ಜೆಡಿಎಸ್ ಅಭ್ಯರ್ಥಿ ಪುಟ್ಟರಾಜುಗೆ ಕುರುಬ ಸಮುದಾಯದ ಬೆಂಬಲ ಘೋಷಣೆ

ಪಾಂಡವಪುರದಲ್ಲಿ ಬಸವ, ಕನಕ, ಅಂಬೇಡ್ಕರ್ ಭವನ ನಿರ್ಮಾಣದ  ಭರವಸೆ

ಪಾಂಡವಪುರ : ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಅವರಿಗೆ ತಾಲೂಕು ಕುರುಬ ಸಮುದಾಯದ ಮುಖಂಡರು ಬೆಂಬಲ ಘೋಷಿಸಿದರು.
ಪಟ್ಟಣದ ವೆಂಕಟೇಶ್ವರ ಸಮುದಾಯ ಭವನದಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ಅವರಿಗೆ ಕುರುಬ ಸಮುದಾಯದ ಜೆಡಿಎಸ್ ಮುಖಂಡರು ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸಮುದಾಯದ ಯುವ ಮುಖಂಡರಾದ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಯಶವಂತ್ ಕುಮಾರ್ ಹಾಗೂ ಪುರಸಭೆ ಸದಸ್ಯ ಕೃಷ್ಣ ಅವರು ಸಮುದಾಯದ ಸಾವಿರಾರು ಜನರ ಸಮ್ಮುಖದಲ್ಲಿ ಭಾರಿ ಚಪ್ಪಾಳೆ ಮತ್ತು ಘೋಷಣೆಯೊಂದಿಗೆ ಪುಟ್ಟರಾಜು ಅವರಿಗೆ ಬೆಂಬಲ ಘೋಷಿಸಿದರು. 

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಕೃಷ್ಣ ಅವರು ಮಾತನಾಡಿ, ಶಾಸಕ ಪುಟ್ಟರಾಜು ಅವರು ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕುರುಬ ಸಮುದಾಯಕ್ಕೆ ರಾಜಕೀಯ ಶಕ್ತಿ ನೀಡಿದ್ದಾರೆ. ನಮ್ಮ ಹಾಲುಮತ ಸಮುದಾಯದ ಅರ್ಹ ಮಹಿಳೆಯರು ಮತ್ತು ಯುವಕರನ್ನು ಗುರುತಿಸಿ ಗ್ರಾಮ ಪಂಚಾಯ್ತಿಗಳಲ್ಲಿ ಅಧ್ಯಕ್ಷ ಸ್ಥಾನ, ತಾಲ್ಲೂಕು ಪಂಚಾಯ್ತಿ, ಪುರಸಭೆ, ಪಿಎಲ್‍ಡಿ ಬ್ಯಾಂಕ್‍ಗಳಲ್ಲಿ ಅಧಿಕಾರ ಕೊಟ್ಟಿದ್ದಾರೆ. ಯಾವುದೇ ರೀತಿಯ ತಾರತಮ್ಯ ಮಾಡಿಲ್ಲ. ನಮ್ಮ ಸಮುದಾಯದ ದೇವಾಲಯಗಳ ನಿರ್ಮಾಣಕ್ಕೆ ಸಾಕಷ್ಟು ಅನುದಾನ ನೀಡಿ, ವೈಯುಕ್ತಿಕವಾಗಿಯೂ ಸಹಾಯ ಮಾಡಿದ್ದಾರೆ ಈ ಕಾರಣದಿಂದ ನಾವು ಪುಟ್ಟರಾಜು ಅವರಿಗೆ ಬೆಂಬಲ ನೀಡುತ್ತಿದ್ದೇವೆ ಎಂದರು.
ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಯಶವಂತ್ ಕುಮಾರ್ ಮಾತನಾಡಿ, ಕಳೆದ ಚುನಾವಣೆಯಲ್ಲಿ ರೈತಸಂಘದ ಅಭ್ಯರ್ಥಿ ನಮ್ಮ ಕ್ಷೇತ್ರದ ಜನರಿಗೆ ಹಲವಾರು ಭರವಸೆಗಳನ್ನು ನೀಡಿದ್ದರು. ಸೋಲಲಿ ಅಥವಾ ಗೆಲ್ಲಲಿ ಚುನಾವಣೆ ಬಳಿಕ ಕ್ಷೇತ್ರದಲ್ಲಿಯೇ ಉಳಿದು ಜನರ ಸಮಸ್ಯೆಗಳನ್ನು ಆಲಿಸುವುದಾಗಿ ಹೇಳಿದ್ದರು. ಆದರೇ, ಚುನಾವಣೆ ಮುಗಿದ ಬಳಿಕ ಅವರು ಮತ್ತೆ ಅಮೆರಿಕಾಕ್ಕೆ ಹೋಗಿ ಈಗ ಎರಡು ತಿಂಗಳಲ್ಲಿ ಬಂದು ಚುನಾವಣೆಗೆ ನಿಂತಿದ್ದಾರೆ. ಕ್ಷೇತ್ರದಲ್ಲಿ ಅವರ ಸೇವೆ ಶೂನ್ಯವಾಗಿದೆ. ಕರೋನಾ ಸಂದರ್ಭದಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ಅವರು ವಿವಿಧ ದುಡಿಯುವ ವರ್ಗದ ಜನರಿಗೆ ಆಹಾರದ ಕಿಟ್‍ಗಳನ್ನು ವಿತರಿಸಿ, ಸಾವಿರಾರು ಜನರ ರಕ್ಷಣೆ ಮಾಡಿದ್ದಾರೆ. ಸೋಂಕಿತರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿ ನೂರಾರು ಜನರ ಜೀವ ಉಳಿಸಿದ್ದಾರೆ. ಮೃತರಾದವರ ಅಂತ್ಯಸಂಸ್ಕಾರಕ್ಕೂ ನೆರವಾಗಿದ್ದಾರೆ. ಇಂತಹ ಜನಾನುರಾಗಿ ಶಾಸಕರು ಮುಂದಿನ ಅವಧಿಗೂ ಆಯ್ಕೆ ಆಗಬೇಕು ಈ ಕಾರಣದಿಂದ ಕುರುಬ ಸಮುದಾಯ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಅವರಿಗೆ ಬೆಂಬಲ ನೀಡುತ್ತಿದೆ. ಸಮುದಾಯದ ಜನರು ಪಟ್ಟಣದಲ್ಲಿ ಕನಕ ಭವನ ನಿರ್ಮಾಣ ಮಾಡಿಕೊಡಬೇಕೆಂಬ ಬೇಡಿಕೆ ಇಟ್ಟಿದ್ದು ಅದನ್ನು ಶಾಸಕರ ಗಮನಕ್ಕೆ ತರಲಾಗಿದೆ ಎಂದರು.
ಈ ಹಿಂದೆ ಪುಟ್ಟರಾಜು ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ಪಟ್ಟಣದ ಐಟಿಐ ಕಾಲೇಜಿನ ಎದುರು 1 ಎಕರೆ ಜಮೀನು ಕನಕ ಭವನಕ್ಕೆ ನಿಗದಿ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೇ ಮುಂದೆ ಶಾಸಕರಾಗಿದ್ದ ಪುಟ್ಟಣ್ಣಯ್ಯ ಅವಧಿಯಲ್ಲಿ ಕೆಲವು ಮುಖಂಡರ ದ್ವಂದ್ವ ನಿಲುವಿನಿಂದ ಕನಕ ಭವನ ನಿರ್ಮಾಣವಾಗಲಿಲ್ಲ. ಈ ಬಾರಿ ಕನಕ ಭವನ ನಿರ್ಮಿಸಲು ಶಾಸಕರಿಗೆ ವಿನಂತಿಸಲಾಗಿದೆ ಎಂದರು.
ಶಾಸಕ ಸಿ.ಎಸ್.ಪುಟ್ಟರಾಜು ಅವರು ಮಾತನಾಡಿ, ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕುರುಬ ಸಮುದಾಯದ ಬಂಧುಗಳು ನನ್ನನ್ನು ತಮ್ಮ ಮನೆಯ ಮಗನ ರೀತಿ ಎಲ್ಲಾ ಚುನಾವಣೆಗಳಲ್ಲೂ ಬೆಂಬಲಿಸಿ ಬೆಳೆಸಿದ್ದೀರಿ. ನನಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಶೀರ್ವಾದ ನಿರಂತರವಾಗಿದೆ.
ಹಲವು ಬಾರಿ ಅವರು ಪಾಂಡವಪುರಕ್ಕೆ ಆಗಮಿಸಿ ವಿವಿಧ ದೇವಾಲಂiÀiಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನೂ ನೆರವೇರಿಸಿದ್ದಾರೆ. ಮುಂದಿನ ಅವಧಿಗೆ ಶಾಸಕರಾದಾಗ ಪಟ್ಟಣದಲ್ಲಿ ಬಸವ ಭವನ, ಕನಕ ಭವನ ಮತ್ತು ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗುವುದು. ಇದರ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನೂ ಸಿದ್ದರಾಮಯ್ಯ ಅವರಿಂದಲೇ ಮಾಡಿಸುತ್ತೇನೆ. ಭವನಗಳ ನಿರ್ಮಾಣಕ್ಕೆ ಸರ್ಕಾರಿ ಜಾಗ ಸಿಗದಿದ್ದರೆ ನಾವೇ ನಮ್ಮ ತಂದೆ ತಾಯಿಯ ಹೆಸರಲ್ಲಿರುವ ಟ್ರಸ್ಟ್ ಮೂಲಕ ಖರೀದಿಸಿ ಮೂರು ಸುಸಜ್ಜಿತ ಹಾಗೂ ಭವ್ಯವಾದ ಭವನಗಳನ್ನು ನಿರ್ಮಿಸುತ್ತೇನೆ ಎಂದರು.
ಸಿದ್ದರಾಮಯ್ಯ ಹಾಗೂ ನನ್ನ ನಡುವಿನ ಭಾಂದವ್ಯ ಚನ್ನಾಗಿದೆ. 2004ರಲ್ಲಿ ನನಗೆ ಸಿದ್ದರಾಮಯ್ಯನವರೇ ಜೆಡಿಎಸ್ ಟಿಕೆಟ್ ಕೊಟ್ಟು ಗೆದ್ದು ಬಾ ಎಂದು ಹಾರೈಸಿದ್ದಾರೆ. ಅವರ ಹಾರೈಕೆಯಂತೆಯೇ ಗೆದ್ದು ಬಂದೆ. ಕ್ಷೇತ್ರದಲ್ಲಿ ವಿರೋಧಿಗಳು ಸೋಲಿನ ಭಯದಿಂದ ನನ್ನ ವಿರುದ್ದ ಅಪಪ್ರಚಾರ ಮಾಡುತ್ತಿದ್ದಾರೆ. ಕ್ಷೇತ್ರದ ಮತದಾರರು ಯಾವುದಕ್ಕೂ ಕಿವಿಗೊಡಬೇಡಿ, ಕ್ಷೇತ್ರದಲ್ಲಿ ಜೆಡಿಎಸ್ ಪರವಾಗಿ ಅಲೆ ಸೃಷ್ಠಿಯಾಗಿದೆ ಅಭಿವೃದ್ದಿಗಾಗಿ ಜನತೆ ನನಗೆ ಮತ ನೀಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಿಪಡಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ಅವರಿಗೆ ಕುರುಬ ಸಮುದಾಯದ ಮುಖಂಡರು ಕರಿ ಕಂಬಳಿಯನ್ನು ಹೊದಿಸಿ ಭಾರಿ ಗಾತ್ರದ ಹೂವಿನ ಹಾರ, ಮೈಸೂರು ಪೇಟ ತೊಡಿಸಿ ಗೌರವಿಸಿದರು.
ಇದಕ್ಕೂ ಮುನ್ನ ಶಾಸಕ ಪುಟ್ಟರಾಜು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. 
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ಗಿರಿಜಮ್ಮ, ಪುರಸಭೆ ಮಾಜಿ ಅಧ್ಯಕ್ಷೆ ತಾಯಮ್ಮ, ಜೆಡಿಎಸ್ ತಾಲೂಕು ಅಧ್ಯಕ್ಷ ಬೆಳ್ಳಾಳೆ ಮಲ್ಲೇಶ್, ಮನ್‍ಮುಲ್ ಮಾಜಿ ಅಧ್ಯಕ್ಷ ಕೆ.ವೈರಮುಡಿಗೌಡ, ಮುಖಂಡರಾದ ಸಿ.ಪಿ.ಶಿವರಾಜು, ಬೆಟ್ಟಹಳ್ಳಿ ಸ್ವಾಮಿ, ಬೇವುಕಲ್ಲು ಬಸವೇಗೌಡ, ಶಿವಣ್ಣ, ಸೋಮೇಗೌಡ, ಚಿಕ್ಕರಾಜು, ಸಾಕಮ್ಮ, ವಕೀಲ ರೇವಣ್ಣ ಮುಂತಾದವರು ಇದ್ದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು