ಸಿದ್ದರಾಮಯ್ಯ ಅವಹೇಳನದ ವಿರುದ್ಧ ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ: ರಂಗಾಯಣ ಮುತ್ತಿಗೆಗೆ ಯತ್ನ, ಪೊಲೀಸರೊಂದಿಗೆ ವಾಗ್ವಾದ

ಬಿಜೆಪಿ, ಆರ್.ಎಸ್.ಎಸ್, ಅಡ್ಡಂಡ ಸಿ.ಕಾರ್ಯಪ್ಪ ವಿರುದ್ಧ ಘೋಷಣೆ 

ಮೈಸೂರು: ಇತ್ತೀಚೆಗೆ ರಂಗಾಯಣದಲ್ಲಿ ನಡೆದ ನಾಟಕವೊಂದರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಗ್ಗೆ ಅವಹೇಳನ ಖಂಡಿಸಿ ನಗರದಲ್ಲಿ ಮಂಗಳವಾರ ಸ್ವಾಭಿಮಾನಿ ಹೋರಾಟ ಸಮಿತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. 
ಸಾವಿರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು, ಓವೆಲ್ ಮೈದಾನದಲ್ಲಿ ಜಮಾವಣೆಗೊಂಡು ಸಾಂಬಶಿವ ಪ್ರಹಸನ ನಾಟಕದ ನಿರ್ದೇಶಕ ಕಾರ್ತಿಕ್ ಉಪಮನ್ಯು, ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಮತ್ತು ಬಿಜೆಪಿ, ಆರ್.ಎಸ್.ಎಸ್ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ರಂಗಾಯಣವನ್ನು ರಣರಂಗವನ್ನಾಗಿ ಮಾಡುತ್ತಿರುವ ಅಡ್ಡಂಡ ಸಿ.ಕಾರ್ಯಪ್ಪ ಅವರನ್ನು ಕೂಡಲೇ ವಜಾಗೊಳಿಸುವಂತೆ ಆಗ್ರಹಿಸಿ ಪ್ರತಿಭಟನಾಕಾರರು ರಂಗಾಯಣಕ್ಕೆ ಮುತ್ತಿಗೆ ಹಾಕಲು ತೆರಳುತ್ತಿದ್ದಂತೆ ಪೊಲೀಸರು ಅರ್ಧದಲ್ಲಿಯೇ ತಡೆದರು. ಇದರಿಂದ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿ ಪೊಲೀಸರೂ ಪ್ರತಿಭಟನಾಕಾರರ ನಡುವೆ ವಾಗ್ವಾದವೂ ನಡೆಯಿತು.

ಇದಕ್ಕೂ ಮೊದಲು ಮಾತನಾಡಿದ ಹಿರಿಯ ಪತ್ರಕರ್ತ ಟಿ.ಗುರುರಾಜ್, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಹಿರಿಯ ರಂಗಕರ್ಮಿ ಕೃಷ್ಣಪ್ರಸಾದ್ ಸೇರಿದಂತೆ ಅನೇಕರು ಒಕ್ಕೂರಲಿನಿಂದ ಅಡ್ಡಂಡ ಕಾರ್ಯಪ್ಪನನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು. 
ಬ್ಯಾರಿಕೇಡ್ ತಳ್ಳಿದ ಸಿದ್ದು ಅಭಿಮಾನಿಗಳು: ತಮ್ಮ ನೆಚ್ಚಿನ ನಾಯಕ ಸಿದ್ದರಾಮಯ್ಯ ವಿರುದ್ಧ ಅವಹೇಳನ ಮಾಡಿರುವ ಬಗ್ಗೆ ತೀವ್ರ ಅಸಮಾಧಾನಗೊಂಡ ಅಭಿಮಾನಿಗಳು ಪೊಲೀಸ್ ಬ್ಯಾರಿಕೇಡ್ ತಳ್ಳಿ ನುಗ್ಗಲು ಯತ್ನಿಸಿದಾಗ, ಕಾಂಗ್ರೆಸ್ ಮುಖಂಡರು ಕಾರ್ಯಕರ್ತರನ್ನು ಸಮಾಧಾನ ಪಡಿಸಿ ಸಂಭವನೀಯ ಅನಾಹುತ ತಪ್ಪಿಸಿದರು.
ಓವೆಲ್ ಮೈದಾನದ ಮುಂಭಾಗ  ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರ ಅಣಕು ಶವಯಾತ್ರೆಯೂ ನಡೆಯಿತು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಹಿರಿಯ ಪತ್ರಕರ್ತ ಟಿ.ಗುರುರಾಜ್, ಹಿರಿಯ ರಂಗಕರ್ಮಿಗಳಾದ ಜನಾರ್ಧನ್ (ಜನ್ನಿ), ಕೃಷ್ಣಪ್ರಸಾದ್, ಮಾಜಿ ಶಾಸಕರುಗಳಾದ ಕಳಲೆ ಕೇಶವಮೂರ್ತಿ, ಎಂ.ಕೆ.ಸೋಮಶೇಖರ್, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಕೆಪಿಸಿಸಿ ಮಹಿಳಾ ಘಟಕದ ರಾಜ್ಯಧ್ಯಕ್ಷೆ ಡಾ.ಪುಷ್ಪಾ ಅಮರ್‌ನಾಥ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕುರುಬರ ಸಂಘದ ರಾಜ್ಯಾಧ್ಯಕ್ಷ ಸುಬ್ರಹ್ಮಣ್ಯ, ಮುಖಂಡರುಗಳಾದ ಸುನೀಲ್ ಬೋಸ್,  ಶಿವಣ್ಣ, ಮೈಸೂರು ಬಸವಣ್ಣ, ಶಿವು, ಮಹೇಶ್, ಮಾಜಿ ಮೇಯರ್ ಅಯೂಬ್ ಖಾನ್, ನಗರಪಾಲಿಕೆ ಸದಸ್ಯ ಗೋಪಿ, ನಂಜನಗೂಡು ನಗರಸಭಾ ಸದಸ್ಯರುಗಳಾದ ಎಸ್.ಪಿ.ಮಹೇಶ್, ಸ್ವಾಮಿ, ಸಿದ್ದಿಕ್,  ಗುರುಪಾದಸ್ವಾಮಿ, ನಂದಕುಮಾರ್, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಧ್ಯಕ್ಷ ಕೆ.ಎಸ್.ಶಿವರಾಮ್, ನಾಗೇಶ್, ಎಚ್.ಎ.ವೆಂಕಟೇಶ್, ನೆಲೆ ಹಿನ್ನಲೆ ಗೋಪಾಲಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು