ಜಮೀನು ವಿವಾದ: ಕಾರಿನಿಂದ ಗುದ್ದಿ ಮಹಿಳೆ ಕೊಲೆ, ನಾಲ್ವರು ಆರೋಪಿಗಳ ಬಂಧನ
ಜನವರಿ 05, 2023
ನಾಗಮಂಗಲ: ತಾಲ್ಲೂಕಿನ ಗಾಣಸಂದ್ರ ಗ್ರಾಮದಲ್ಲಿ ಭಾನುವಾರ ಸಂಜೆ ಜಮೀನಿನಲ್ಲಿ ಉಳುಮೆ ಮಾಡಿಸುತ್ತಿದ್ದ ರಾಮಕೃಷ್ಣಯ್ಯ ಅವರ ಪತ್ನಿ ಜಯಲಕ್ಷ್ಮಮ್ಮ (50) ಎಂಬುವರ ಮೇಲೆ ಕಾರು ಹರಿಸಿ ಕೊಲೆ ಮಾಡಿದ ಆರೋಪದಡಿ ನಾಲ್ವರು ಆರೋಪಿಗಳನ್ನು ಬೆಳ್ಳೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಗೌಡಯ್ಯ, ಅವರ ಮಗ ಅನಿಲ್ ಕುಮಾರ್, ಬಸವರಾಜು, ಗಿರೀಶ್ ಬಂಧಿತರು. ಇನ್ನೂ ನಾಲ್ವರು ಆರೋಪಿಗಳು ಪರಾರಿಯಾಗಿದ್ದು, ಅವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.
ಜಯಲಕ್ಷ್ಮಮ್ಮ ಅವರಿಗೆ 10 ವರ್ಷದ ಹಿಂದೆ ಗಾಣಸಂದ್ರ ಗ್ರಾಮದ ಸರ್ವೆ ನಂ. 84ರಲ್ಲಿ ಬಗರ್ ಹುಕ್ಕುಂ ಯೋಜನೆಯಡಿ ಸಾಗುವಳಿ ಜಮೀನು ಮಂಜೂರಾಗಿತ್ತು. ಆದರೆ, ಈ ಜಮೀನು ತಮಗೆ ಸೇರಬೇಕೆಂದು ಅದೇ ಗ್ರಾಮದ ಗೌಡಯ್ಯ ತಕರಾರು ತೆಗೆದಿದ್ದರು. ಈ ವಿಚಾರವಾಗಿ ಎರಡೂ ಕುಟುಂಬಗಳ ನಡುವೆ ವೈಷಮ್ಯ ಉಂಟಾಗಿತ್ತು. ‘ಬೆಂಗಳೂರಿನಲ್ಲಿ ನೆಲೆಸಿದ್ದ ಜಯಲಕ್ಷ್ಮಮ್ಮ ಉಳುಮೆ ಮಾಡಿಸುವ ಉದ್ದೇಶದಿಂದಲೇ ಭಾನುವಾರ ಗ್ರಾಮಕ್ಕೆ ಬಂದಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಗೌಡಯ್ಯ, ಅನಿಲ್ ಕುಮಾರ್ ಸೇರಿದಂತೆ 8 ಜನರ ಗುಂಪು ಜಗಳ ತೆಗೆದಿತ್ತು. ಉಳುಮೆ ಮಾಡುತ್ತಿದ್ದ ಟ್ರಾಕ್ಟರ್ ಚಾಲಕ ನವೀನ್ ಹಾಗೂ ಗಲಾಟೆ ಬಿಡಿಸಲು ಬಂದ ದೇವರಾಜು ಮೇಲೆ ಹಲ್ಲೆ ನಡೆಸಿದ್ದರು. ಈ ವೇಳೆ ಜಯಲಕ್ಷ್ಮಮ್ಮ ಅವರ ಮೇಲೆ ಕಾರು ಹರಿಸಿದ್ದು, ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಅಸುನೀಗಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಎಸ್‍ಪಿ ಯತೀಶ್, ಡಿವೈಎಸ್ಪಿ ಲಕ್ಷ್ಮೀನಾರಾಯಣ ಪ್ರಸಾದ್, ಸಿಪಿಐ ಸುಧಾಕರ್ ಭೇಟಿ ನೀಡಿ ಪರಿಶೀಲಿಸಿದರು.
0 ಕಾಮೆಂಟ್‌ಗಳು