ಸಂಸದ ಪ್ರತಾಪ್ ಸಿಂಹ ಕಚೇರಿಗೆ ಕಬ್ಬು ಬೆಳೆಗಾರರ ಮುತ್ತಿಗೆ

ಕಬ್ಬಿನ ಎಫ್‍ಆರ್‍ಪಿ ದರ ಪರಿಷ್ಕರಣೆಗೆ ಸರ್ಕಾರಕ್ಕೆ ಪತ್ರ ಬರೆಯುವಂತೆ ಬಿಜೆಪಿ ಸಂಸದರು, ಶಾಸಕರಿಗೆ ಒತ್ತಾಯ

ಮೈಸೂರು: ಕಬ್ಬಿಗೆ ಸೂಕ್ತ ಎಫ್‍ಆರ್‍ಪಿ ದರ ಪರಿಷ್ಕರಣೆ ನಿಗದಿ ಮಾಡುವಲ್ಲಿ ಸರ್ಕಾರ ವಿಳಂಬ ಮಾಡುತ್ತಿದ್ದು, 14 ದಿನಗಳ ರೈತರ ಅಹೋರಾತ್ರಿ ಧರಣಿಗೆ ಸ್ಪಂದಿಸದೆ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೂರಾರು ಕಾರ್ಯಕರ್ತರು ಸೋಮವಾರ ಬೆಳಿಗ್ಗೆ ಸಂಸದ ಪ್ರತಾಪ್ ಸಿಂಹ ಕಚೇರಿಗೆ ಮುತ್ತಿಗೆ ಹಾಕಿ ಸರ್ಕಾರದ ಗಮನ ಸೆಳೆದರು.
ಕಬ್ಬು ಬೆಳೆಗಾರರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಕಳೆದ 14 ದಿನಗಳಿಂದ ಆಹೋರಾತ್ರಿ ಧರಣಿ ನಡೆಸುತಿದ್ದರೂ ರಾಜ್ಯ ಸರ್ಕಾರ ಯಾವುದೇ ತೀರ್ಮಾನ ಪ್ರಕಟಿಸದೆ ರೈತರನ್ನು ನಿರ್ಲಕ್ಷ್ಯ ಮಾಡುತ್ತಿದೆ. ಪ್ರತಾಪ್ ಸಿಂಹ ಅವರು ಆಡಳಿತ ಪಕ್ಷದ ಸಂಸದರಾಗಿ ನಮ್ಮೆಲ್ಲರ ಪ್ರತಿನಿಧಿಯಾಗಿದ್ದಾರೆ. ನಮ್ಮ ಒತ್ತಾಯಗಳ ಬಗ್ಗೆ ಕೂಡಲೇ ಸರ್ಕಾರದ ಗಮನ ಸೆಳೆದು ನ್ಯಾಯ ಕೊಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. 
ಕಬ್ಬಿನ ಎಫ್‍ಆರ್‍ಪಿ ದರವನ್ನು ಕೇಂದ್ರ ಸರ್ಕಾರ ರೈತರ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ನಿಗದಿ ಮಾಡಿದೆ. ಸಕ್ಕರೆ ಇಳುವರಿ ಮಾನದಂಡವನ್ನು 10ರಿಂದ 10.25ಕ್ಕೆ ಏರಿಕೆ ಮಾಡಿದ್ದು, ಇದರಿಂದ ರೈತರಿಗೆ ನಷ್ಟವಾಗುತ್ತಿದೆ. ಕಬ್ಬಿನಿಂದ ಉತ್ಪಾದಿಸುವ ಇತರ  ಉತ್ಪನ್ನಗಳ ಲಾಭವನ್ನು ರೈತರಿಗೆ ಹಂಚಿಕೆ ಮಾಡಿ ಟನ್ ಕಬ್ಬಿಗೆ ಹೆಚ್ಚುವರಿ ದರ ನಿಗದಿ ಮಾಡಬೇಕು ಎಂದು ರೈತರು ಕೋರಿದರು.  

ಕಬ್ಬು ಕಟಾವು ವಿಳಂಬದ ಅವಧಿಯಲ್ಲಿ ನಾವು ಸಾಲಕ್ಕೆ ಬಡ್ಡಿ ಕಟ್ಟಬೇಕಾಗಿದೆ. ನೀವೂ ಕಟಾವು ವಿಳಂಬದ ಅವಧಿಗೆ ಬಡ್ಡಿ ಸೇರಿಸಿ ಹೆಚ್ಚುವರಿ ದರ ಕೊಡಬೇಕು. ಹತ್ತಾರು ವರ್ಷಗಳಿಂದ ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ ನೀಡಬೇಕು. ಅರಣ್ಯ ಭೂಮಿಯಲ್ಲಿ ವ್ಯವಸಾಯ ಮಾಡುತ್ತಿರುವ ರೈತರಿಗೆ ಸಾಗುವಳಿ ಪಟ್ಟಾವನ್ನು ಕೊಡಬೇಕು. ಕೃಷಿ ಸಾಲಕ್ಕೆ ಸಿಬಿಲ್ ಪರಿಗಣಿಸಬಾರದು ಎಂಬ ಬೇಡಿಕೆ ಪತ್ರ ನೀಡಿದ ರೈತರು. ಸಂಸದರು ಕೂಡಲೇ ಸರ್ಕಾರಕ್ಕೆ ಪತ್ರ ಬರೆದು ನಮ್ಮ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ನಮ್ಮ ಹಳ್ಳಿಗಳಿಗೆ ಪ್ರವೇಶವಿಲ್ಲ ಎಂದು ಬಿತ್ತಿಫಲಕ ಹಾಕಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಪ್ರಸಾದ್‍ಗೆ ಮನವಿ : ನಂತರ ಚಾಮರಾಜನಗರ ಲೋಕ ಸಭಾ  ಕ್ಷೇತ್ರದ ಸಂಸದ ವಿ.ಶ್ರೀನಿವಾಸ ಪ್ರಸಾದ್ ಮನೆಗೆ ಪ್ರತಿಭಟನಾಕಾರರು ತೆರಳಿ ಮನವಿ ಸಲ್ಲಿಸಿದರು. 

ಸಂಸದ ಪ್ರತಾಪ್ ಸಿಂಹ ಕಚೇರಿಯಲ್ಲಿ ಇರಲಿಲ್ಲವಾದ್ದರಿಂದ ಅವರ ಆಪ್ತ ಸಹಾಯಕರಿಗೆ ಮನವಿ ನೀಡಲಾಯಿತು. ನಂತರ ಶಾಸಕ ಎಲ್.ನಾಗೇಂದ್ರ ಅವರ ಕಚೇರಿಗೆ ರೈತರು ತೆರಳಿದಾಗ ಸ್ವತಃ ಶಾಸಕ ಎಲ್.ನಾಂಗೇಂದ್ರ ಆಗಮಿಸಿ ರೈತರಿಂದ ಮನವಿ ಸ್ವೀಕರಿಸಿದರು. ನಂತರ ಪ್ರತಿಭಟನಾಕಾರರು ಶಾಸಕ ರಾಮದಾಸ್ ಕಚೇರಿಗೆ ತೆರಳಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಮುಖಂಡರಾದ ಬರಡನಪುರ ನಾಗರಾಜು, ಹಳ್ಳಿಕೆರೆ ಹುಂಡಿ ಭಾಗ್ಯರಾಜ್, ಹಾಡ್ಯ ರವಿ, ಕೋಟೆ ಮಾದಪ್ಪ, ಲಕ್ಷ್ಮೀಪುರ ವೆಂಕಟೇಶ್, ಡಿ.ಕಾಟೂರು ಮಹದೇವಪ್ಪ, ಅಂಬಳೆ ಮಂಜುನಾಥ್, ಕಿರಗಸೂರು ಶಂಕರ್ ಮುಂತಾದವರು ಇದ್ದರು.

``ಎಫ್‍ಆರ್‍ಪಿ ದರ ನಿಗದಿ ಮಾಡಲು ನಾಲ್ಕಾರು ಸಭೆಗಳನ್ನು ನಡೆಸಿ, ತಜ್ಞರ ಸಮಿತಿ ರಚಿಸಿ ಐದು ದಿನದಲ್ಲಿ ವರದಿ ಪಡೆದರೂ ಇನ್ನೂ ಯಾವುದೇ ನಿರ್ಧಾರ ಪ್ರಕಟಿಸದಿರುವುದು ರಾಜ್ಯ ಸರ್ಕಾರಕ್ಕೆ ಶೋಭೆ ತರುವುದಿಲ್ಲ. ರಾಜ್ಯದಲ್ಲಿ 30 ಲಕ್ಷ ಕಬ್ಬು ಬೆಳೆಗಾರರಿದ್ದು, 30 ಸಾವಿರ ಕೋಟಿ ವಹಿವಾಟು ನಡೆಸಲಾಗುತ್ತಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ 5,000 ಕೋಟಿ ತೆರಿಗೆ ಬರುತ್ತಿದೆ. ಆದರೂ ರೈತಪರ ನಿಲುವು ಪ್ರಕಟಿಸಲು ನಿರ್ಲಕ್ಷ್ಯ ಮಾಡುತ್ತಿರುವುದು ಅನ್ಯಾಯ. ರೈತರ ಬದುಕಿನೊಂದಿಗೆ ಚೆಲ್ಲಾಟವಾಡಬೇಡಿ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು''.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು