ಪಾಂಡವಪುರ ಸೆಸ್ಕ್ ಅಧಿಕಾರಿಗಳಿಂದ ತಾರತಮ್ಯ: ಡಾ.ಇಂದ್ರೇಶ್ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ
ಜನವರಿ 30, 2023
ಪಾಂಡವಪುರ: ಪಟ್ಟಣದ
ಸೆಸ್ಕ್ ಇಲಾಖೆಯಲ್ಲಿ ಅಧಿಕಾರಿಗಳು ರೈತರ ಕೆಲಸ ಮಾಡಲು ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ
ಬಿಜೆಪಿ ಮುಖಂಡ ಡಾ.ಎನ್.ಎಸ್.ಇಂದ್ರೇಶ್ ನೇತೃತ್ವದಲ್ಲಿ ರೈತರು ಮತ್ತು ಬಿಜೆಪಿ ಕಾರ್ಯಕರ್ತರು
ಸೆಸ್ಕ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ತಾಲ್ಲೂಕಿನಲ್ಲಿ
ವಿದ್ಯುತ್ ಸಮಸ್ಯೆ ತಾಂಡವವಾಡುತ್ತಿದೆ. ಈ ಬಗ್ಗೆ ರೈತರು ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆಗೆ
ಸ್ಪಂದಿಸುವುದಿಲ್ಲ. ಪ್ರತಿ ದೂರಿಗೂ ಶಾಸಕರ ಶಿಫಾರಸ್ಸು ಬೇಕಿದೆ. ರೈತರು ನೇರವಾಗಿ ದೂರು ನೀಡಿದರೆ
ಸೆಸ್ಕ್ ಅಧಿಕಾರಿಗಳು ಕ್ರಮ ಜರುಗಿಸುವುದಿಲ್ಲ. ಕೆಲಸ ಮಾಡುವುದನ್ನು ಬಿಟ್ಟು ರಾಜಕೀಯ ಮಾಡುತ್ತಿದ್ದಾರೆ.
ನಿಮಗೆ ರಾಜಕೀಯ ಮಾಡುವುದು ಬೇಕಿದ್ದರೆ ಕೆಲಸಕ್ಕೆ ರಾಜಿನಾಮೆ ಕೊಟ್ಟು ರಾಜಕೀಯ ಮಾಡಿ ಎಂದು ಪ್ರತಿಭಟನಾಕಾರರು
ಕಿಡಿ ಕಾರಿದರು. ಬಿಜೆಪಿ ಮುಖಂಡ
ಡಾ.ಎನ್.ಎಸ್.ಇಂದ್ರೇಶ್ ಮಾತನಾಡಿ, ಮೊದಲೇ ಈ ಭಾಗದ ಹಳ್ಳಿಗಾಡಿನ ರೈತರು ಕಷ್ಟದಲ್ಲಿದ್ದಾರೆ. ನಿರಂತರವಾಗಿ
ವಿದ್ಯುತ್ ಸಮಸ್ಯೆ ಉಂಟಾದಲ್ಲಿ ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ರೈತನಿಗೆ ತೊಂದರೆಯಾಗುತ್ತಿದೆ.
ದೂರು ಬಂದ ತಕ್ಷಣ ಕೆಲಸ ಮಾಡಬೇಕು. ಅನ್ನದಾತನ ಕೆಲಸ ಮಾಡಲು ನೀವಿದ್ದೀರಿ. ತಾರತಮ್ಯ ಮಾಡಬೇಡಿ ಎಂದು
ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ
ಸೆಸ್ಕ್ ಎಇ ಪುಟ್ಟಸ್ವಾಮಿ ಹಾಜರಿದ್ದು, ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವುದಾಗಿ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ
ಬಿಜೆಪಿಮುಖಂಡರಾದ ಈರೇಗೌಡ,
ನೀಲನಹಳ್ಳಿಧನಂಜಯ, ರಾಜೀವ, ಚಿಕ್ಕಮರಳಿ ನವೀನ, ಭಾಸ್ಕರ್, ಬೇಬಿಪುಟ್ಟಸ್ವಾಮಿಇನ್ನಿತರರು
ಇದ್ದರು.
0 ಕಾಮೆಂಟ್‌ಗಳು