ಅಸಮರ್ಪಕ ಬಸ್ ಸೌಲಭ್ಯ: ವಿದ್ಯಾರ್ಥಿಗಳಿಂದ ಬಸ್ ತಡೆದು ದಿಢೀರ್ ಪ್ರತಿಭಟನೆ
ಫೆಬ್ರವರಿ 21, 2023
ಶಾರುಕ್ ಖಾನ್, ಹನೂರು
ಹನೂರು:
ಸಾರಿಗೆ ಸಂಸ್ಥೆಯ ಬಸ್ಗಳು ಸಕಾಲಕ್ಕೆ
ಬಾರದ ಕಾರಣ ಶಾಲಾ ಕಾಲೇಜುಗಳಿಗೆ ಹೋಗಲು ತೊಂದರೆಯಾಗುತ್ತಿದೆ ಎಂದು ಆರೋಪಿಸಿ ನೂರಾರು
ವಿದ್ಯಾರ್ಥಿಗಳು ತಾಲೂಕಿನ ಕೌದಳ್ಳಿ ಗ್ರಾಮದಲ್ಲಿ ಕೆಎಸ್‌ಆರ್‌ಟಿಸಿ ಬಸ್ ತಡೆದು ಪ್ರತಿಭಟನೆ ನಡೆಸಿದರು.
ಮಂಗಳವಾರ ಬೆಳಿಗ್ಗೆ
ಬಸ್ ನಿಲ್ದಾಣದಲ್ಲಿ
ಜಮಾಯಿಸಿದ ನೂರಾರು ವಿದ್ಯಾರ್ಥಿಗಳು ಸಾರಿಗೆ ಸಂಸ್ಥೆಯ ಬಸ್ಗಳನ್ನು ತಡೆದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೌದಳ್ಳಿ
ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಿಂದ ದಿನನಿತ್ಯ
ನೂರಾರು ವಿದ್ಯಾರ್ಥಿಗಳು ಹನೂರು ಹಾಗೂ ಕೊಳ್ಳೇಗಾಲದ ಶಾಲಾ
ಕಾಲೇಜಿಗೆ ತೆರಳಲು ಬರುತ್ತಾರೆ. ಬೆಳಿಗ್ಗೆಯಿಂದಲೂ ಬಸ್ ಗಾಗಿ ಕಾದು
ಕುಳಿತರೂ ಬಸ್‌ಗಳು ಸಕಾಲಕ್ಕೆ ಬರುವುದಿಲ್ಲ. ಇದರಿಂದ ನಮ್ಮ ಶಿಕ್ಷಣ ಕಲಿಕೆಗೆ
ಹಿನ್ನಡೆಯಾಗಿದೆ. ತಡವಾಗಿ ಹೋದರೆ, ಶಾಲಾ ಕಾಲೇಜುಗಳಲ್ಲಿ ಸೇರಿಸುವುದಿಲ್ಲ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ
ಕ್ರಮಕ್ಕೆ ಮುಂದಾಗದೆ ತಮ್ಮ ಅಧಿಕಾರಿಗಳು ತಮ್ಮ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಪರೀಕ್ಷೆಗಳು
ಹತ್ತಿರ ಬರುತ್ತಿವೆ. ನಮಗೆ ತರಗತಿಗಳು ಮುಖ್ಯವಾಗಿವೆ.
ಈ ಸಮಯದಲ್ಲೂ ಈ ರೀತಿ ಮಾಡುವುದು
ಎಷ್ಟು ಸರಿ ಎಂದು ವಿದ್ಯಾರ್ಥಿಗಳು
ಪ್ರಶ್ನಿಸಿದರು.
ಸ್ಥಳಕ್ಕೆ
ಸಾರಿಗೆ ಸಂಸ್ಥೆಯ ಅಧಿಕಾರಿಗಳು ಬರಬೇಕು. ವಿದ್ಯಾರ್ಥಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು. ಅಲ್ಲಿಯ ತನಕ ನಾವು ಪ್ರತಿಭಟನೆ
ಮುಂದುವರಿಸುತ್ತೇವೆ ಎಂದು ಪಟ್ಟು ಹಿಡಿದರು.
0 ಕಾಮೆಂಟ್‌ಗಳು