ಪಾಂಡವಪುರ: ದೇಶದಲ್ಲಿ ಅಭಿವೃದ್ಧಿ ಮತ್ತು ಕೋಮು ಸೌಹಾರ್ದತೆಗೆ ಬಿಜೆಪಿ ಅಪಾಯಕಾರಿಯಾಗಿದೆ ಎಂದು ರಾಜ್ಯ ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಐಕ್ಯ ಹೋರಾಟ ಚಾಲನಾ ಸಮಿತಿಯ ಮುಖ್ಯಸ್ಥ ಗುರುಪ್ರಸಾದ್ ಕೆರಗೂಡು ಹೇಳಿದರು.
ಪಟ್ಟಣದ ಖಾಸಗಿ ಹೋಟೆಲ್‍ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿ ನಿಲುವುಗಳನ್ನು ವಿರೋಧಿಸಿದ ವಯೋವೃದ್ಧ ಹೋರಾಟಗಾರರನ್ನು ಬಿಜೆಪಿ ಸರ್ಕಾರ ಬಂಧಿಸಿ ಜೈಲಿನಲ್ಲಿಟ್ಟಿದೆ. ಮಕ್ಕಳ ಹಕ್ಕುಗಳ ಪರವಾಗಿ ಮತ್ತು ಶೈಕ್ಷಣಿಕ ಹಕ್ಕುಗಳ ಪರವಾಗಿರುವ ನೂರಾರು ಹೋರಾಟಗಾರರನ್ನು ದೇಶ ದ್ರೋಹದ ಆರೋಪದ ಮೇಲೆ ಬಂಧಿಸಿ ವಿಚಾರಣೆ ಇಲ್ಲದೆ ಜೈಲಿನಲ್ಲಿಟ್ಟಿದೆ. ಇತ್ತೀಚೆಗಷ್ಟೆ ಡಾ.ಆನಂದ್ ತೇಲ್ತುಂಬ್ಡೆ ಅವರು ಜೈಲಿನಿಂದ ಹೊರ ಬಂದಿದ್ದಾರೆ. ಉತ್ತರ ಪ್ರದೇಶದಲ್ಲಿ ನಿರಂತರವಾಗಿ ದಲಿತರ ಮೇಲೆ ಅತ್ಯಾಚಾರ ಮತ್ತು ದೌರ್ಜನ್ಯಗಳು ನಡೆಯುತ್ತಿವೆ. ಮುಂದೆಯೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಇಲ್ಲೂ ಕೂಡ ಕೊಲೆ ಸುಲಿಗೆಗಳು ಹೆಚ್ಚಾಗುತ್ತವೆ ಈ ಕಾರಣದಿಂದ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಂದರು.
ಮೇಲುಕೋಟೆ ಕ್ಷೇತ್ರದಲ್ಲೂ ದಬ್ಬಾಳಿಕೆ ದೌರ್ಜನ್ಯಗಳು ನಡೆಯುತ್ತಿದ್ದು, ಈ ಕಾರಣಕ್ಕಾಗಿ ಇಲ್ಲಿ ನಾವು ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬೆಂಬಲ ನೀಡುತ್ತಿದ್ದೇವೆ ಎಂದರು.
ದಸಂಸ ಹಿರಿಯ ಮುಖಂಡ ಮಾವಳ್ಳಿ ಶಂಕರ್ ಮಾತನಾಡಿ, ಆರ್‍ಎಸ್‍ಎಸ್ ತನ್ನ ಗುಪ್ತ ಅಜೆಂಡಾವನ್ನು ದೇಶದ ಜನರ ಮೇಲೆ ಹೇರಲು ಮುಂದಾಗಿದೆ. ಇದು ಅಪಾಯಕಾರಿ ಬೆಳವಣಿಗೆ. ಉತ್ತರ ಪ್ರದೇಶದಲ್ಲಿ ನಡೆಯುತ್ತಿದ್ದ ಅತ್ಯಾಚಾರ, ಕೊಲೆ, ಸುಲಿಗೆ ಬುಲ್ಡೋಜರ್ ಪ್ರಯೋಗ ರಾಜ್ಯದಲ್ಲೂ ಕಾಲಿಟ್ಟಿದೆ.
ದುಡಿಯುವ ಜನರು ಗಂಭೀರವಾಗಿ ಆಲೋಚನೆ ಮಾಡಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು. ಈ ಕಾರಣದಿಂದ ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಮತ್ತು ರೈತಸಂಘ ಬೆಂಬಲಿತ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಪ್ರಸ್ತುತ ಚುನಾವಣೆಯಲ್ಲಿ ಬೆಂಬಲ ಸೂಚಿಸಿದ್ದೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎನ್. ವೆಂಕಟೇಶ್, ವಿ.ನಾಗರಾಜ್, ಎಂ.ಸೋಮಶೇಖರ್, ಇಂದೂಧರ ಹೊನ್ನಾಪುರ, ಎನ್.ಮುನಿಸ್ವಾಮಿ ಮುಂತಾದ ಡಿಎಸ್‍ಎಸ್ ರಾಜ್ಯ ಸಂಚಾಲಕರುಗಳು, ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಹರವು ಪ್ರಕಾಶ್ ಇದ್ದರು.
ಆರ್‍ಎಸ್‍ಎಸ್ ತನ್ನ ದುಷ್ಟ ಸಿದ್ದಾಂತವನ್ನು ದೇಶದ ಮೇಲೆ ಹೇರಲು ಹೊರಟಿದೆ. ಮೂಲತಃ ದಕ್ಷಿಣ ಕರ್ನಾಟಕದ ಒಕ್ಕಲಿಗ, ದಲಿತ ಮತ್ತಿತರ ಸಮುದಾಯದವರು ನಾಥ ಪಂತದವರು. ಈಶ್ವರನ ಆರಾಧಕರು. ಆದರೇ ದುರದೃಷ್ಟವಶಾತ್ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೇಸರೀಕರಣ ನಡೆಯುತ್ತಿದೆ. ಮಂಡ್ಯ ಜಿಲ್ಲೆ ತನ್ನ ಅಸ್ಮಿತೆಯನ್ನು ಕಳೆದುಕೊಳ್ಳುವ ಅಪಾಂiÀiಕಾರಿ ಬೆಳವಣಿಗೆ ನಡೆಯುತ್ತಿದೆ. ನಾವು ಈಗಲೇ ಎಚ್ಚರ ವಹಿಸದಿದ್ದರೇ ಮುಂದೆ ಅಪಾಯ ಕಟ್ಟಿಟ್ಟಬುತ್ತಿ.
ಮಾವಳ್ಳಿ ಶಂಕರ್, ದಸಂಸ ಮುಖಂಡ
ತ್ರಿಬಲ್ ಇಂಜಿನ್ ಸರ್ಕಾರ
ವಾಸ್ತವದಲ್ಲಿ ಇದು ಡಬಲ್ ಇಂಜಿನ್ ಸರ್ಕಾರವಲ್ಲ, ತ್ರಿಬಲ್ ಇಂಜಿನ್ ಸರ್ಕಾರ. ದಲ್ಲಾಳಿ ರಾಜಕಾರಣಿಗಳು, ಲೂಟಿಕೋರ ಉದ್ಯಮಿಗಳು, ತಾರತಮ್ಯ ನಯವಂಚನೆ, ಪುರೋಹಿತಶಾಹಿ ವ್ಯವಸ್ಥೆ ಇಲ್ಲಿ ಜಾರಿಯಲ್ಲಿದೆ.
ಪ್ರಶ್ನಿಸುವವರನ್ನು ಮಟ್ಟ ಹಾಕಲಾಗುತ್ತಿದೆ. ಈ ಕಾರಣಕ್ಕಾಗಿ ದೇಶದಲ್ಲಿ
ಸಂವಿಧಾನ ಉಳಿಸಲು, ದೇಶದಲ್ಲೆ ಅರಾಜಕತೆ ತಪ್ಪಿಸಲು, ಪ್ರಜಾಪ್ರಭುತ್ವ ಕಾಪಾಡಲು ನಾವು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕಿದೆ.
ಇಂದೂಧರ ಹೊನ್ನಾಪುರ, ದಸಂಸ ಹೋರಾಟಗಾರ
0 ಕಾಮೆಂಟ್‌ಗಳು