೨೧ ರಂದು ಮಂಡ್ಯ ಜಿಲ್ಲಾದ್ಯಂತ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಗಳ ಸಂಸ್ಮರಣೋತ್ಸವ : ದಾಸೋಹ ದಿನ ಆಚರಣೆ : ಭಾರತ ರತ್ನ ಪ್ರಶಸ್ತಿಗೆ ಆಗ್ರಹಿಸಿ ಪತ್ರ ಚಳವಳಿ

ಮಂಡ್ಯ: ಕೋಟ್ಯಾಂತರ ಭಕ್ತರ ಭಾವಕೋಶದಲ್ಲಿ ನೆಲೆಯಾಗಿರುವ ಕರ್ನಾಟಕ ರತ್ನ, ಪದ್ಮಭೂಷಣ, ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಲಿಂಗೈಕ್ಯ ಸಂಸ್ಮರಣೋತ್ಸವ ಕಾರ್ಯಕ್ರಮವನ್ನು .21 ರಂದು ಜಿಲ್ಲೆಯಾದ್ಯಂತ ಎಲ್ಲಾ ತಾಲ್ಲೂಕು ಹೋಬಳಿ ಕೇಂದ್ರಗಳಲ್ಲಿ ನಡೆಸಲು ಶ್ರೀಮಠದ ಹಳೆಯ ವಿದ್ಯಾರ್ಥಿಗಳು ಮತ್ತು ಹಿತೈಷಿಗಳ ಸಂಘದ ಸಭೆಯಲ್ಲಿ ನಿರ್ಧರಿಸಲಾಯಿತು.
ನಗರದ ಪ್ರವಾಸಿ ಮಂದಿರದಲ್ಲಿ ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ಹಾಗೂ ಸಂಘದ ಜಿಲ್ಲಾಧ್ಯಕ್ಷ ಎಂಬೆಟ್ಟಹಳ್ಳಿ ಎಂ.ಎಸ್.ಮಂಜುನಾಥ್  ನೇತೃತ್ವದಲ್ಲಿ ನಡೆದ ಸಂಸ್ಮರಣೋತ್ಸವ ಪೂರ್ವಭಾವಿ ಸಭೆ ಹಾಗೂ ಸಂಘದ ಪದಾಧಿಕಾರಿಗಳ ಅಭಿನಂದನಾ ಸಭೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ ವಿವಿಧ ಸಂಘಟನೆಗಳ ಮುಖಂಡರು ಅರ್ಥಪೂರ್ಣವಾಗಿ ಜನೋಪಯೋಗಿ ಕಾರ್ಯಗಳ ಮೂಲಕ ಪೂಜ್ಯರ 4ನೇ ವರ್ಷದ ಪುಣ್ಯಸ್ಮರಣೆ ಮಾಡಲು ತೀರ್ಮಾನಿಸಿದರು.
ಸಂಘದ ಜಿಲ್ಲಾಧ್ಯಕ್ಷ ಎಂಎಸ್,ಮಂಜುನಾಥ್ ಮಾತನಾಡಿ, ವಿಶ್ವಕಂಡ ಮಹಾನ್ ಸಂತ ಶ್ರೀ ಶಿವಕುಮಾರ ಸ್ವಾಮೀಜಿ ಅವರ ತತ್ವ ಆದರ್ಶಗಳು ಎಂದೆಂದಿಗೂ ಅಮರವಾಗಿವೆ. ಸೂರ್ಯ ಚಂದ್ರರು ಇರುವವರೆಗೆ ಪೂಜ್ಯರು ದೇಶಕ್ಕೆ ಸಲ್ಲಿಸಿದ ಸೇವೆ ಸ್ಮರಣೀಯವಾಗಿ ಉಳಿಯುತ್ತದೆ. ಅಂತಹ ದೇವಮಾನವರನ್ನು ನಿತ್ಯವೂ ನೆನೆಯಬೇಕಾದ್ದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಪಾಂಡವಪುರದ ಜ್ಞಾನಬಂಧು ವಿದ್ಯಾಸಂಸ್ಥೆ ಅಧ್ಯಕ್ಷ ಎಂ.ಆರ್.ಕುಮಾರಸ್ವಾಮಿ ಮಾತನಾಡಿ, ಹನ್ನೆರಡನೇ ಶತಮಾನದ ಬಸವಣ್ಣನವರ ಸಮಾನತಾ ತತ್ವವನ್ನು ಚಾಚೂ ತಪ್ಪದೆ ಅನುಷ್ಠಾನಗೊಳಿಸಿದ ವೀರ ಸನ್ಯಾಸಿ ಪೂಜ್ಯ ಸಿದ್ದಗಂಗಾ ಶ್ರೀಗಳು ಪ್ರಾತಃ ಸ್ಮರಣೀಯರು. ಕಾವಿಗೆ ಕಿಮ್ಮತ್ತು ತಂದುಕೊಟ್ಟ ವಿಶ್ವಗುರುವಾಗಿದ್ದಾರೆ. ಇಡೀ ಪ್ರಪಂಚದಲ್ಲಿ ಎಲ್ಲಿಯೂ ಕಾಣಸಿಗದ ಅಪರೂಪದ ಋಷಿಯಾಗಿ ನಾಡಿಗೆ ಕೀರ್ತಿ ತಂದಿದ್ದಾರೆ ಎಂದರು.
ಪೂಜ್ಯರಿಗೆ ಭಾರತರತ್ನ ಪ್ರಶಸ್ತಿಯನ್ನು ಮರಣೋತ್ತವಾಗಿಯಾದರೂ ನೀಡಬೇಕೆಂದ ಭಕ್ತರ ಬೇಡಿಕೆಯನ್ನು ಕೇಂದ್ರ ಸರ್ಕಾರ ಇನ್ನಾದರೂ ಈಡೇರಿಸಬೇಕೆಂದು ಆಗ್ರಹಿಸಿದರು.
ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ನಾಡಿನಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಸಿದ್ದಗಂಗಾ ಶ್ರೀಗಳ ಆಶೀರ್ವಾದ ಬೇಕಿತ್ತು. ಅವರು ಲಿಂಗೈಕ್ಯರಾದ ನಂತರ ಕೋಟ್ಯಾಂತರ ಭಕ್ತರು ಮಾಡಿದ ಮನವಿಗಳೆಲ್ಲವೂ ವ್ಯರ್ಥವಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಭಾರತರತ್ನ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಮೋದಿಯವರಿಗೆ ಪತ್ರ ಬರೆಯುವ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಸಭೆಯಲ್ಲಿ ನಾಗರಾಜಪ್ಪ, ಲೋಕೇಶ್, ದೇವರಾಜ್, ವೀರಪ್ಪ, ಬಸವರಾಜ್, ಧರ್ಮರಾಜು, ಎಂ.ಆರ್.ಮಂಜುನಾಥ್, ಆಲಕೆರೆ ತರಕಾರಿ ಮಹೇಶ್, ಮಿಲ್ಟ್ರಿ ಜಿ.ಸುರೇಶ್,  ಮಲ್ಲಿಕಾರ್ಜುನ್, ಸುಜೇಂದ್ರ ಕುಮಾರ್, ವಿ.ಎಂ.ಜಗದೀಶ್, ವಿಶ್ವನಾಥ್, ಸಾಹಿತಿ,ದೇವಪ್ಪ, ಜಿ.ಮಹಾಂತಪ್ಪ, ಬೇಬಿ ಗಿರೀಶ್, ಹೇಮಂತ್ ಕುಮಾರ್, ಮಂಜುನಾಥ್, ಗೌರೀಶ್,
ಎನ್, ಕೆ,ಮಂಜಪ್ಪ, ಜಗದೀಶ್, ನಾಗಣ್ಣ ಮಲ್ಲಪ್ಪ, ಮಹೇಶ್, ಮಂಜುನಾಥ್, ಪಿ.ಮಾದಪ್ಪ, ಚುಂಚಯ್ಯ, ಹೆಚ್.ಎಸ್.
ಸಿದ್ದರಾಜು ಮುಂತಾದವರು ಇದ್ದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು