ಕಾಂಗ್ರೆಸ್‍ಗೆ ಮಾರಾಟವಾಗಿರುವ ದಲಿತ ಮುಖಂಡರಿಂದ ಪುಟ್ಟರಾಜು ವಿರುದ್ಧ ಅಪಪ್ರಚಾರ : ಬೊಮ್ಮರಾಜು ಕಿಡಿ
ಏಪ್ರಿಲ್ 27, 2023
ಪಾಂಡವಪುರ ಪಟ್ಟಣದ ಖಾಸಗಿ ಹೋಟೆಲ್‍ನಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಸದಸ್ಯರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಪಾಂಡವಪುರ : ರಾಜ್ಯ ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಐಕ್ಯ ಹೋರಾಟ ಚಾಲನಾ ಸಮಿತಿಯಿಂದ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಮುಖ್ಯಸ್ಥ ಕನಗನಮರಡಿ ಬೊಮ್ಮರಾಜು ಕಿಡಿಕಾರಿದರು. ಪಟ್ಟಣದ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಮೇಲುಕೋಟೆ ಕ್ಷೇತ್ರದಲ್ಲಿ ದಬ್ಬಾಳಿಕೆ ದೌರ್ಜನ್ಯ ನಡೆಯುತ್ತಿವೆ. ಎಸ್‍ಸಿಪಿ, ಟಿಎಸ್‍ಪಿ ಹಣ ದುರ್ಬಳಕೆಯಾಗಿದೆ, ಅಂಬೇಡ್ಕರ್ ಭವನ ಅಪೂರ್ಣಗೊಂಡಿವೆ. ದಲಿತರ ಮತಗಳನ್ನು ಖರೀದಿಮಾಡಲಾಗುತ್ತಿದೆ ಎಂದು ದಸಂಸ ಮುಖಂಡರಾದ ಗುರುಪ್ರಸಾದ್ ಕೆರಗೂಡು, ಮಾವಳ್ಳಿ ಶಂಕರ್, ಇಂದೂಧರ ಹೊನ್ನಾಪುರ ಸೇರಿದಂತೆ ಹಲವು ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ಶಾಸಕ ಸಿ.ಎಸ್.ಪುಟ್ಟರಾಜು ವಿರುದ್ಧ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದ ವಿಚಾರ ಎಂದರು. ಯಾರದೋ ಮಾತು ಕೇಳಿಕೊಂಡು ಆರೋಪ ಮಾಡುವವರು ಮೊದಲು ಕ್ಷೇತ್ರದಲ್ಲಿ ಪ್ರವಾಸ ಮಾಡಿ, ಪರಿಶೀಲನೆ ನಡೆಸಿ ಸತ್ಯವನ್ನು ಅರಿತು ಮಾತನಾಡಬೇಕು. ದಬ್ಬಾಳಿಕೆ ದೌರ್ಜನ್ಯ ನಡೆದಿರುವುದಕ್ಕೆ ಯಾವುದೇ ದಾಖಲೆಗಳಿಲ್ಲ. ಇದ್ದರೆ ತನ್ನಿ, ಎಸ್‍ಸಿಪಿ, ಟಿಎಸ್‍ಪಿ ಹಣ ದುರ್ಬಳಕೆ ಆಗಿಲ್ಲ. ಸಮರ್ಪಕವಾಗಿ ಉಪಯೋಗವಾಗಿದೆ. ಈ ಹಿಂದೆ ಕ್ಷೇತ್ರದಲ್ಲಿ ನಾಲ್ಕೈದು ಬೋರ್‍ವೆಲ್ ಕೊರೆಸುವುದೇ ಕಷ್ಟವಾಗಿತ್ತು. ಶಾಸಕ ಸಿ.ಎಸ್.ಪುಟ್ಟರಾಜು ಅವರು 10 ಕೋಟಿ ಅನುದಾನದಲ್ಲಿ ದಲಿತರ ಜಮೀನುಗಳಿಗೆ 250ಕ್ಕೂ ಹೆಚ್ಚು ಬೋರ್‍ವೆಲ್ ಕೊರೆಸಿದ್ದಾರೆ. ಮೇಲುಕೋಟೆ ಕ್ಷೇತ್ರದಲ್ಲಿ ಸಾಕಷ್ಟು ಏತ ನೀರಾವರಿ ಯೋಜನೆಗಳು ಪೂರ್ಣಗೊಂಡಿವೆ. ದಲಿತರ ಮಕ್ಕಳು ಕೂಲಿಗಾಗಿ ವಲಸೆ ಹೋಗುತ್ತಿದ್ದುದು ತಪ್ಪಿದೆ. ವ್ಯವಸಾಯಕ್ಕೆ ನೀರು ಲಭ್ಯತೆ ಇರುವ ಕಾರಣ ದಲಿತ ಯುವಕರು ಕೃಷಿಕರಾಗಿ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಅಲ್ಲದೇ ಕೇವಲ 12 ಲಕ್ಷ ರೂ. ಹಣದಲ್ಲಿ ಚಿಕ್ಕದಾದ ಅಂಬೇಡ್ಕರ್ ಭವನ ನಿರ್ಮಿಸುವ ಬದಲು ಇಡೀ ಕ್ಷೇತ್ರದಲ್ಲಿ ಹಲವಾರು ಕಡೆ ಇನ್ನಿತರ ಅನುದಾನಗಳ ಮೂಲಕ ದೊಡ್ಡ ದೊಡ್ಡ ಸಮುದಾಯ ಭವನಗಳು ನಿರ್ಮಾಣವಾಗುತ್ತಿವೆ ಎಂದು ಸ್ಪಷ್ಟಪಡಿಸಿದರು. ಟಿಎಪಿಸಿಎಂಎಸ್ ನಿರ್ದೇಶಕ ಹಾಗೂ ವಕೀಲ ಒಕ್ಕೂಟದ ಮುಖಂಡ ಕಣಿವೆ ಯೋಗೇಶ್ ಮಾತನಾಡಿ, ಇಡೀ ಕ್ಷೇತ್ರದಲ್ಲಿ ದಲಿತರು ಇನ್ನಿತರೆ ಸಮುದಾಯದವರೊಂದಿಗೆ ಸೌಹಾರ್ಧತೆಯಿಂದ ಇದ್ದಾರೆ. ಯಾವುದೇ ಗಲಭೆ, ಜಗಳ ನಡೆದಿಲ್ಲ. ನೆಮ್ಮದಿಯಿಂದ ಇರುವ ತಾಲೂಕಿನಲ್ಲಿ ಗುರುಪ್ರಸಾದ್ ಕೆರಗೂಡು, ಇಂದೂಧರ ಹೊನ್ನಾಪುರ, ಮಾವಳ್ಳಿ ಶಂಕರ್ ಮುಂತಾದವರು ಬಂದು ಬೆಂಕಿ ಹಚ್ಚುವುದು ಬೇಡ. ಅಭಿವೃದ್ಧಿ ಬಗ್ಗೆ ಪ್ರಶ್ನೆ ಮಾಡಲು ನಾವುಗಳು ಕ್ಷೇತ್ರದಲ್ಲಿ ಬದುಕಿದ್ದೇವೆ. ನೀವು ಯಾರಿಗಾದರೂ ಮತ ಕೇಳಿ, ಪ್ರಚಾರ ಮಾಡಿ ಅದನ್ನು ಬಿಟ್ಟು ಅಪಪ್ರಚಾರ ಮಾಡಬೇಡಿ ಎಂದರು. ಕರೋನಾ ಸಂದರ್ಭದಲ್ಲಿ ಮನೆಯಲ್ಲಿಯೇ ಕುಳಿತಿದ್ದ ದುಡಿಯುವ ವರ್ಗದ ಸಾವಿರಾರು ಜನರಿಗೆ ಶಾಸಕ ಪುಟ್ಟರಾಜು ಅನ್ನವನ್ನು ಕೊಟ್ಟು ನಮ್ಮನ್ನು ಬದುಕಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸುವುದು, ಮೃತರಾದವ ಶವಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದ್ದಾರೆ. ಸ್ವಂತ ಮಕ್ಕಳೇ ತಮ್ಮ ತಂದೆ ತಾಯಿಯ ಅಂತ್ಯ ಸಂಸ್ಕಾರಕ್ಕೆ ಬಾರದೆ ದೂರ ಉಳಿದಿದ್ದ ಸಂದರ್ಭದಲ್ಲಿ ಸ್ವತಃ ಶಾಸಕ ಪುಟ್ಟರಾಜು ಸ್ಮಶಾನದಲ್ಲಿ ನಿಂತು ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಆಗ ನೀವೆಲ್ಲಾ ಎಲ್ಲಿದ್ದೀರಿ ಎಂದು ವ್ಯಂಗ್ಯವಾಡಿದರು. ಸುದ್ದಿಗೋಷ್ಠಿಯಲ್ಲಿ ಹೊಸಕೋಟೆ ಜವರಯ್ಯ, ಪುರಸಭೆ ಸದಸ್ಯರಾದ ಶಿವಕುಮಾರ್, ಚಂದ್ರು, ಮಾಜಿ ಸದಸ್ಯ ರಾಚಯ್ಯ, ಗ್ರಾಪಂ ಸದಸ್ಯರಾದ ಕೆಂಪರಾಜು, ಹೊಸೂರು ಸ್ವಾಮಿ, ಜಯಲಕ್ಷ್ಮಿ, ಮುಖಂಡರಾದ ಟೌನ್ ಚಂದ್ರು, ಬನ್ನಂಗಾಡಿ ಯೋಗೇಶ್, ಪ್ರಶಾಂತ, ಶಿವಸ್ವಾಮಿ, ಬಳೆ ಅತ್ತಿಗುಪ್ಪೆ ಸ್ವಾಮಿ, ಮಂಜು, ಧರ್ಮಾತ್ಮ ಮುಂತಾದವರು ಇದ್ದರು. ದಲಿತರ ಅಭಿವೃದ್ಧಿಗೆ ಪುಟ್ಟರಾಜು ಕೊಡುಗೆ ಅಪಾರ ಬೇಬಿ ಬೆಟ್ಟದಲ್ಲಿ ಕಾಂಗ್ರೆಸ್ ಮತ್ತು ರೈತಸಂಘ ಬೆಂಬಲಿತರ ಕ್ರಶರ್‍ಗಳೇ ಜಾಸ್ತಿ ಇವೆ. ಗಣಿಗಾರಿಕೆಯಿಂದ ಕೆಆರ್‍ಎಸ್ ಜಲಾಶಯಕ್ಕೆ ಅಪಾಯ ಎಂದಾಕ್ಷಣ ಶಾಸಕ ಸಿ.ಎಸ್.ಪುಟ್ಟರಾಜು ತಮ್ಮ ಕ್ರಶರ್‍ಗಳನ್ನು ಸ್ಥಳಾಂತರ ಮಾಡಿದ್ದಾರೆ. ವಿನಾಕಾರಣ ಅವರ ಮೇಲೆ ಆರೋಪ ಮಾಡುವುದು ತಪ್ಪು. ಬಡ ದಲಿತ ಮಕ್ಕಳ ಶಿಕ್ಷಣಕ್ಕೆ ಪುಟ್ಟರಾಜು ಅವರ ವೈಯುಕ್ತಿಕ ಕೊಡುಗೆ ಅಪಾರವಾಗಿದೆ. ಈ ಬಗ್ಗೆ ನಾವು ಚರ್ಚೆ ಮಾಡಲು ಸಿದ್ದರಿದ್ದೇವೆ. ಅಲ್ಪಹಳ್ಳಿ ಗೋವಿಂದಯ್ಯ ತಾಪಂ ಮಾಜಿ ಸದಸ್ಯ
ದಲಿತರಿಗೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿದೆ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ದಲಿತರಿಗೆ ಹೆಚ್ಚು ರಾಜಕೀಯ ಪ್ರಾಶಸ್ತ್ಯ ನೀಡಲಾಗಿದೆ. ಯಾವುದೇ ರೀತಿಯಲ್ಲಿ ಅಧಿಕಾರ ವಂಚನೆ ನಡೆದಿಲ್ಲ. ನಾನೊಬ್ಬ ದಲಿತನಾದರೂ ನನಗೆ ಎಪಿಎಂಸಿ ಉಪಾಧ್ಯಕ್ಷ ಮತ್ತು ಹಂಗಾಮಿ ಅಧ್ಯಕ್ಷರನ್ನಾಗಿ ಮಾಡುವಲ್ಲಿ ಪುಟ್ಟರಾಜು ಅವರ ಕೊಡುಗೆ ಅಪಾರವಾಗಿದೆ. ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಂ.ಎಸ್.ಜಗದೀಶ್
0 ಕಾಮೆಂಟ್‌ಗಳು