿಸುವ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳಬೇಕು. ಜನ ಸಾಮಾನ್ಯರಿಗೆ ಆನ್‌ಲೈನ್ ವಂಚನೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಒತ್ತಾಯಿಸಿದರು.