ಮಾಜಿ ಶಾಸಕ ಕಾಂಗ್ರೆಸ್ ಮುಖಂಡ ವಾಸು ಅವರ ಪುತ್ರ ಕವೀಶ್ ಗೌಡ ಬಿಜೆಪಿ ಸೇರ್ಪಡೆ

ಮೈಸೂರು : ನಿನ್ನೆ ಮೊನ್ನೆಯ ತನಕವೂ ಕಾಂಗ್ರೆಸ್ ಕಚೇರಿಯಲ್ಲಿ ಓಡಾಡಿಕೊಂಡಿದ್ದ ಮಾಜಿ ಶಾಸಕ ಕಾಂಗ್ರೆಸ್ ಪಕ್ಷದ ವಾಸು ಅವರ ಪುತ್ರ ಕವೀಶ್ ಗೌಡ ಇಂದು ಸದ್ದಿಲ್ಲದೇ ಬಿಜೆಪಿ ಸೇರ್ಪಡೆಯಾದರು.
ಕವೀಶ್ ಗೌಡ ಬಿಜೆಪಿ ಮುಖಂಡರಾದ ನಿರ್ಮಲ್ ಕುಮಾರ್ ಸುರಾನ ಸಮ್ಮುಖದಲ್ಲಿ ಬೆಂಗಳೂರು ಕಚೇರಿಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದ ಸಂದರ್ಭದಲ್ಲಿ ಸುರಾನ ಹೊರತು ಪಡಿಸಿ ಬಿಜೆಪಿಯ ಯಾವುದೇ ಹಿರಿಯ ಮುಖಂಡರು ಇರಲಿಲ್ಲ. ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಹ ಗೈರಾಗಿದ್ದರು ಎನ್ನಲಾಗಿದೆ.
ಮೈಸೂರು ಚಾಮುಂಡೇಶ್ವರಿ ಕ್ಷೇತ್ರದ ಟಿಕೆಟ್ ಮೇಲೆ ಕಣಿಟ್ಟು ಕವೀಶ್ ಗೌಡ ಬಿಜೆಪಿ ಸೇರ್ಪಡೆಯಾಗಿದ್ದಾರೆ ಇದಕ್ಕೆ ಅವರ ತಂದೆ ವಾಸು ಅವರೂ ಸಾಥ್ ನೀಡಿದ್ದಾರೆ ಎನ್ನಲಾಗಿದೆ. ಇದರಿಂದ ಇದೀಗ ವಾಸು ವಿರುದ್ಧ ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. ಚಾಮರಾಜ ಕ್ಷೇತ್ರದಲ್ಲಿ ವಾಸು ಅವರಿಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ತಪ್ಪಬಹುದು ಎಂಬ ಮಾತೂ ಕೂಡ ಕೇಳಿಬಂದಿದ್ದು, ಅವರೂ ಸಹ ಬಿಜೆಪಿ ಸೇರ್ಪಡೆಯಾದರೆ ಆಶ್ಚರ್ಯವಿಲ್ಲ ಎಂದು ಹೆಸರು ಹೇಳಲಿಚ್ಛಿಸಿದ ಕಾಂಗ್ರೆಸ್ ಮುಖಂಡರು ತಿಳಿಸಿದರು. 
ಕವೀಶ್ ಗೌಡ ಮೂಲತಃ ಚಾಮರಾಜ ಕ್ಷೇತ್ರದವರು, ಅಲ್ಲಿಯೂ ಕೂಡ ಪ್ರಭಾವಿ ನಾಯಕರಾಗಿ ಬೆಳೆದಿಲ್ಲ. ಅವರ ಬಿಜೆಪಿ ಸೇರ್ಪಡೆಯಿಂದ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಯಾವುದೇ ರೀತಿಯ ಅನುಕೂಲವಿಲ್ಲ. ಟಿಕೆಟ್‍ಗಾಗಿ ಬಂದಿದ್ದಾರೆ. ಕ್ಷೇತ್ರದಲ್ಲಿ ಈ ಹಿಂದೆ ಯಾವುದೇ ರೀತಿಯ ಸಂಘಟನೆ ಮಾಡಿಲ್ಲ. ಪಕ್ಷದಲ್ಲಿ ತಳಮಟ್ಟದಿಂದ ದುಡಿದವರಿಗೆ ಮಾತ್ರ ಟಿಕೆಟ್ ನೀಡಲಾಗುತ್ತದೆ ಎಂದು ಮುಖಂಡರೊಬ್ಬರು ಹೇಳಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು