ಮೈಸೂರು ನಗರದ ಕೆ.ಸಿ. ಬಡಾವಣೆಯಲ್ಲಿ ಚಿರತೆ ದಾಳಿಗೆ ಕರು ಬಲಿ

ಮೈಸೂರು : ನಗರದ ಕೆ.ಸಿ.ಬಡಾವಣೆಯಲ್ಲಿ ಮಂಗಳವಾರ ತಡರಾತ್ರಿ ಚಿರತೆಯೊಂದು ಕರುವನ್ನು ಕೊಂದು ಹಾಕಿದೆ.
ಚಾಮುಂಡಿ ಬೆಟ್ಟದ ಸಮೀಪವಿರುವ ಬಡಾವಣೆಯ ಆಸುಪಾಸಿನಲ್ಲಿ ಈ ಹಿಂದೆ ಕೆಲವು ಬಾರಿ ಚಿರತೆ ಸುಳಿವು ಕಂಡು ಬಂದಿತ್ತಾದರೂ, ಇತ್ತೀಚಿನ ದಿನಗಳಲ್ಲಿ ಈ ರೀತಿಯ ಘಟನೆ ನಡೆದಿರಲಿಲ್ಲ.
ಆದರೆ, ಬಡಾವಣೆಯ ನಿವಾಸಿಯೊಬ್ಬರು ತಮ್ಮ ಜಾನುವಾರುಗಳನ್ನು ರಸ್ತೆ ಬದಿ ಕಟ್ಟಿದ್ದ ವೇಳೆ ಮಂಗಳವಾರ ತಡರಾತ್ರಿ ವೇಳೆಗೆ ಸುಮಾರು ಒಂದು ವರ್ಷ ಪ್ರಾಯದ ಕರುವನ್ನು ಚಿರತೆ ಕೊಂದು ತಿಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಮಿಸಿದ ಶಾಸಕ ರಾಮದಾಸ್ ಅವರು, ಪರಿಶೀಲನೆ ನಡೆಸಿದರಲ್ಲದೆ, ಅರಣ್ಯ ಇಲಾಖೆ ಸಿಬ್ಬಂದಿಯನ್ನೂ ಕರೆಸಿಕೊಂಡು ಈ ಬಗ್ಗೆ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಹಾಗೂ  ಚಿರತೆಯ ಚಲನವಲನದ ಬಗ್ಗೆ ನಿಗಾ ಇರಿಸಬೇಕು. ಮಾತ್ರವಲ್ಲ, ಈ ಭಾಗದಲ್ಲಿರುವ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿ ಅದರ ಜಾಡು ಪತ್ತೆ ಮಾಡಿ ಅದನ್ನು ಹಿಡಿಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಸೂಚಿಸಿದರು.
ಚಿರತೆ ಬಗ್ಗೆ ಭಯ ಬೇಡ, ಅದನ್ನು ಹಿಡಿಯುವ ನಿಟ್ಟಿನಲ್ಲಿ ತಕ್ಷಣವೇ ಕಾರ್ಯ ಆರಂಭಿಸಲಾಗುವುದು. ಆದಷ್ಟು ಜಾಗ್ರತೆಯಿಂದ ಇರಿ ಎಂದು ಸ್ಥಳೀಯ ನಿವಾಸಿಗಳಿಗೆ ತಿಳಿಸಿದರು.
ಈ ವೇಳೆ ಮೇಯರ್ ಶಿವಕುಮಾರ್, ಸ್ಥಳೀಯ ಮುಖಂಡರು, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು