ಚುನಾವಣೆಯಲ್ಲಿ ಸದ್ದು ಮಾಡುತ್ತಿರುವ ಕುರುಡು ಕಾಂಚಾಣ : ದೇವನೂರು ಮಹಾದೇವ ವಿಷಾದ
ಏಪ್ರಿಲ್ 30, 2023
ಪಾಂಡವಪುರ : ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕುರುಡು ಕಾಂಚಾಣ ಸದ್ದು ಮಾಡುತ್ತಿದ್ದು, ಅದು ಮೈಸೂರಿನ ತನಕವೂ ಕೇಳುತ್ತಿದೆ ಎಂದು ಹೆಸರಾಂತ ಲೇಖಕ ದೇವನೂರು ಮಹಾದೇವ ಹೇಳಿದರು.
ಪಟ್ಟಣದ ರೈತಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣೆ ಹಿನ್ನೆಲೆ ಕ್ಷೇತ್ರದಲ್ಲಿ ಹಣದ ಹೊಳೆ ಹರಿಯುತ್ತಿದೆ. ಈ ಬಗ್ಗೆ ಕ್ಷೇತ್ರದೆಲ್ಲೆಡೆ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೇ, ಈಗ ಹಣ ಕೊಟ್ಟು ಮತ ಖರೀದಿಸುವ ಕಾಲ ಮುಗಿದಿದ್ದು, ಮತದಾರರು ಎಲ್ಲದಕ್ಕೂ ಪ್ರಶ್ನೆ ಮಾಡುವಷ್ಟು ಪ್ರಬುದ್ಧರಾಗಿದ್ದಾರೆ ಎಂದರು. ಮೇಲುಕೋಟೆ ಕ್ಷೇತ್ರದಲ್ಲಿ ಹರಿದಾಡುತ್ತಿರುವ ಕುರುಡು ಕಾಂಚಾಣ ಯಾರದ್ದು, ಅಥವಾ ಯಾವ ಪಕ್ಷಕ್ಕೆ ಸೇರಿದ್ದು ಎಂಬ ಪ್ರಶ್ನೆಗೆ ದೇವನೂರು ಉತ್ತರಿಸದೆ ಅದನ್ನು ಪತ್ರಕರ್ತರ ವಿವೇಚನೆಗೆ ಬಿಟ್ಟರು. ಕ್ಷೇತ್ರದಲ್ಲಿ ಮತದಾರರನ್ನು ಸೆಳೆಯಲು ಕೇವಲ ಜೆಡಿಎಸ್ ಪಕ್ಷ ಮಾತ್ರ ಹಣದ ಆಮಿಷ ನೀಡುತ್ತಿಲ್ಲ, ಕಾಂಗ್ರೆಸ್ ಬೆಂಬಲಿತರು ಮತ್ತು ಬಿಜೆಪಿ ಕೂಡ ಆಮಿಷ ಒಡ್ಡುತ್ತಿದೆಯಲ್ಲ ಎಂಬ ಪತ್ರಕರ್ತರ ಮಾತಿಗೆ ದೇವನೂರು ಸಮರ್ಥಿಸಿ ತಪ್ಪು ಯಾರು ಮಾಡಿದರೂ ತಪ್ಪು ಎಂದರು. ಮೇಲುಕೋಟೆ ಕ್ಷೇತ್ರದಲ್ಲಿ ಸರ್ಕಾರಿ ಶಿಕ್ಷಣ ದುರ್ಬಲವಾಗಿದೆ. ಶಾಸಕರು ತಮ್ಮ ಖಾಸಗಿ ಟ್ರಸ್ಟ್ ಹೆಸರಲ್ಲಿ ನಡೆಸುತ್ತಿರುವ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗಾಗಿ ಸರ್ಕಾರಿ ಶಾಲೆಗಳನ್ನು ದುಸ್ಥಿತಿಗೆ ತಳ್ಳುತ್ತಿದ್ದಾರೆ ಎಂದು ಆರೋಪಿಸಿದ ದೇವನೂರು ಅವರಿಗೆ ಮಂಡ್ಯ ಜಿಲ್ಲೆಯ ಹಿರಿಯ ರಾಜಕಾರಣಿಗಳಾದ ಕೆ.ವಿ.ಶಂಕರೇಗೌಡರು ಮಂಡ್ಯದಲ್ಲಿ ಮತ್ತು ಜಿ.ಮಾದೇಗೌಡರು ಕೆ.ಎಂ.ದೊಡ್ಡಿಯಲ್ಲಿ ನಡೆಸುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಆ ಭಾಗಗಳಲ್ಲಿ ಶೈಕ್ಷಣಿಕ ಕ್ರಾಂತಿ ಮೂಡಿದೆ. ಶಾಸಕ ಸಿ.ಎಸ್.ಪುಟ್ಟರಾಜು ತಮ್ಮ ಕ್ಷೇತ್ರದಲ್ಲೂ ಶೈಕ್ಷಣಿಕ ಕ್ರಾಂತಿ ಮೂಡಿಸಲು ಶಿಕ್ಷಣ ಸಂಸ್ಥೆ ನಡೆಸುವುದು ತಪ್ಪು ಎನ್ನುವುದಾದರೇ, ಶಂಕರೇಗೌಡರು, ಮಾದೇಗೌಡರು ಶಿಕ್ಷಣ ಸಂಸ್ಥೆ ನಡೆಸುತ್ತಿರುವುದು ತಪ್ಪಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ದೇವನೂರು ಮಾದೇಗೌಡರು, ಶಂಕರೇಗೌಡರು ಸೇವಾ ಮನೋಭಾವದಿಂದ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದಾರೆ. ಶಾಸಕರಾದವರು ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಬಲ ಪಡಿಸಲು ಮುಂದಾಗಬೇಕು ಎಂದು ಹೇಳಿದರು. ಪಾಂಡವಪುರದಲ್ಲಿ ಸರ್ಕಾರಿ ಪದವಿ ಕಾಲೇಜು ನಿರ್ಮಾಣಕ್ಕೆ 8.5 ಎಕರೆ ಜಮೀನು ಮಂಜೂರಾಗಿತ್ತು, 2.5 ಕೋಟಿ ಯುಜಿಸಿ ಹಣ ಮತ್ತು ಇತರೆ ಸರ್ಕಾರಿ ಅನುದಾನವೂ ಬಂದಿತ್ತು. ಆದರೇ, ಶಾಸಕರು ಪದವಿ ಕಾಲೇಜನ್ನು ಇಕ್ಕಟ್ಟಿನ ಜಾಗದಲ್ಲಿ ನಿರ್ಮಿಸಿದ್ದಾರೆ. 4 ವರ್ಷಗಳ ತನಕ ಸಿಡಿಸಿ ಕಮಿಟಿ ನಿರ್ಮಿಸಿರಲಿಲ್ಲ ಎಂದು ದೂರಿದರು. ಸುದ್ದಿಗೋಷ್ಠಿಯಲ್ಲಿ ಪ್ರೊ.ಸುಮಿತ್ರಾ ಬಾಯಿ, ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಕೆಪಿಸಿಸಿ ವಕ್ತಾರ ಟಿ.ಎಸ್.ಸತ್ಯಾನಂದ, ರೈತಸಂಘದ ಮುಖಂಡರಾದ ಎಚ್.ಎಲ್.ಪ್ರಕಾಶ್, ಪ್ರಸನ್ನ ಎನ್.ಗೌಡ, ಕಾಂಗ್ರೆಸ್ ಮುಖಂಡರಾದ ಸಿ.ಆರ್.ರಮೇಶ್, ಅಂದಾನಯ್ಯ, ದೊಡ್ಡ ವೆಂಕಟಯ್ಯ, ಅಂತನಹಳ್ಳಿ ಬಸವರಾಜು, ನಾಗರಾಜು ಮುಂತಾದವರು ಇದ್ದರು.
0 ಕಾಮೆಂಟ್‌ಗಳು