ಮತದಾರರೇ ನನ್ನ ಸ್ಟಾರ್ ಕ್ಯಾಂಪೇನರ್‍ಗಳು : ಇ.ಎನ್.ಕೃಷ್ಣ

ಮೇ.1 ರಂದು ಪಾಂಡವಪುರದಲ್ಲಿ ಬೃಹತ್ ರ್ಯಾಲಿ : ಸ್ವಗ್ರಾಮ ಇಂಗಲಕುಪ್ಪೆಯಲ್ಲಿ ಚುನಾವಣಾ ಪ್ರಚಾರಕ್ಕೆ ಇಂದು ಚಾಲನೆ

ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ರೈತಸಂಘ(ರೈತಬಣ)ದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಇ.ಎನ್.ಕೃಷ್ಣ ಶನಿವಾರ ಸ್ವಗ್ರಾಮ ಇಂಗಲಕುಪ್ಪೆಯಲ್ಲಿ ಪ್ರಚಾರಕ್ಕೆ ಚಾಲನೆ ನೀಡಿದರು.   

ಪಾಂಡವಪುರ : ನಾನು 20 ವರ್ಷದ ಹಿಂದೆಯೇ ಚಿತ್ರನಟ ದರ್ಶನ್ ಅವರನ್ನು ಕಾರ್ಯಕ್ರಮವೊಂದಕ್ಕೆ ಕರೆಸಿದ್ದೆ, ಈಗ ಮತದಾರರು ಪ್ರಬುದ್ಧರಾಗಿದ್ದಾರೆ, ಚಿತ್ರನಟರಿಂದ ಪ್ರಚಾರ ಮಾಡಿಸುವುದು ವರ್ಕೌಟ್ ಆಗುವುದಿಲ್ಲ. ನಮಗೇನಿದ್ದರೂ ರೈತರು, ಮತದಾರರೇ ನಮ್ಮ ಸ್ಟಾರ್ ಕ್ಯಾಂಪೇನರ್‍ಗಳು ಎಂದು ಕರ್ನಾಟಕ ರಾಜ್ಯ ರೈತಸಂಘದ (ರೈತಬಣ) ಅಭ್ಯರ್ಥಿ ಇ.ಎನ್.ಕೃಷ್ಣ ಹೇಳಿದರು.
ತಮ್ಮ ಸ್ವಗ್ರಾಮ ತಾಲೂಕಿನ ಇಂಗಲಕುಪ್ಪೆಯಲ್ಲಿ ಶನಿವಾರ ಬೆಳಗ್ಗೆ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೇ. 1ರಂದು ಪಾಂಡವಪುರ ಪಟ್ಟಣದಲ್ಲಿ ಬೃಹತ್ ಚುನಾವಣಾ ರ್ಯಾಲಿ ನಡೆಸಲಾಗುವುದು. ಪಟ್ಟಣದ ಮಹಾಂಕಾಳೇಶ್ವರಿ ದೇವಾಲಯದಿಂದ ಗಾರುಡಿ ಗೊಂಬೆ, ಪಟದ ಕುಣಿತ, ಡೊಳ್ಳು ಕುಣಿತ ಮುಂತಾದ ಜಾನಪದ ಕಲಾ ತಂಡಗಳ ಮೆರವಣಿಗೆಯೊಂದಿಗೆ ಪೊಲೀಸ್ ಸ್ಟೇಷನ್ ರಸ್ತೆ, ನಾಗಮಂಗಲ ರಸ್ತೆ ಮೂಲಕ ಸಾಗಿ ಐದು ದೀಪದ ವೃತ್ತದಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮ ನಡೆಸಲಾಗುವುದು ಎಂದರು. 
ಮೆರವಣಿಗೆಯಲ್ಲಿ ತಮ್ಮೊಂದಿಗೆ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ರೈತ ಮುಖಂಡರಾದ ಶಿವಾನಂದ ಮಾಗಳಿಹಾಳ್, ರವಿ ಪಾಟೀಲ್, ಚಂದ್ರಶೇಖರ ಹೆಮ್ಮಿಗೆ, ಮಹೇಶ್ವರ ಸ್ವಾಮಿ, ರವಿ ಪಾಟೀಲ್, ಕೆಂಪರಾಜ್ ಮುಂತಾದವರು ತೆರೆದ ವಾಹನದ ಮೂಲಕ ರ್ಯಾಲಿಯಲ್ಲಿ ಭಾಗವಹಿಸುವರು ಎಂದು ವಿವರಿಸಿದರು.
ಕ್ಷೇತ್ರದಲ್ಲಿ 11 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಎಲ್ಲರೂ ನನ್ನ ಎದುರಾಳಿಗಳು, ಚುನಾವಣೆಯಲ್ಲಿ ಯಾರನ್ನೋ ಸೋಲಿಸುವ, ಮತ್ಯಾರನ್ನೋ ಗೆಲ್ಲಿಸುವ ಇರಾದೆ ಇಲ್ಲ. ಕರ್ನಾಟಕದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು, ಬವಣೆಗಳನ್ನು ವಿಧಾನಸಭೆಯಲ್ಲಿ ಎತ್ತಿ ಹಿಡಿಯುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಕಬ್ಬು, ಭತ್ತ, ಹಾಲು ಸೇರಿದಂತೆ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಕೊಡಿಸುವುದು. ಗೊಬ್ಬರದ ಬೆಲೆಗಳನ್ನು ಕಡಿಮೆ ಮಾಡಿಸುವ ಬಗ್ಗೆ ಹೋರಾಟ ನಡೆಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ರೈತರ ಸಂಕಷ್ಟಗಳಿಗೆ ಯಾರೂ ಕೂಡ ಸಮರ್ಥವಾಗಿ ಪರಿಹಾರ ಒದಗಿಸುತ್ತಿಲ್ಲ. ತಾಲೂಕು ಕಚೇರಿಯಲ್ಲಿ ಲಂಚದ ಹಾವಳಿ ಹೆಚ್ಚಾಗಿದೆ. ವಿದ್ಯುತ್ ಸಮಸ್ಯೆ ನೀಗಿಸಬೇಕಿದೆ. ಈ ನಿಟ್ಟಿನಲ್ಲಿ ರೈತಪರ ದನಿಯಾಗಿ ವಿಧಾನಸಭೆ ಪ್ರವೇಶಿಸುವ ಸಲುವಾಗಿ ತಾವು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ಹೇಳಿದರು. 
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತಸಂಘ (ರೈತಬಣ)ದ ಉಪಾಧ್ಯಕ್ಷ ಚಂದ್ರಶೇಖರ ಹೆಮ್ಮಿಗೆ, ಬೋಳೇನಹಳ್ಳಿ ಕುಮಾರ, ರಮೇಶ, ರಘು ಮುಂತಾದವರು ಇದ್ದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು