ಮೇಲುಕೋಟೆ ಕ್ಷೇತ್ರದಲ್ಲಿ ರೈತರ 70 ಕೋಟಿ ಸಾಲ ಮನ್ನಾ

ಜೆಡಿಎಸ್‍ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಪರ ಭರ್ಜರಿ ಪ್ರಚಾರ ನಡೆಸಿದ ಅಶೋಕ್, ಶಿವರಾಜು

ಪಾಂಡವಪುರ: ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಅಗಿದ್ದ ಸಂಧರ್ಭದಲ್ಲಿ ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ರೈತರ 70 ಕೋಟಿ ಸಾಲವನ್ನು ಮನ್ನಾ ಮಾಡಲಾಗಿತ್ತು. ಇದು ರೈತರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಈ ಕಾರಣಕ್ಕಾಗಿ ರೈತರು ಜೆಡಿಎಸ್ ಪಕ್ಷವನ್ನು ಬೆಂಬಲಿಸಲಿದ್ದು, ಪುಟ್ಟರಾಜು ಅವರು ಮತ್ತೊಮ್ಮೆ ಭಾರಿ ಬಹುಮತದಿಂದ ಶಾಸಕರಾಗಿ ಆಯ್ಕೆಯಾಗಲಿದ್ದಾರೆ ಎಂದು ಜಿಪಂ ಮಾಜಿ ಸದಸ್ಯ ಸಿ.ಅಶೋಕ್ ಭರವಸೆ ವ್ಯಕ್ತಪಡಿಸಿದರು.


ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಪರವಾಗಿ ಪ್ರಚಾರ ನಡೆಸಿ ಅವರು ಮಾತನಾಡಿ, ಈಗಾಗಲೇ ಡಿಂಕಾ, ಬನ್ನಂಗಾಡಿ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರಚಾರ ನಡೆಸಿದ್ದೇವೆ. ಪ್ರಚಾರದ ವೇಳೆ ಮತದಾರರ ಮನೆ ಮನೆಗಳಿಗೆ ತೆರಳಿದಾಗ ರೈತರು ಕುಮಾರಸ್ವಾಮಿ ಅವರ ಜನಪರ ಕಾರ್ಯಕ್ರಮಗಳನ್ನು ನೆನಪಿಸಿಕೊಂಡು ನಮಗೆ ಮತ ನೀಡುವ ಭರವಸೆ ನೀಡಿದ್ದಾರೆ. ರಾಜ್ಯದಲ್ಲಿ ಮತ್ತೊಮ್ಮೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿ ಪಂಚರತ್ನ ಕಾರ್ಯಕ್ರಮ ಜಾರಿಗೆ ತರಲಿದ್ದಾರೆ. ಇದರಿಂದ ರಾಜ್ಯದ ರೈತರ ಕಲ್ಯಾಣವಾಗಲಿದೆ ಎಂದರು.
ಶಾಸಕ ಸಿ.ಎಸ್.ಪುಟ್ಟರಾಜು ಅವರ ಪುತ್ರ ಸಿ.ಪಿ.ಶಿವರಾಜು ಮಾತನಾಡಿ, ಶಾಸಕರು ನಿರಂತರವಾಗಿ ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಿ ಅವರಿಗೆ ಸಹಾಯ ಮಾಡುತ್ತಿದ್ದಾರೆ. ಕರೋನಾ ಸಂದರ್ಭದಲ್ಲಿ ಅವರ ಸೇವೆಯನ್ನು ಕ್ಷೇತ್ರದ ಸಾವಿರಾರು ಜನರು ಇಂದಿಗೂ ಸ್ಮರಿಸುತ್ತಾರೆ. ನಮ್ಮ ವಿರೋಧಿಗಳು ತಮ್ಮ ಯಾವುದೇ ಅಭಿವೃದ್ಧಿ, ಜನಪರ ಕಾರ್ಯಕ್ರಮಗಳ ವಿಚಾರಗಳನ್ನು ಮತದಾರರಿಗೆ ತಿಳಿಸಲು ಅಸಾಧ್ಯವಾದ ಕಾರಣ ಸುಳ್ಳು ಕತೆಗಳನ್ನು ಸೃಷ್ಟಿಸಿ ಅಪಪ್ರಚಾರಲ್ಲಿ ತೊಡಗಿದ್ದಾರೆ. ಇವರ ಆರೋಪಗಳಿಗೆ ಯಾವುದೇ ಸಾಕ್ಷ್ಯಾಧಾರ ಇಲ್ಲ. ಇವು ಸುಳ್ಳು ಆರೋಪಗಳು ಎಂದು ಜನರಿಗೆ ಗೊತ್ತು. ಶಾಸಕ ಸಿ.ಎಸ್.ಪುಟ್ಟರಾಜು ಅವರು 750 ಕೋಟಿ ರೂ. ವೆಚ್ಚದಲ್ಲಿ ಹಲವಾರು ಏತ ನೀರಾವರಿ ಯೋಜನೆಗಳನ್ನು ತಂದು ಬೆಂಗಾಡಿನಲ್ಲಿ ಚಿನ್ನದ ಬೆಳೆ ತೆಗೆಯಲು ರೈತರಿಗೆ ನೆರವಾಗಿದ್ದಾರೆ. ಅಲ್ಲದೇ 12 ಹೈಸ್ಕೂಲ್, ಹಲವಾರು ವಿದ್ಯುತ್ ಸಬ್ ಸ್ಟೇಷನ್, 3 ಪದವಿ ಕಾಲೇಜುಗಳು, 5 ಪಿಯುಸಿ ಕಾಲೇಜುಗಳನ್ನು ತಂದು ತಾಲೂಕಿನ ಸರ್ವಾಂಗೀಣ ಅಭಿವೃದ್ಧಿ ಮಾಡಿದ್ದಾರೆ. ಇವರ ಅಭಿವೃದ್ಧಿ ಕಾರ್ಯಗಳೇ ಗೆಲುವಿಗೆ ಶ್ರೀರಕ್ಷೆ ಆಗಲಿವೆ ಎಂದರು.

ಪ್ರಚಾರ ಪ್ರಾರಂಭಕ್ಕೂ ಮುನ್ನ ಗ್ರಾಮದ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಗ್ರಾಮದ ಹಿರಿಯ ಮುಖಂಡರ ಆಶೀರ್ವಾದ ಪಡೆದು ಪ್ರಚಾರ ಪ್ರಾರಂಭಿಸಲಾಯಿತು.
ಜಿಪಂ ಮಾಜಿ ಅಧ್ಯಕ್ಷೆ ಮಂಜುಳ ಪರಮೇಶ್, ತಾಪಂ ಮಾಜಿ ಅಧ್ಯಕ್ಷೆ ಪೂರ್ಣಿಮಾ, ತಾಪಂ ಮಾಜಿ ಸದಸ್ಯ ಗೋಪಾಲೇಗೌಡ, ಗ್ರಾಪಂ ಅಧ್ಯಕ್ಷೆ ಭವಾನಿ ಸುನಿಲ್, ನಿವೃತ್ತ ಪ್ರಾಧ್ಯಾಪಕ ಶಿವಣ್ಣ, ವಿಜಯ ಅಶೋಕ್, ಲಾವಣ್ಯ ಹರೀಶ್, ಮುಖಂಡರಾದ ಆರ್.ಎಂ.ಪುಟ್ಟರಾಜು, ಎಂ.ಆರ್.ಪರಮೇಶ್, ಡೇರಿ ಅಧ್ಯಕ್ಷ ನಾಗೇಗೌಡ, ರಘು, ಚಂದ್ರು, ಆದಿತ್ಯ, ರಾಜಣ್ಣ, ಗ್ರಾಪಂ ಮಾಜಿ ಅಧ್ಯಕ್ಷರು, ಸದಸ್ಯರು, ಗ್ರಾಮದ ಹಿರಿಯ ಮುಖಂಡರು ಇದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು