ಶೋಷಿತ ಸಮುದಾಯಗಳ ಒಕ್ಕೂಟದಿಂದ ದರ್ಶನ್ ಪುಟ್ಟಣ್ಣಯ್ಯಗೆ ಬೆಂಬಲ
ಪಾಂಡವಪುರ : ದೇಶದ ಆರ್ಥಿಕ ನೀತಿ ಉಳ್ಳವರ ಪಾಲಾಗಿದ್ದು, ಶೋಷಿತ ವರ್ಗಗಳ ಜೀವನ ನಿರ್ವಹಣೆ ಕಷ್ಟವಾಗಿದೆ. ಈ ಕಾರಣದಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ತೊಲಗಬೇಕು ಎಂದು ಶೋಷಿತ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ಹೇಳಿದರು.
ಪಟ್ಟಣದ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಡಳಿತ ವಿರೋಧಿ ಧೋರಣೆಗಳಿಂದ ಶೋಷಿತ ಸಮುದಾಯದ ಅಭಿವೃಧಿ ಕುಂಠಿತವಾಗಿದೆ. ಸರ್ಕಾರದ ನೀತಿಗಳು ಉಳ್ಳವರ ಪರವಾಗಿವೆ. ಸರಿಯಾದ ರಾಜಕೀಯ ನಿರ್ಧಾರಗಳು, ಆರ್ಥಿಕ ನೀತಿ ನಿಯಮಗಳು ಜಾರಿಯಾಗದ ಕಾರಣ ಶೋಷಿತ ಸಮುದಾಯಗಳ ಉದ್ಧಾರ ಅಸಾಧ್ಯವಾಗಿದ್ದು, ಈ ನಿಟ್ಟಿನಲ್ಲಿ ತಮ್ಮ ಸಂಘಟನೆ ಪ್ರಸ್ತುತ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದು, ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರನ್ನು ನಾವು ಬೆಂಬಲಿಸಲಿದ್ದೇವೆ ಎಂದರು.
ದೇಶದಲ್ಲಿ ಆರ್ಥಿಕ ಸ್ಥಿತಿ ಕುಂಠಿತವಾಗಿದೆ. ಉದ್ಯೋಗವಿಲ್ಲದೇ ಕೊಟ್ಯಂತರ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಬೆಲೆ ಏರಿಕೆಯಿಂದ ತಳ ಸಮುದಾಯಗಳು ತತ್ತರಿಸಿವೆ. ಸರ್ಕಾರಗಳೇ ಕೋಮುವಾದ ಸೃಸ್ಟಿಸಿ ಜನರನ್ನು ಒಡೆದು ಆಳುತ್ತಿವೆ. ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಬರಬೇಕು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶೋಷಿತ ಸಮುದಾಯದ ರಾಜ್ಯ ಉಪಾಧ್ಯಕ್ಷ ಚಿಕ್ಕಬ್ಯಾಡರಹಳ್ಳಿ ಪ್ರಕಾಶ್, ಎ.ಎಸ್.ಕೃಷ್ಣ, ಶಿವಕುಮಾರ್, ನಾಗರಾಜು ಇದ್ದರು.
0 ಕಾಮೆಂಟ್‌ಗಳು