ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯೋಜನೆಗಳು ಜಾರಿ

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಡದಪುರ ಶಿವಣ್ಣ ವಿಶ್ವಾಸ : ಕುರುಬ ಸಮುದಾಯದಿಂದ ದರ್ಶನ್‍ಗೆ ಬೆಂಬಲ

ಪಾಂಡವಪುರ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹ ಜ್ಯೋತಿ ಮತ್ತು ಯುವನಿಧಿ ಜೊತೆಗೆ ಸ್ತ್ರೀಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಗಳನ್ನು ಮೊದಲ ಕ್ಯಾಬಿನೆಟ್ ಮೀಟಿಂಗ್‍ನಲ್ಲಿಯೇ ಜಾರಿ ಮಾಡುತ್ತಾರೆ. ಈ ಕಾರಣದಿಂದ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಗೆಲ್ಲಿಸಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಡದಪುರ ಶಿವಣ್ಣ ಹೇಳಿದರು.
ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ವಿವೇಕಾನಂದ ಮಂದಿರದ ಸಭಾಂಗಣದಲ್ಲಿ ದರ್ಶನ್ ಪುಟ್ಟಣ್ಣಯ್ಯ ಬೆಂಬಲಿತ ಹಾಲುಮತ ಸಮುದಾಯದವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪುಟ್ಟಣ್ಣಯ್ಯ ಅವರು ಕಾಲವಾದ ನಂತರ ದರ್ಶನ್ ಪುಟ್ಟಣ್ಣಯ್ಯ ಅವರ ಸ್ಥಾನವನ್ನು ತುಂಬಿ ರೈತ ಹೋರಾಟವನ್ನು ಮುನ್ನಡೆಸುತ್ತಿದ್ದಾರೆ. ಅವರು ರೈತಪರ ದನಿಯಾಗಿದ್ದು, ಈ ಕಾರಣದಿಂದ ಕಾಂಗ್ರೆಸ್ ಪಕ್ಷ ಮೇಲುಕೋಟೆ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ನಿಲ್ಲಿಸದೆ ದರ್ಶನ್ ಅವರಿಗೆ ಬೆಂಬಲ ಸೂಚಿಸಿದೆ. ದರ್ಶನ್ ಗೆಲುವು ರೈತರ ಗೆಲುವಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಇಲ್ಲಿ ದರ್ಶನ್ ಗೆಲುವು ಅನಿವಾರ್ಯವಾಗಿದೆ ಈ ನಿಟ್ಟಿನಲ್ಲಿ ಹಾಲುಮತ (ಕುರುಬ) ಸಮುದಾಯದವರು ದರ್ಶನ್ ಅವರನ್ನು ಬೆಂಬಲಿಸಿ ಎಂದು ಸಲಹೆ ನೀಡಿದರು.
ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಅನ್ನಭಾಗ್ಯ ಯೋಜನೆ ಮೂಲಕ ಬಡವರಿಗೆ ಅನ್ನಕೊಟ್ಟರು. ಕರೋನಾ ಸಂದರ್ಭದಲ್ಲಿ ಅನ್ನಭಾಗ್ಯ ಯೋಜನೆ ಲಕ್ಷಾಂತರ ಜನರ ಜೀವ ಉಳಿಸಿದೆ. ಆದರೇ, ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ನಿಂದ ಜನರ ಹೊಟ್ಟೆ ತುಂಬುತ್ತದೆಯೇ ಎಂದು ಲೇವಡಿ ಮಾಡಿದರು. 
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಹೆಚ್.ಎನ್.ರವೀಂದ್ರ ಅವರು ಮಾತನಾಡಿ, ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ 169 ಭರವಸೆಗಳ ಪೈಕಿ 165 ಭರವಸೆಗಳನ್ನು ಈಡೇರಿಸಿದೆ. ಮುಂದೆಯೂ ನಮ್ಮ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದ ತಕ್ಷಣ ಬಡವರ ನೆರವಿಗೆ ನಿಲ್ಲುತ್ತದೆ. ಈ ನಿಟ್ಟಿನಲ್ಲಿ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಜಿಪಂ ಮಾಜಿ ಸದಸ್ಯ ಎಚ್ ಮಂಜುನಾಥ್ ಮಾತನಾಡಿ, ಮೇಲುಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಸಮರ್ಥ ಅಭ್ಯರ್ಥಿಗಳು ಇದ್ದರೂ, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸಲಹೆ ಮತ್ತು ನಿರ್ದೇಶನದ ಮೇರೆಗೆ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬೆಂಬಲ ನೀಡಲಾಗಿದೆ. ಮುಂದೆಯೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹೊಂದಾಣಿಕೆ ಅಥವಾ ಮೈತ್ರಿ ಮುಂದುವರಿಯುತ್ತದೆ. ರೈತ ಸಂಘದ ಮುಖಂಡರು ಕಾಂಗ್ರೆಸ್ ಮುಖಂಡರ ಜತೆ ಸೌಹಾರ್ದತೆಯಿಂದ ಇದ್ದು, ಚುನಾವಣೆಯಲ್ಲಿ ಗೆಲ್ಲುವ ತಂತ್ರ ರೂಪಿಸಬೇಕು ಎಂದರು.
ಕಾರ್ಯಕ್ರಮವನ್ನು ಶ್ರೀ ಬೋಳೇನಹಳ್ಳಿ ಮಠದ ನಿಜಗುಣ ಸ್ವಾಮಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ರೈತಸಂಘದ ವರಿಷ್ಠ ನಾಯಕಿ ಸುನಿತಾ ಪುಟ್ಟಣ್ಣಯ್ಯ, ಜಿಪಂ ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ ಸಮಾಜ ಸೇವಕ ಬಿ.ರೇವಣ್ಣ, ಕೆಪಿಸಿಸಿ ಸದಸ್ಯ ಎಚ್.ತ್ಯಾಗರಾಜು, ಕುರುಬರ ಸಂಘದ ಜಿಲ್ಲಾಧ್ಯಕ್ಷ ಸುರೇಶ್, ಉಪಾಧ್ಯಕ್ಷ ಶ್ರೀನಿವಾಸ್, ಬಿ.ಕೆ.ರೇವಣ್ಣ, ತಾಲೂಕು ಅಧ್ಯಕ್ಷ ಹುಚ್ಚೇಗೌಡ, ಗೋಪಾಲ್, ಶ್ರೀನಿವಾಸ್, ಸಿ.ಸ್ವಾಮೀಗೌಡ, ಬನ್ನಂಗಾಡಿ ಗ್ರಾಪಂ ಉಪಾಧ್ಯಕ್ಷ ತಮ್ಮಯ್ಯ, ಮಂಜುನಾಥ್, ಬಿ.ಟಿ.ಶಿವಣ್ಣ, ಮಾಳಿಗೇಗೌಡ, ಮಾಕೇಗೌಡ, ಬೀರಪ್ಪ ಮುಂತಾದವರು ಇದ್ದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು