ಮೇಲುಕೋಟೆ ಕ್ಷೇತ್ರದ ನೀರಾವರಿ ಯೋಜನೆಗಳು ಪುಟ್ಟರಾಜು ಗೆಲುವಿನ ದಾರಿ ದೀಪಗಳಾಗಲಿವೆ: ಲಯನ್ ಎಲ್.ಕೆ.ಜಯರಾಂ

 

ಪಾಂಡವಪುರ : ಪ್ರತಿಯೊಬ್ಬ ಮತದಾರರೂ ತಮ್ಮ ಊರು, ಪಂಚಾಯ್ತಿ ಮತ್ತು ತಾಲೂಕು ಅಭಿವೃದ್ಧಿ ಆಗಬೇಕು ಎಂದು ಬಯಸುತ್ತಾರೆ. ಒಂದು ವೇಳೆ ಮತದಾರರ ಬಯಕೆ ಇದೇ ಆದಲ್ಲಿ ಅವರು ಖಂಡಿತಾ ಶಾಸಕ ಸಿ.ಎಸ್.ಪುಟ್ಟರಾಜು ಅವರನ್ನು ಮತ್ತೊಮ್ಮೆ ಬೆಂಬಲಿಸಬೇಕು ಎಂದು ಲಯನ್ ಎಲ್.ಕೆ.ಜಯರಾಂ ಹೇಳಿದರು.
ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಜನರಿಗೆ ಬೇಕಿರುವುದು ಅಭಿವೃದ್ಧಿ. ಹಾಗೆಂದ ಮೇಲೆ ಮೇಲುಕೋಟೆ ವಿಧಾನಸಭಾ ಕ್ಷೇತ್ರ ಶಾಸಕ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿದೆ ಅವರನ್ನು ವಿರೋಧಿಸುವ ಒಂದೇ ಒಂದು ಕಾರಣವೂ ಕ್ಷೇತ್ರದ ಜನರಲ್ಲಿಲ್ಲ. ಆಡಳಿತ ವಿರೋಧಿ ಅಲೆಯೂ ಇಲ್ಲಿಲ್ಲ. ಹಾಗಿದ್ದ ಮೇಲೆ ನಾವು ದುಡಿಯುವ ಎತ್ತನ್ನು ಕೊಟ್ಟಿಗೆಯಲ್ಲಿ ಕಟ್ಟುವುದಿಲ್ಲ ಅದನ್ನು ಮತ್ತೆ ತಯಾರು ಮಾಡಿ ಉಳುಮೆಗೆ ಬಿಡುತ್ತೇವೆ. ಪುಟ್ಟರಾಜು ಒಬ್ಬ ಸಮರ್ಥ ಕೆಲಸಗಾರ ಅವರನ್ನು ಕಳೆದುಕೊಂಡರೆ ನಮ್ಮ ಕ್ಷೇತ್ರ ಮತ್ತೆ 20 ವರ್ಷ ಹಿಂದಕ್ಕೆ ಹೋಗುತ್ತದೆ ಎಂದರು.
ನಮ್ಮದು ಕೃಷಿ ಆಧಾರಿತ ಕಸುಬು. ತಾಲೂಕಿನ ಮುಕ್ಕಾಲು ಭಾಗ ನೀರಾವರಿ ವಂಚಿತ ಪ್ರದೇಶವಾಗಿತ್ತು. ಹೇಮೆಯ ನೀರನ್ನು ನಮ್ಮ ತಾಲೂಕಿಗೆ ಹರಿಸುವ ಮೂಲಕ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ನಮ್ಮ ತಾಲೂಕಿನ ಅನ್ನದಾತರಿಗೆ ಆಪತ್ಬಾಂಧವರಾದರೇ, ಕ್ಷೇತ್ರದ ನಾಲ್ಕು ದಿಕ್ಕಿನಲ್ಲೂ ಹಲವಾರು ಏತ ನೀರಾವರಿ ಯೋಜನೆಗಳನ್ನು ಸಾಕಾರಗೊಳಿಸುವ ಮೂಲಕ ಶಾಸಕ ಸಿ.ಎಸ್.ಪುಟ್ಟರಾಜು ನಮ್ಮ ಕ್ಷೇತ್ರದ ಭಗೀರಥರಾಗಿದ್ದಾರೆ ಎಂದರು.
ಸಣ್ಣ ನೀರಾವರಿ ಇಲಾಖೆಯ ಘನತೆಯನ್ನು ಹೆಚ್ಚಿಸಿದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ತಾವು ಸಚಿವರಾಗಿದ್ದಾಗ ಮೇಲುಕೋಟೆ ಕ್ಷೇತ್ರಕ್ಕೆ 750 ಕೋಟಿ ರೂ.ಅನುದಾನ ನೀಡಿ ಇಡೀ ಕ್ಷೇತ್ರಕ್ಕೆ ನೀರುಣಿಸುವ ಬೃಹತ್ ಯೋಜನೆ ಕೈಗೆತ್ತಿಕೊಂಡರು. ಇದರಿಂದ ಸಾವಿರಾರು ರೈತರ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಗೆ ಬುನಾದಿ ಹಾಕಲಾಯಿತು. 
ನೀರಾವರಿ ವಂಚಿತ ಚಿನಕುರಳಿ ಮತ್ತು ಮೇಲುಕೋಟೆ ಹೋಬಳಿಯ ಮಳೆ ಆಶ್ರಿತ ಬರಡು ಭೂಮಿಗಳು ಇಂದು ನಳನಳಿಸುತ್ತಿವೆ. ರೈತರು ಸಂತುಷ್ಟರಾಗಿದ್ದಾರೆ. ದುಡಿಯುವ ಕೈಗಳಿಗೆ ಕೆಲಸ ಸಿಕ್ಕಿದೆ. ಇದನ್ನೆ ಅಭಿವೃದ್ಧಿ ಎನ್ನುತ್ತಾರೆ ಎಂದು ಜಯರಾಂ ವಿವರಿಸಿದರು.
193 ಕೋಟಿ ವೆಚ್ಚದ ಬಳಘಟ್ಟ ಏತ ನೀರಾವರಿ ಯೋಜನೆ, ಬಳೆ ಅತ್ತಿಗುಪ್ಪೆ ಏತ ನೀರಾವರಿ, ಸುಂಕಾತೊಣ್ಣೂರು ಏತ ನೀರಾವರಿ, ಬೇಬಿ ಬೆಟ್ಟದ ಏತ ನೀರಾವರಿ, ಶ್ಯಾದನಹಳ್ಳಿ ಏತ ನೀರಾವರಿ ಯೋಜನೆ, 188 ಕೋಟಿ ರೂ, ವೆಚ್ಚದ ದುದ್ದ ನೀರಾವರಿ ಯೋಜನೆಗಳನ್ನು ಶಾಸಕ ಪುಟ್ಟರಾಜು ಸಾಕಾರಗೊಳಿಸಿದ್ದಾರೆ. ಹೀಗೆ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಹಗಲಿರುಳು ದುಡಿಯುತ್ತಿರುವ ಪುಟ್ಟರಾಜು ಅವರಂತಹ ದುಡಿಯುವ ಎತ್ತನ್ನು ಕೊಟ್ಟಿಗೆಯಲ್ಲಿ ಕಟ್ಟುವುದರಿಂದ ನಮ್ಮ ಕಾಲ ಮೇಲೆ ನಾವೇ ಚಪ್ಪಡಿ ಎಳೆದುಕೊಂಡಂತೆ ಎಂದು ಜಯರಾಂ ಪ್ರತಿಪಾದಿಸಿದ್ದಾರೆ.
ಕರೋನಾ ಕಷ್ಟಕಾಲದಲ್ಲಂತೂ ಪುಟ್ಟರಾಜು ಸೇವೆ ಸ್ಮರಣೀಯವಾಗಿದೆ. ಲಾಕ್‍ಡೌನ್, ಸೀಲ್‍ಡೌನ್‍ನಂತಹ ಕಂಡು ಕೇಳರಿಯದ ಘಟನೆಗಳು ನಮ್ಮ ಮುಂದಿದ್ದವು. ದಿನಗೂಲಿ ನೌಕರರು, ಕೂಲಿ ಕಾರ್ಮಿಕರು, ದುಡಿಯುವ ವರ್ಗ ಕಂಗಾಲಾಗಿದ್ದ ಸಂದರ್ಭದಲ್ಲಿ ಅವರಿಗೆ ಆಹಾರ, ಔಷಧ, ವೈದ್ಯಕೀಯ ಸೇವೆಯನ್ನು ಸಮರ್ಥವಾಗಿ ನೀಡಿ ಕರೋನಾ ಸಂಕಷ್ಟವನ್ನು ಧೈರ್ಯವಾಗಿ ನಿಭಾಯಿಸಿದ್ದಾರೆ. ಸ್ವಂತ ತಂದೆ ತಾಯಿಯರ ಅಂತ್ಯ ಸಂಸ್ಕಾರಕ್ಕೆ ಮಕ್ಕಳು ಬಾರದ ಸಂದರ್ಭದಲ್ಲಿ ಮನೆಯ ಯಜಮಾನನ ಸ್ಥಾನದಲ್ಲಿ ನಿಂತು ಶಾಸಕರು ನಮ್ಮ ಹಿರಿಯರ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಇದು ಒಬ್ಬ ಜವಾಬ್ದಾರಿಯುತ ನಾಯಕನ ಕರ್ತವ್ಯ ಅದನ್ನು ಪುಟ್ಟರಾಜು ನಿಭಾಯಿಸಿದ್ದಾರೆ. ನಮಗೆ ಇಂತಹ ನಾಯಕನ ಅವಶ್ಯಕತೆ ಇದೆ. ಪುಟ್ಟರಾಜು ಗೆಲ್ಲಲು ಇಲ್ಲಿನ ನೀರಾವರಿ ಯೋಜನೆಗಳು ಸಾಕು. ನಮ್ಮ ಕ್ಷೇತ್ರದ ಮತದಾರರು ಬುದ್ದಿವಂತರು ಅವರು ಪುಟ್ಟರಾಜು ಅವರಂತಹ ಸಮರ್ಥ ನಾಯಕನ ಕೈ ಬಿಡುವುದಿಲ್ಲ ಎಂಬ ನಂಬಿಕೆ ನಮಗಿದೆ ಎಂದು ಜಯರಾಂ ಪುಟ್ಟರಾಜು ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು