ಚಿನಕುರಳಿಯಲ್ಲಿ ಫೆ.1 ರಂದು ಶ್ರೀ ರಾಮೇಶ್ವರ, ಶ್ರೀ ಆಂಜನೇಯ, ಪರಿವಾರ ದೇವಾಲಯಗಳ ಲೋಕಾರ್ಪಣೆ : 20 ಸಾವಿರ ಜನರಿಗೆ ಅನ್ನ ಸಂತರ್ಪಣೆ

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶಾಸಕ ಸಿ.ಎಸ್.ಪುಟ್ಟರಾಜು ಭಾಗಿ

ಪಾಂಡವಪುರ: ತಾಲ್ಲೂಕಿನ ಚಿನಕುರಳಿ ಗ್ರಾಮದಲ್ಲಿ ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಶ್ರೀ ರಾಮೇಶ್ವರ, ಶ್ರೀ ಆಂಜನೇಯ, ಪರಿವಾರ ದೇವಾಲಯಗಳು ಮತ್ತು ಸಮುದಾಯ ಭವನ ಲೋಕಾರ್ಪಣೆ ಮಾಡಲಾಗುವುದು ಎಂದು ಚಿನಕುರಳಿ ಗ್ರಾಮದ ಯಜಮಾನ್ ತಮ್ಮಣ್ಣೇಗೌಡ ತಿಳಿಸಿದರು.
ದೇವಾಲಯ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಐತಿಹಾಸಿಕ ಹಿನ್ನೆಲೆಯುಳ್ಳ ಗ್ರಾಮದ ಪುರಾತನ ದೇವಾಲಯಗಳನ್ನು ಕಳೆದ ಹಲವು ದಿನಗಳಿಂದ ನವೀಕರಣ ಮಾಡಲಾಗಿತ್ತು. ಇದೀಗ ಫೆ.1 ರಂದು ಗ್ರಾಮದ ದೇವಾಲಯಗಳು, ಸಮುದಾಯ ಭವನ ಮತ್ತು ಉದ್ಯಾನವನಗಳನ್ನು ಲೋಕಾರ್ಪಣೆ ಮಾಡಲಾಗುವುದು. ಅಂದು ಸುಮಾರು 20 ಸಾವಿರ ಜನರಿಗೆ ಅನ್ನಸಂತರ್ಪಣೆ ಸಹ ಏರ್ಪಡಿಸಲಾಗಿದೆ ಎಂದರು. 
ಅಂದು ಬೆಳಿಗ್ಗೆ ಮಹಾಗಣಪತಿ ದ್ವಾದಶ ವರ್ಷದ ವಿಮಾನಗೋಪುರ ಮಹಾ ಕುಂಭಾಬಿಷೇಕ, ದಣ್ಣಮ್ಮ ದೇವಿಕೆ ವಿಮಾನಗೋಪುರ ಸ್ಥಾಪನೆ, ಕುಂಭಾಭಿಷೇಕ, ಅರಳಿ ವೃಕ್ಷ ವಿವಾಹ ಮಹೋತ್ಸವ, ಶ್ರೀ ರಾಮಾಂಜನೇಯ ಸ್ವಾಮಿಯ ಮಹಾದ್ವಾರ ಉದ್ಘಾಟನೆ, ಅಂಕನಾಥೇಶ್ವರ ಶ್ರೀ ಮನೆ ಮಂಚಮ್ಮ, ಶ್ರೀ ಮಾಸ್ತಮ್ಮ, ಶ್ರೀ ಆಧಿಶಕ್ತಿ, ಶ್ರೀ ಬೋರೇದೇವರು, ಶ್ರೀ ಹಿರಿಯಮ್ಮ, ಶ್ರೀ ಮೂಗ್ ಮಂಚಮ್ಮ, ಶ್ರೀ ಗಾಳಿ ಆಂಜನೇಯಸ್ವಾಮಿ, ಶ್ರೀ ಮಾರಮ್ಮ, ಶ್ರೀ ಲಕ್ಷ್ಮಿ, ಶ್ರೀರಾಮ ಮಂದಿರ ದೇವಸ್ಥಾನಗಳಿಗೆ ವಿಶೇಷ ಪೂಜೆ, ಶ್ರೀ ಆಂಜನೇಯಸ್ವಾಮಿಯ ವಿಮಾನಗೋಪುರ, ಕಳಸ ಪ್ರತಿಷ್ಠಾಪನೆ, ಕುಂಭಾಭಿಷೇಕ, ಹೆಬ್ಬಾಗಿಲು ಉದ್ಘಾಟನೆ, ಅರಳಿ ವೃಕ್ಷ ವಿವಾಹ ಮಹೋತ್ಸವ, ಶ್ರೀ ರಾಮೇಶ್ವರ ದೇವಸ್ಥಾನದ ವಿಮಾನ ಗೋಪುರ, ರಾಜಗೋಪುರ, ಕಳಸ ಸ್ಥಾಪನೆ, ಕುಂಭಾಭಿಷೇಕ, ಶ್ರೀ ಪಟ್ಟಲದಮ್ಮ ದೇವಿಯ ವಿಮಾನ ಗೋಪುರ ಸ್ಥಾಪನೆ, ಹಾಗೂ ಕುಂಭಾಭಿಷೇಕ, ಶ್ರೀ ರಾಮೇಶ್ವರ ಸಮುದಾಯ ಭವನದ ಉದ್ಘಾಟನೆ ಹಾಗೂ ಗಿರಿಜಾ ಕಲ್ಯಾಣ ಗುರು ಪಾದುಕಾ ಪೂಜೆ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಜಿಪಂ ಮಾಜಿ ಅಧ್ಯಕ್ಷ ಅಶೋಕ್ ಮಾತನಾಡಿ, ಅಂದಿನ ಕಾರ್ಯಕ್ರಮದಲ್ಲಿ ವಿಶೇಷವಾಗಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿಗಳನ್ನು ವಿವಿಧ ಕಲಾ ಹಾಗೂ ಸಾಂಸ್ಕøತಿಕ ತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು. ಎಲ್ಲಾ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಮಹಾ ಪೋಷಕರಾದ ಶಾಸಕ ಸಿ.ಎಸ್.ಪುಟ್ಟರಾಜು ವಹಿಸುವರು ಎಂದರು.
ಸುದ್ದಿಗೋಷ್ಠಿಯಲ್ಲಿ ತಾಪಂ ಮಾಜಿ ಸದಸ್ಯ ಗೋಪಾಲೇಗೌಡ, ಶಿಂಡಭೋಗನಹಳ್ಳಿ ನಾಗಣ್ಣ, ಎ.ಎಸ್.ರಮೇಶ್, ಯಜಮಾನ್ ಸುಬ್ಬೇಗೌಡ, ಶಿವಕುಮಾರ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಯಜಮಾನರು ಇದ್ದರು.  



 
 
 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು