ಮೈಸೂರು ಮೂಡಾ ತಹಶೀಲ್ದಾರ್‌, ಎಫ್‌ಡಿಎ, ಅಟೆಂಡರ್‌ ಹೋಲ್‌ಸೇಲಾಗಿ ಲೋಕಾಯುಕ್ತ ಬಲೆಗೆ

ಖಾತೆ ಮಾಡಲು ೧೪ ಸಾವಿರ ರೂ. ಲಂಚದ ಬೇಡಿಕೆ

ಮೈಸೂರು : ನಿವೇಶನವೊಂದರ ಖಾತೆ ಮಾಡಿಕೊಡಲು 14 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ವಿಶೇಷ ತಹಸೀಲ್ದಾರ್.ಬಿ.ಕೆ.ಶ್ರೀನಿವಾಸ್, ಪ್ರಥಮ ದರ್ಜೆ ಗುಮಾಸ್ತ ರಂಗಣ್ಣ ಮತ್ತು ಅಟೆಂಡರ್ ವರಲಕ್ಷ್ಮಿ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.
ಮಾನವ ಹಕ್ಕು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ ಮೈಸೂರು ಘಟಕದ ಅಧ್ಯಕ್ಷ ಕಾರ್ತಿಕ್ ಗೌಡ ನೀಡಿದ ದೂರಿನ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಲಂಚ ಪಡೆಯುವಾಗಲೇ ಆರೋಪಿಗಳನ್ನ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.
ಶ್ರೀರಾಂಪುರ ಬಡಾವಣೆಯ 7 ನಿವೇಶನಗಳಿಗೆ ಖಾತೆ ಮಾಡಿಸಲು ಕಾರ್ತಿಕ್ ಗೌಡ ಅರ್ಜಿ ಹಾಗೂ ದಾಖಲೆಗಳನ್ನ ಸಲ್ಲಿಸಿದ್ದರು. ಸುಮಾರು ಎರಡು ವರ್ಷಗಳಿಂದ ಖಾತೆ ಮಾಡಿಕೊಡದೆ ವಿಳಂಬ ಮಾಡುತ್ತಿದ್ದ ತಹಶೀಲ್ದಾರ್‌, ಖಾತೆ ಮಾಡಿಕೊಡಲು 20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಬೇಸತ್ತ ಕಾರ್ತಿಕ್ ಗೌಡ ಲೋಕಾಯುಕ್ತ ಮೊರೆ ಹೋಗಿದ್ದರು. ದೂರು ಸ್ವೀಕರಿಸಿದ ಲೋಕಾಯುಕ್ತ ಇಂದು ಮುಡಾ ಕಚೇರಿಯಲ್ಲಿ ದಾಳಿ ನಡೆಸಿ ಆರೋಪಿಗಳನ್ನ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.ಲೋಕಾಯುಕ್ತ ಡಿವೈಎಸ್ಪಿ ಕೃಷ್ಣ ಹಾಗೂ ನಿರೀಕ್ಷಕರಾದ ಲೋಕೇಶ್ ನೇತೃತ್ವದಲ್ಲಿ ದಾಳಿ ನಡೆದಿದೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು