ಲಾರಿ-ಕಾರು ಅಪಘಾತ: ಪತ್ರಿಕಾ ವಿತರಕನ ದುರ್ಮರಣ ಮಗನ ಸಾವಿನ ಸುದ್ದಿ ತಿಳಿದೂ ಪತ್ರಿಕೆ ಹಂಚಿದ ತಂದೆ

ಮಂಡ್ಯ: ಲಾರಿ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಬಳಿ ಸೋಮವಾರ ಬೆಳಿಗ್ಗೆ ನಡೆದಿದೆ.
ಮಂಡ್ಯದ ಗುತ್ತಲು ಬಡಾವಣೆಯ ಕಾರು ಚಾಲಕ ಶಾಕಿಬ್ (25) ಹಾಗೂ ಪತ್ರಿಕಾ ವಿತರಕ ಸದ್ದಾಂ ಷರೀಪ್ (23) ಮೃತ ದುರ್ದೈವಿಗಳಾಗಿದ್ದು, ನಸೀರಾ (24), ನಿಖತ್ (20) ಹಾಗೂ ಜಹೀಬ್ (36) ಅವರುಗಳು ಗಾಯಗೊಂಡಿದ್ದಾರೆ.
ಸದ್ದಾಂ ಷರೀಫ್ ಇತರರು ಸಂಬಂಧಿಕರ ಬೀಗರ ಔತಣ ಕೂಟಕ್ಕೆಂದು ಬೆಂಗಳೂರಿಗೆ ಹೋಗಿ ವಾಪಸ್ಸು ಕಾರಿನಲ್ಲಿ ಮಂಡ್ಯಕ್ಕೆ ಬರುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ನಡೆದಿದೆ.
ತೀವ್ರವಾಗಿ ಗಾಯಗೊಂಡ ಕಾರು ಚಾಲಕ ಶಾಕೀಬ್ ಮತ್ತು ಸದ್ದಾಂ ಷರೀಫ್ ಅವರು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮೂವರನ್ನು ಮಂಡ್ಯದ ಮಿಮ್ಸ್ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಗನ ಸಾವಿನ ಸುದ್ದಿ ತಿಳಿದೂ ಪತ್ರಿಕೆ ಹಂಚಿದ ಹೃದ್ರೋಗಿ ತಂದೆ
ಮೃತ ಸದ್ದಾಂ ಅವರು ಮಂಡ್ಯ ನಗರದ ಗುತ್ತಲು ಬಡಾವಣೆಯ ಪತ್ರಿಕೆ ವಿತರಕ ಕಲೀಂ ಷರೀಫ್  ಅವರ ಪುತ್ರನಾಗಿದ್ದಾನೆ. ಕಲೀಂ ಷರೀಫ್ ಅವರಿಗೆ ಹೃದಯ ಶಸ್ತ್ರ ಚಿಕಿತ್ಸೆಯಾಗಿದ್ದರಿಂದ ಸದ್ದಾಂ ಅವರೇ ಮನೆ ಮನೆಗೆ ಪತ್ರಿಕೆಗಳ ವಿತರಣೆ ನೋಡಿಕೊಳ್ಳುತ್ತಿದ್ದರು.
ಪತ್ರಿಕೆಗಳನ್ನು ವಿತರಣೆ ಮಾಡುವ ಸಲುವಾಗಿಯೇ ಮಧ್ಯರಾತ್ರಿ ಬೆಂಗಳೂರಿನಿಂದ ಮಂಡ್ಯಗೆ ಹೊರಟಿದ್ದರು. ಅಪಘಾತದಲ್ಲಿ ಮಗ ಸತ್ತಿರುವ ಸುದ್ದಿ ತಿಳಿದ ಬಳಿಕವೂ ಕಲೀಂ ಷರೀಫ್ ಅವರು ಖುದ್ದು ತಾವೇ ಹೋಗಿ 600ಕ್ಕೂ ಹೆಚ್ಚು ಪತ್ರಿಕೆಗಳನ್ನು ವಿತರಣೆ ಮಾಡಿ, ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ. ಘಟನೆ ಸಂಬಂಧ ಮದ್ದೂರು ಸಂಚಾರಿ ಪೊಲೀಸರು ಪ್ರಕರಣ
ದಾಖಲಿಸಿಕೊಂಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು