ಕೌಟುಂಬಿಕ ಕಲಹ: ಕುಡುಗೋಲಿನಿಂದ ಕೊಚ್ಚಿ ಹೆಂಡತಿಯ ಹತ್ಯೆ

ಪಾಂಡವಪುರ: ಕೌಟುಂಬಿಕ ಕಲಹ ವಿಕೋಪಕ್ಕೆ ತಿರುಗಿ ಗಂಡ ತನ್ನ ಹೆಂಡತಿಯನ್ನು ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಮನೋಹರ ಎಂಬವರ ಪತ್ನಿ ಶೋಭಾ(೪೦) ಕೊಲೆಯಾದ ಗೃಹಿಣಿ.
ಕೊಲೆ ಮಾಡಿದ ಮನೋಹರನನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮೃತ ಶೋಭಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ೨೨ ವರ್ಷದ ಮಗ ಖಾಸಗಿ ಉದ್ಯೋಗಿಯಾಗಿದ್ದು, ಮಗಳನ್ನು ವಿವಾಹ ಮಾಡಿಕೊಡಲಾಗಿದೆ.
ಮಂಗಳವಾರ ರಾತ್ರಿ ಮನೆಯಲ್ಲಿ ಗಂಡ ಹೆಂಡತಿ ಇಬ್ಬರೇ ಇರುವಾಗ ಕ್ಷುಲ್ಲಕ ಕಾರಣಕ್ಕೆ ಕಲಹ ಪ್ರಾರಂಭವಾಗಿದೆ. ಈ ವೇಳೆ ಪಾನಮತ್ತನಾಗಿದ್ದ ಮನೋಹರ ಹೆಂಡತಿ ಶೋಭಾ ಮೇಲೆ ಕೋಪಗೊಂಡು ಕುಡುಗೋಲಿನಿಂದ ಅವರ ತೊಡೆಗೆ ಹೊಡೆದಾಗ ತೀವ್ರವಾಗಿ ರಕ್ತಸ್ರಾವವಾಗಿತ್ತು. ಕೂಡಲೇ ಶೋಭಾ ಅವರನ್ನು ಪಾಂಡವಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಮೃತಪಟ್ಟರು ಎನ್ನಲಾಗಿದೆ. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು