ದರ್ಶನ್ ಪುಟ್ಟಣ್ಣಯ್ಯ ವಿರುದ್ಧ ಅಪಪ್ರಚಾರ : ದೂರು ನೀಡುವ ಎಚ್ಚರಿಕೆ ನೀಡಿದ ರೈತಸಂಘ

ಪಾಂಡವಪುರ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್-ರೈತಸಂಘ ಬೆಂಬಲಿತ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿದ್ದು, ಈ ಬಗ್ಗೆ ಸೈಬರ್ ಠಾಣೆಯಲ್ಲಿ ದೂರು ನೀಡುವುದಾಗಿ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ರೈತಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ದರ್ಶನ್ ಪುಟ್ಟಣ್ಣಯ್ಯ ಅವರು ಮೇ,21 ರಂದು ಬೆಂಗಳೂರಿನಿಂದ ಅಮೆರಿಕಾಕ್ಕೆ ತೆರಳಲು ಈಸಿ ಫೈ ವಿಮಾನದ ಟಿಕೆಟ್ ಬುಕಿಂಗ್ ಮಾಡಿದ್ದಾರೆಂದು ನಕಲಿ ಟಿಕೆಟ್ ಸೃಷ್ಟಿಸಿ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಡಲಾಗಿದೆ. ಇದು ದರ್ಶನ್‍ಅವರು ಚುನಾವಣೆಯ ನಂತರ ಅಮೆರಿಕಾಕ್ಕೆ ತೆರಳುತ್ತಾರೆ. ಕ್ಷೇತ್ರದಲ್ಲಿ ಇರುವುದಿಲ್ಲ ಎಂಬ ಪ್ರಚಾರ ನಡೆಸುವ ಮೂಲಕ ಮತದಾರರಲ್ಲಿ ಗೊಂದಲ ಸೃಷ್ಟಿಸುವ ಹುನ್ನಾರ ನಡೆದಿದೆ ಇದು ಗುಣಾತ್ಮಕ ರಾಜಕಾರಣವಲ್ಲ ಎಂದರು.
ಇದೊಂದು ನಕಲಿ ಟಿಕೆಟ್ ಆಗಿದ್ದು, ಸಾಗರ್ ಗಚ್ಚಿ ಎಂಬವರ ಫೇಸ್‍ಬುಕ್ ವಾಲ್‍ನಲ್ಲಿ ಇದು ಲಭ್ಯವಾಗಿದೆ. ಇದನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವವರ ವಿರುದ್ಧ ಸೈಬರ್ ಠಾಣೆಯಲ್ಲಿ ದೂರು ಸಲ್ಲಿಸುತ್ತೇವೆ ಎಂದರು.
ಶುಕ್ರವಾರ ಪಟ್ಟಣದಲ್ಲಿ ನಡೆದ ಕುರುಬ ಸಮುದಾಯದ ಸಭೆಯಲ್ಲಿ ಪಿಎಲ್‍ಡಿ ಬ್ಯಾಂಕ್‍ಅಧ್ಯಕ್‍ಯಶವಂತ್ ಕುಮಾರ್ ಮಾತನಾಡಿ, ದರ್ಶನ್ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ಮತದಾರರ ಜತೆ ನಿಲ್ಲದೆ ಅಮೆರಿಕಾಕ್ಕೆ ಮೋಜು ಮಸ್ತಿ ಮಾಡಲು ಹೋದರು ಎಂದಿದ್ದಾರೆ. ದರ್ಶನ್ ತಮ್ಮ ಬದುಕು ನಡೆಸಲು ಹೋಗಿದ್ದಾರೆಯೇ ಹೊರತು ಮೋಜಿ ಮಸ್ತಿ ಮಾಡಲು ಹೋಗಿಲ್ಲ. ನೀವೂ ಕೂಡ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದೀರಿ ಅದನ್ನು ನಾವು ದಂಧೆ ಎನ್ನುವುದಿಲ್ಲ ಈ ಬಗ್ಗೆ ತಿಳಿದು ಮಾತನಾಡುವುದು ಉತ್ತಮ ಎಂದರು.
ರೈತ ಸಂಘದ ತಾಲೂಕು ಅಧ್ಯಕ್ಷ ಪಿ.ನಾಗರಾಜು ಅವರು ಮಾತನಾಡಿ, ಫೋಕಸ್ ಕರ್ನಾಟಕ ಎಂಬ ಯೂಟ್ಯೂಬ್ ಚಾನಲ್ ದರ್ಶನ್ ಕುರಿತು ಅಪಪ್ರಚಾರ, ಅವಹೇಳನ ಮಾಡುತ್ತಿದೆ. ಈ ಚಾನಲ್ ವಿರುದ್ಧವೂ ಪೊಲೀಸರಿಗೆ ದೂರು ನೀಡುತ್ತೇವೆ. ಕ್ಷೇತ್ರದ ಮತದಾರರು ಇದನ್ನು ಗಂಭೀರವಾಗಿ ಪರಿಗಣಿಸಿ ಚುನಾವಣೆಯಲ್ಲಿ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ನಮಗೂ ಪುಟ್ಟರಾಜು ವಿರುದ್ಧ ಮಾತನಾಡಲು ಹಲವಾರು ವಿಷಯಗಳಿವೆ. ಆದರೇ ಚುನಾವಣೆ ಮುಂದಿಟ್ಟುಕೊಂಡು ವೈಯುಕ್ತಿಕ ತೇಜೋವಧೆ ಮಾಡುವುದು ಬೇಡ ಎಂದು ಸುಮ್ಮನಿದ್ದೇವೆ. ಮಂಡ್ಯದಲ್ಲಿ 109 ದಿನ ರೈತರು ಪ್ರತಿಭಟನೆ ನಡೆಸಿದರು ಒಂದು ದಿನವೂ ಇವರು ಪ್ರತಿಭಟನಾ ಸ್ಥಳಕ್ಕೆ ಬರಲಿಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರೈತಸಂಘದ ಉಪಾಧ್ಯಕ್ಷ ಲಕ್ಷ್ಮೇಗೌಡ, ಮುಖಂಡರಾದ ಯೋಗೇಶ್, ವಕೀಲ ಸತೀಶ್, ಲೋಕೇಶ್ ಮುಂತಾದವರು ಇದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು