ಪಾಂಡವಪುರದಲ್ಲಿ ವಿಜಯೇಂದ್ರ ರೋಡ್ ಶೋ : ಡಾ.ಎನ್.ಎಸ್.ಇಂದ್ರೇಶ್ ಅವರನ್ನು ಗೆಲ್ಲಿಸಲು ಮನವಿ

ಪಾಂಡವಪುರ : ಬಿಜೆಪಿ ಯುವ ಘಟಕದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಶನಿವಾರ ಪಟ್ಟಣದಲ್ಲಿ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿ ಡಾ.ಎನ್.ಎಸ್.ಇಂದ್ರೇಶ್ ಪರ ಬಿರುಸಿನ ಪ್ರಚಾರ ನಡೆಸಿದರು.
ಬೆಳಗ್ಗೆ ಸುಮಾರು 11.45ಕ್ಕೆ ಪಟ್ಟಣದ ಐದು ದೀಪದ ವೃತ್ತದ ಬಳಿ ಆಗಮಿಸಿದ ವಿಜಯೇಂದ್ರ ಅವರಿಗೆ ಅಭಿಮಾನಿಗಳು ಭಾರಿ ಗಾತ್ರದ ಅನಾನಸ್ ಹಾರವನ್ನು ಹಾಕಿ, ಜಯ ಘೋಷಣೆಗಳನ್ನು ಕೂಗಿ ಸ್ವಾಗತಿಸಿದರು. ಬಳಿಕ ವಿಜಯೇಂದ್ರ ಅವರು, ಪಟ್ಟಣದ ಎನ್.ಎಂ.ರಸ್ತೆ, ಪೊಲೀಸ್ ಸ್ಟೇಷನ್ ರಸ್ತೆ ಮತ್ತು ಹಳೆ ಎಸಿ ಕಚೇರಿ ರಸ್ತೆಯಲ್ಲಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿ ಭರ್ಜರಿ ಪ್ರಚಾರ ಮಾಡಿದರು. 
ಬಳಿಕ ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಮೇಲುಕೋಟೆ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಉತ್ತಮ ನಾಯಕನ ಹುಡುಕಾಟದಲ್ಲಿದ್ದೆವು. ಅತ್ಯುತ್ತಮ ಸಂಘಟನಾಕಾರರಾದ ಡಾ.ಎನ್.ಎಸ್.ಇಂದ್ರೇಶ್ ಎಂಬ ಸಮರ್ಥ ಅಭ್ಯರ್ಥಿ ನಮಗೆ ಸಿಕ್ಕಿದ್ದಾರೆ. ಕೆ.ಆರ್.ಪೇಟೆ ಮೂಲಕ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ವಿಜಯ ಯಾತ್ರೆ ಪ್ರಾರಂಭಿಸಿದ್ದು, ಈಗ ಮೇಲುಕೋಟೆ ಕ್ಷೇತ್ರದಲ್ಲೂ ನಾವು ವಿಜಯ ಪತಾಕೆ ಹಾರಿಸಲಿದ್ದೇವೆ ಎಂದರು.

ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮತದಾರರಿಗೆ ತಿಳಿಸುವ ಮೂಲಕ ಇಲ್ಲಿ ಬಿಜೆಪಿ ಗೆಲ್ಲಿಸಲು ಶ್ರಮ ಪಡಬೇಕು. ಮೇ,13 ರಂದು ಬರುವ ಫಲಿತಾಂಶದಲ್ಲಿ ಇಂದ್ರೇಶ್ ರಾಜ್ಯದಲ್ಲಿಯೇ ಮೊದಲಿಗರಾಗಿ ಚುನಾಯಿತರಾಗಬೇಕು ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
ನಾನು ಈಗಾಗಲೇ ವರುಣಾ, ಹನೂರು, ನರಸೀಪುರ, ಕೊಳ್ಳೇಗಾಲ ಮುಂತಾದ ಪ್ರಚಾರ ಮುಗಿಸಿ ಬಂದಿದ್ದೇನೆ. ಕಡೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಸುಭದ್ರವಾಗಿದ್ದು, ನಾವು ಈ ಬಾರಿ ಇಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದೇವೆ ಎಂದರು.
ಬಿಜೆಪಿ ಅಭ್ಯರ್ಥಿ ಡಾ.ಇಂದ್ರೇಶ್ ಮಾತನಾಡಿ, ಭಾರತೀಯ ಜನತಾ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಬಿವೈ ವಿಜಯೇಂದ್ರ ಅವರು ಚುನಾವಣಾ ಪ್ರಚಾರ ನಡೆಸಿದ ಎಲ್ಲಾ ಕ್ಷೇತ್ರದಲ್ಲೂ ಬಿಜೆಪಿ
ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಅದರಂತೆ ಮೇಲುಕೋಟೆ ಕ್ಷೇತ್ರದಲ್ಲೂ ಈ ಬಾರಿ ಕಮಲ ಅರಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಮೈಲ್ಯಾಕ್ ಮಾಜಿ ಅಧ್ಯಕ್ಷ ರಘು ಕೌಟಿಲ್ಯ, ಮೇಲುಕೋಟೆ ಉಸ್ತುವಾರಿ ಸುನಿಲ್ ಕುಮಾರ್ ಯಾದವ್, ಮನ್‍ಮುಲ್ ನಿರ್ದೇಶಕಿ ರೂಪ, ರೈಸ್‍ಮಿಲ್ ತಮ್ಮಣ್ಣ, ಮೈ ಶುಗರ್ ಮಾಜಿ ಅಧ್ಯಕ್ಷ ಶಿವಲಿಂಗೇಗೌಡ, ತಾಲೂಕು ಅಧ್ಯಕ್ಷ ಅಶೋಕ್, ಮುಖಂಡರಾದ ಹೆಚ್.ಎನ್.ಮಂಜುನಾಥ್, ಶ್ರೀಧರ, ಎಸ್‍ಎನ್‍ಟಿ ಸೋಮಶೇಖರ್, ತಾಪಂ ಮಾಜಿ ಸದಸ್ಯ ಮಂಗಳ ನವೀನ್, ಚಿಕ್ಕಮರಳಿ ನವೀನ, ಡಾ.ಇಂದ್ರೇಶ್ ಪತ್ನಿ ಪರಿಮಳ ಇಂದ್ರೇಶ್, ಪುಷ್ಪ, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ನಿರಂಜನ ಬಾಬು, ಮರಿಸ್ವಾಮಿಗೌಡ, ಹೊನ್ನಗಿರಿಗೌಡ, ಮನ್‍ಮುಲ್ ಮಾಜಿ ನಿರ್ದೇಶಕ ಅಶೋಕ್, ಕೆ.ಎಲ್.ಆನಂದ್, ಸಂದೇಶ್, ಮಹಾಶಕ್ತಿ ಕೇಂದ್ರದ ಪದಾಧಿಕಾರಿಗಳು, ಇನ್ನಿತರರು ಇದ್ದರು.   
 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು