ಬಳ್ಳಾರಿ ಘರ್ಷಣೆ : ಮೃತ ವ್ಯಕ್ತಿಯ ಕುಟುಂಬದವರಿಗೆ 1 ಕೋಟಿ ರೂ. ಪರಿಹಾರ ನೀಡುವಂತೆ ರೈತಬಣದ ಅಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಆಗ್ರಹ


 ವರದಿ: ನಿಷ್ಕಲ ಎಸ್., ಮೈಸೂರು

ಮೈಸೂರು : ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಅಂಗವಾಗಿ ಗುರುವಾರ ರಾತ್ರಿ ಬ್ಯಾನರ್ ಕಟ್ಟುವ ವಿಚಾರದಲ್ಲಿ ಬಳ್ಳಾರಿ ನಗರದ ಹವಂಬಾವಿಯಲ್ಲಿ ನಡೆದ ಘರ್ಷಣೆಯಲ್ಲಿ ಅಮಾಯಕ ಯುವಕನೊಬ್ಬ ಮೃತನಾಗಿದ್ದು, ಪೊಲೀಸರು ಕೂಡಲೇ ರಿವಾಲ್ವಾರ್ ಅಮಾನತ್ತು ಪಡಿಸಿಕೊಳ್ಳಬೇಕು. ಸರ್ಕಾರ ಗುಂಡು ಹಾರಿಸಿದ ವ್ಯಕ್ತಿಯ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಮೃತ ವ್ಯಕ್ತಿಯ ಕುಟುಂಬದವರಿಗೆ ಒಂದು ಕೋಟಿ ರೂ ತಾತ್ಕಾಲಿಕ ಪರಿಹಾರ ನೀಡಬೇಕೆಂದು ಕರ್ನಾಟಕ ರಾಜ್ಯ ರೈತಸಂಘ(ರೈತಬಣ)ದ ಅಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಆಗ್ರಹಿಸಿದರು.

ಶುಕ್ರವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ,

ಕೆಲವು ರಾಜಕಾರಣಿಗಳು ಪಿಸ್ತೂಲನ್ನು ಆಟಿಕೆಯ ವಸ್ತು ಎಂದುಕೊಂಡಿದ್ದಾರೆ. ಪರಿಸ್ಥಿತಿ ನಿಭಾಯಿಸುವ ಜವಾಬ್ದಾರಿ ಪೊಲೀಸರಿಗೆ ಇದ್ದ ಮೇಲೆ ಭರತ್‍ರೆಡ್ಡಿ ಅಂಗರಕ್ಷಕ ಎನ್ನಲಾದ ವ್ಯಕ್ತಿ ಗುಂಡು ಹಾರಿಸುವ ಅವಶ್ಯಕತೆ ಇರಲಿಲ್ಲ, ಈ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಯಾವುದೇ ಪಕ್ಷಪಾತ ಮಾಡದೆ ತಪ್ಪಿತಸ್ತರನ್ನು ಶಿಕ್ಷೆಗೆ ಒಳಪಡಿಸುವಂತೆ ನೋಡಿಕೊಳ್ಳಬೇಕು. 

ಈಗಾಗಲೇ ಮಾಜಿ ಸಚಿವರಾದ ಜನಾರ್ಧನ ರೆಡ್ಡಿ, ಶ್ರೀರಾಮುಲು ಸೇರಿದಂತೆ 11 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಪರಿಸ್ಥಿತಿ ತಣ್ಣಗಾಗುವ ತನಕ ಪೊಲೀಸ್ ಬಂದೋಬಸ್ತ್ ಮಾಡಬೇಕು ಎಂದು ಆಗ್ರಹಿಸಿದರು.

ಬಳ್ಳಾರಿ ಪ್ರವಾಸಿ ತಾಣವಾಗಿದೆ. ದಿನನಿತ್ಯ ಸಾವಿರಾರು ಪ್ರವಾಸಿಗರು ಬಳ್ಳಾರಿಗೆ ಬರುತ್ತಾರೆ. ಅವರ ರಕ್ಷಣೆಯ ಬಗ್ಗೆಯೂ ಸಾರ್ವಜನಿಕರಲ್ಲಿ ಅನುಮಾನ ಮೂಡಿದೆ. ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಅಂಗವಾಗಿ ಗುರುವಾರ ರಾತ್ರಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿ ರೆಡ್ಡಿ ಬಣಗಳ ನಡುವೆ ಘರ್ಷಣೆ ನಡೆದಿದೆ. ಭರತ್ ರೆಡ್ಡಿ ಬೆಂಬಲಿಗರು ಜನಾರ್ಧನ ರೆಡ್ಡಿ ಅವರ ಮನೆಯ ಮುಂಭಾಗ ಬ್ಯಾನರ್ ಅಳವಡಿಸಲು ಮುಂದಾಗಿದ್ದರು. ಇದಕ್ಕೆ ಜನಾರ್ಧನ ರೆಡ್ಡಿ ಅಭಿಮಾನಿಗಳು ಮತ್ತು ಬೆಂಬಲಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಬ್ಯಾನರ್ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ ಕೆಲವೇ ಕ್ಷಣಗಳಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಈ ವೇಳೆ ಎರಡು ತಂಡಗಳ ನಡುವೆ ಕಲ್ಲು ತೂರಾಟ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಪೆÇಲೀಸರು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ್ದಾರೆ ಎನ್ನಲಾಗಿದೆ. ಸದ್ಯ ಘಟನೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಹವಂಬಾವಿ ಏರಿಯಾದಲ್ಲಿ ಹೆಚ್ಚಿನ ಪೆÇಲೀಸ್ ಬಂದೋಬಸ್ತ್ ಸಹ ನಿಯೋಜಿಸಲಾಗಿದೆ. ಆದರೇ ಸರ್ಕಾರ ಯಾವುದೇ ಪಕ್ಷಪಾತ ಮಾಡದೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂಬುದೇ ರೈತಸಂಘದ ಆಗ್ರಹ ಎಂದರು.