ಆರೋಗ್ಯ ಹದಗೆಟ್ಟರೆ ಡೋಲಿಯೇ ಗತಿ : ದೊಡ್ಡಾಣೆ ಗ್ರಾಮಸ್ಥರ ಬದುಕು ಡೋಲಾಯಮಾನ

ಶಾರುಕ್ ಖಾನ್, ಹನೂರು
ಹನೂರು : ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ದೊಡ್ಡಾಣೆ ಗ್ರಾಮದಲ್ಲಿ ಯಾರಿಗಾದರೂ ಆರೋಗ್ಯ ಹದಗೆಟ್ಟರೆ ಡೋಲಿಯೇ ಗತಿಯಾಗಿದ್ದು, ಗ್ರಾಮಸ್ಥರ ಬದುಕು ಡೋಲಾಯಮಾನವಾಗಿದೆ. 
ತಾಲ್ಲೂಕಿನ ಮಹದೇಶ್ವರಬೆಟ್ಟ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ದಟ್ಟಾರಣ್ಯದ ನಡುವಿನ ದೊಡ್ಡಾಣೆ ಗ್ರಾಮದ ಸ್ಥಿತಿ ಕೇಳುವವರಿಲ್ಲವಾಗಿದೆ. ಆನೆ ತುಳಿತ, ಕಾಡು ಪ್ರಾಣಿಗಳ ದಾಳಿಗೆ ತುತ್ತಾದವರು, ಅನಾರೋಗ್ಯಕ್ಕೀಡಾದ ಜನರನ್ನು ದೂರದ ಮಾರ್ಟಳ್ಳಿ ಗ್ರಾಮದ ಆಸ್ಪತ್ರೆಗೆ ಸಾಗಿಸಲು ಯಾವುದೇ ವಾಹನ ಸೌಲಭ್ಯವಿಲ್ಲ. ಸಮರ್ಪಕ ರಸ್ತೆಯೂ ಇಲ್ಲ. ಕಾಡಿನ ಕಲ್ಲು, ಮುಳ್ಳುಗಳ ಕಾಲು ದಾರಿಯಲ್ಲಿ ಡೋಲಿ ಕಟ್ಟಿಕೊಂಡು ರೋಗಿಷ್ಟರನ್ನು ಇಬ್ಬರು ಹೊತ್ತುಕೊಂಡು ಸಾಗಿಸಬೇಕಾಗಿದೆ. 
ಇತ್ತೀಚೆಗೆ ದೊಡ್ಡಾಣೆ ಗ್ರಾಮದ ಹಿರಿಯರೊಬ್ಬರು ಅಸ್ವಸ್ಥಗೊಂಡ ಕಾರಣ ಇಡೀ ರಾತ್ರಿ ನಿದ್ದೆಗೆಟ್ಟು ಮರಕ್ಕೆ ಸೀರೆಯಲ್ಲಿ ಡೋಲಿ ಕಟ್ಟಿಕೊಂಡು 8 ಕಿ.ಮಿ. ದೂರದ ಮಾರ್ಟಳ್ಳಿ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ದೃಶ್ಯ ಹೃದಯ ಕಲಕುವಂತಿದೆ.
ಈ ಹಿಂದೆ ಅರಣ್ಯ ಇಲಾಖೆ ವತಿಯಿಂದ ನೀಡಲಾಗಿದ್ದ ವಾಹನ ಸೇವೆ ಸ್ಥಗಿತಗೊಳಿಸಲಾಗಿದೆ. ಇದಕ್ಕೆ ಕಾರಣ ತಿಳಿದು ಬಂದಿಲ್ಲ. ರಾತ್ರಿ ವೇಳೆ ಕಾಡು ಪ್ರಾಣಿಗಳ ದಾಳಿಯ ಭಯವಿದ್ದರೂ ಅಸ್ವಸ್ಥಗೊಂಡವರನ್ನು ಅನಿವಾರ್ಯವಾಗಿ ಆಸ್ಪತ್ರೆಗೆ ಕರೆತರಲು ಪ್ರಾಣವನ್ನು ಒತ್ತೆ ಇಡಬೇಕಿದೆ. ಈ ವಿಷಯ ಸ್ಥಳೀಯ ಜನಪ್ರತಿನಿಧಿಗಳಿಗೆ ಗೊತ್ತಿದ್ದರೂ ಅವರೇನೂ ತಲೆಕೆಡಿಸಿಕೊಂಡಿಲ್ಲ. ಕೂಡಲೇ ಸರ್ಕಾರ, ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.




 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು