ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ರದ್ದು : ದುರ್ಬಲ ವರ್ಗದ ಮಕ್ಕಳ ಶಿಕ್ಷಣ ಮೊಟಕುಗೊಳಿಸುವ ಹುನ್ನಾರ: ಲೋಕರಕ್ಷಕ ಆರೋಪ
ಡಿಸೆಂಬರ್ 05, 2022
ಪಾಂಡವಪುರ : ಓಬಿಸಿ, ದಲಿತ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ರದ್ದು ಪಡಿಸುವ ಮೂಲಕ ಬಿಜೆಪಿ ಆಡಳಿತದ ಕೇಂದ್ರ ಸರ್ಕಾರ ತನ್ನ ಉದ್ಧೇಶವನ್ನು ಈಗ ನೇರವಾಗಿ ಸ್ಪಷ್ಟಪಡಿಸಿದೆ ಎಂದು ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಲೋಕರಕ್ಷಕ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ಬುಡಕಟ್ಟು ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಹೊರಡಿಸಿರುವ ಸುತ್ತೋಲೆ ಅನುಸಾರ "ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಕೇವಲ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ ಕೊಡಬೇಕು. 1-8ನೇ ತರಗತಿಯ ವಿದ್ಯಾರ್ಥಿಗಳು ಆರ್‍ಟಿಇ 2009ರ ಅಡಿಯಲ್ಲಿ ಉಚಿತ ಶಿಕ್ಷಣ ಪಡೆಯುತ್ತಿರುವುದರಿಂದ ಅವರಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಕೊಡುವಂತಿಲ್ಲ" ಎನ್ನುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದು ನೇರವಾಗಿ 6-14ನೇ ವಯಸ್ಸಿನ ಮಕ್ಕಳಿಗೆ ಉಚಿತ, ಕಡ್ಡಾಯ ಶಿಕ್ಷಣ ಕೊಡಬೇಕೆನ್ನುವ ಸಂವಿಧಾನದ ಮೂಲಭೂತ ಹಕ್ಕು, ಪರಿಚ್ಛೇದ 21ಎ ಮತ್ತು 0-14ನೆ ವಯಸ್ಸಿನ ಮಕ್ಕಳಿಗೆ ಉಚಿತ, ಕಡ್ಡಾಯ ಶಿಕ್ಷಣ ಕೊಡಬೇಕೆನ್ನುವ ಪ್ರಭುತ್ವ ನಿರ್ದೇಶನ ತತ್ವ ಪರಿಚ್ಛೇದ 45ನೇ ನಿಯಮದ ಉಲ್ಲಂಘನೆಯಾಗುತ್ತದೆ. ಮುಖ್ಯವಾಗಿ ಮೂಲಭೂತ ಹಕ್ಕುಗಳನ್ನು ಮತ್ತು ಜನಪರ ಕಲ್ಯಾಣ ಯೋಜನೆಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ನೋಡಬಾರದು ಎನ್ನುವ ಸಾಮಾನ್ಯ ತಿಳಿವಳಿಕೆ ಈ ಇಲಾಖೆಗಳಿಗೆ ಇದ್ದಂತಿಲ್ಲ. ಆರ್‍ಟಿಇ ಕಾಯ್ದೆಯ ನೀತಿಯನ್ನು ನೆಪ ಮಾಡಿಕೊಂಡು ಮೆಟ್ರಿಕ್ ಪೂರ್ವ ಸ್ಕಾಲರ್ಷಿಪ್ ರದ್ದುಗೊಳಿಸುವುದರ ಮೂಲಕ ಬಡ ಕುಟುಂಬದ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣವನ್ನೇ ಮೊಟಕು ಮಾಡಲಾಗುತ್ತಿದೆ. ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ರದ್ದುಗೊಳಿಸಿರುವ ಕ್ರಮ ಖಂಡನೀಯ. ಎಸ್‍ಸಿ, ಎಸ್‍ಟಿ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳನ್ನು ತುಳಿದು ಆಳಬೇಕು ಎಂಬ ಕೇಂದ್ರ ಸರ್ಕಾರದ ಕಾರ್ಯಸೂಚಿ ಮೇಲ್ನೋಟಕ್ಕೆ ಕಾಣುತ್ತಿದೆ. ಆಡಳಿತ ನಡೆಸುವವರಿಗೆ ಸಾರ್ವಜನಿಕ ಶಿಕ್ಷಣ, ಉಚಿತ, ಕಡ್ಡಾಯ, ಗುಣಮಟ್ಟದ ಶಿಕ್ಷಣದ ಮಹತ್ವ, ಅವಶ್ಯಕತೆ, ತಾತ್ವಿಕತೆ ಮತ್ತು ಇದಕ್ಕೂ ಪ್ರಜಾಪ್ರಭುತ್ವಕ್ಕೂ ಇರುವ ನೇರ ಸಂಬಂಧದ ಕುರಿತು ಸಹ ಈ ಪ್ರಭುತ್ವಕ್ಕೆ ತಿಳುವಳಿಕೆ ಇಲ್ಲ, ಅಥವಾ ಬೇಕಾಗಿಲ್ಲವಾ? ಎಂಬ ಪ್ರಶ್ನೆ ಈಗ ಎದುರಾಗಿದೆ. ಬಿಸಿಯೂಟ, ಸಮವಸ್ತ್ರ, ಶೂ ಹೀಗೆ ಬೇರೆ ಬೇರೆ ಸೌಲಭ್ಯ ನೀಡಿ ಬಡ ವಿದ್ಯಾರ್ಥಿಗಳಿಗೆ ಶಾಲೆಗೆ ಕರೆತಂದು ಶಿಕ್ಷಣ ನೀಡುವ ಜೊತೆಗೆ, ದಮನಿತರ ಮಕ್ಕಳು ಉದ್ಧಾರವಾಗಲಿ ಎಂಬ ಉದ್ದೇಶದಿಂದ ವಿದ್ಯಾರ್ಥಿ ವೇತನದ ವ್ಯವಸ್ಥೆ ರೂಪಿಸಲಾಗಿತ್ತು. ಅದಕ್ಕೆ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಶೇ 75-25 ಪ್ರಮಾಣದಲ್ಲಿ ಹಂಚಿಕೊಳ್ಳುವುದು ಇಲ್ಲಿಯವರೆಗೂ ನಡೆದುಕೊಂಡು ಬಂದಿತ್ತು. ಇದೀಗ ಕೇಂದ್ರ ಸರ್ಕಾರದ ಈ ಹೊಣಗೇಡಿತನದ ನಿರ್ಧಾರದಿಂದಾಗಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿರುವ ಲಕ್ಷಾಂತರ ಮಕ್ಕಳು ಅನ್ಯಾಯಕ್ಕೆ ಒಳಗಾಗಲಿದ್ದಾರೆ. ದೇಶದ ಖಾಸಗಿ ಸರ್ವೆಗಳ ಪ್ರಕಾರ ಶೇಕಡಾ 32 ರಷ್ಟು ಶೋಷಿತ ಸಮುದಾಯದ ವಿದ್ಯಾರ್ಥಿಗಳು ಪ್ರತಿವರ್ಷ ಪ್ರಾಥಮಿಕ ಹಂತದ ಶಾಲೆಗಳಿಂದ ಶಿಕ್ಷಣ ಪಡೆಯಕ್ಕಾಗದೆ ದೂರವಾಗುತ್ತಿದ್ದಾರೆ. ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿವೇತನವು 1 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳು ಪ್ರಾಥಮಿಕ ಶಿಕ್ಷಣದಿಂದ ದೂರ ಉಳಿಯಬಾರದು ಎಂಬ ಆಶಯವನ್ನು ಹೊಂದಿದೆ. ಅದಕ್ಕಾಗಿ ಸ್ಕಾಲರ್ಶಿಪ್ ನೀಡಲಾಗುತ್ತಿದೆ ಎಂಬುದನ್ನು ಸರ್ಕಾರ ಮರೆತಿರುವುದು ದುರಂತ, ಇದೊಂದು ಶೋಷಿತ ಸಮುದಾಯದ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ದೂರ ಇಡುವ ಹುನ್ನಾರ ಎಂಬಂತೆ ಕಾಣಿಸುತ್ತಿದೆ, ಕೇಂದ್ರದ ಈ ಸುತ್ತೋಲೆಯು ಸಂವಿಧಾನದ ಮೂಲಭೂತ ಶಿಕ್ಷಣದ ಹಕ್ಕನ್ನು ದುರ್ಬಲಗೊಳಿಸುವ ಪ್ರಯತ್ನವಾಗಿದೆ. ಕರೋನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಲಕ್ಷಾಂತರ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಕ್ಕಳು ಶಾಲೆಯಿಂದ ಹೊರಗುಳಿದ ಬಗ್ಗೆ ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ನೇಮಿಸಿದ್ದ ಸಮಿತಿಯು ಬಹಿರಂಗಪಡಿಸಿದ್ದ ವರದಿಯು ಅತ್ಯಂತ ಕಳವಳಕಾರಿಯಾಗಿದ್ದು, ಇದೀಗ ಆ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರಲು ಸಾಧ್ಯವಾಗುವ ಎಲ್ಲ ರೀತಿಯ ಸೌಲಭ್ಯ ಮತ್ತು ಸೌಕರ್ಯಗಳನ್ನು ಒದಗಿಸಲು ಯೋಜನೆ ರೂಪಿಸಬೇಕಾದ ಹೊತ್ತಲ್ಲಿ, ಕೇಂದ್ರದ ಇಂತಹ ಶಿಕ್ಷಣ ವಿರೋಧಿ ನಡೆಯು ದೇಶದ ಸಾಕ್ಷರತಾ ಪ್ರಮಾಣವನ್ನು ಕುಂಠಿತಗೊಳಿಸುತ್ತದೆ ಎಂದು ಹೇಳಿದರು. ಕೇಂದ್ರ ಸರ್ಕಾರ ಕೂಡಲೇ ತನ್ನ ನಿರ್ಧಾರ ಬದಲಿಸಿ ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಮತ್ತಷ್ಟು ಹೊಸ ಯೋಜನೆ ರೂಪಿಸಬೇಕು. ಜತೆಗೆ ವಿದ್ಯಾರ್ಥಿ ವೇತನ ರದ್ದತಿ ಆದೇಶ ಹಿಂಪಡೆಯಬೇಕು ಎಂದು ಲೋಕರಕ್ಷಕ ಒತ್ತಾಯಿಸಿದ್ದಾರೆ.
0 ಕಾಮೆಂಟ್‌ಗಳು