ಮತದಾರರ ಹೆಸರು ತೆಗೆದವರ ವಿರುದ್ಧ ಕಠಿಣ ಕ್ರಮಕ್ಕೆ ಎಸ್‍ಡಿಪಿಐ ಒತ್ತಾಯ : ಮರು ಸೇರ್ಪಡೆಗೆ 2 ತಿಂಗಳ ಗಡುವು ಕೋರಿಕೆ

ಮೈಸೂರು: ಜಿಲ್ಲೆಯಾದ್ಯಂತ 11 ವಿಧಾನಸಭಾ ಕ್ಷೇತ್ರಗಳಿಂದ ಸುಮಾರು 1.45 ಲಕ್ಷ ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಒತ್ತಾಯಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಜನರಿಂದ, ಜನರಿಗಾಗಿ ಜನರಿಗೋಸ್ಕರ ಚುನಾವಣೆಯ ಮೂಲಕ ಚುನಾಯಿತರಾಗಿ ಬರುವ ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮ ದೇಶದಲ್ಲಿದೆ. ಆದರೆ ಕೆಲವು ದುಷ್ಟ ಶಕ್ತಿಗಳು ಅಕ್ರಮವಾಗಿ ಮತದಾರ ಪಟ್ಟಿಯಿಂದ ಮೈಸೂರು ಜಿಲ್ಲೆಯಾದ್ಯಂತ 11 ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 1.45 ಲಕ್ಷ ಮತದಾರರ ಹೆಸರು ತೆಗೆದು ಹಾಕಿರುವುದು ಅಕ್ಷಮ್ಯ ಅಪರಾಧ. ಚುನಾವಣಾಧಿಕಾರಿಗಳು ಕೂಡಲೇ ಇದರ ವಿರುದ್ಧ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಚಾಮರಾಜ ವಿಧಾನಸಭೆ ಮತದಾರರ ಪಟ್ಟಿಯಿಂದ 16,242, ನರಸಿಂಹರಾಜ 18,007 ಕೆ.ಆರ್.ನಗರ 10,604, ಹುಣಸೂರು 10,220, ವರುಣ 11,987 ನಂಜನಗೂಡು 11,724, ಪಿರಿಯಾಪಟ್ಟಣ 8,570 ಸೇರಿದಂತೆ ಇಡೀ ಮೈಸೂರು ಜಿಲ್ಲೆಯಾದ್ಯಂತ ಸುಮಾರು 1.45 ಲಕ್ಷಕ್ಕೂ ಅಧಿಕ ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಿರುವ ಬಗ್ಗೆ ವರದಿಯಾಗಿದ್ದು, ಚುನಾವಣಾ ಆಯೋಗ ಮಾಡಬೇಕಾದ ಮತದಾರ ಪಟ್ಟಿ ಪರಿಷ್ಕರಣೆ ಕೆಲಸವನ್ನು ಕೆಲವರು ತಮಗೆ ಬೇಕಾದ ರೀತಿಯಲ್ಲಿ ತಿರುಚಿದ್ದಾರೆ. ಇದು ಹಿಂದೆಂದೂ ಕಂಡಿರದ ಬಹುದೊಡ್ಡ ಹಗರಣವಾಗಿದ್ದು, ಈ ಅಕ್ರಮದಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ಹಾಗೂ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಅನ್ಯಾಯಕ್ಕೆ ಒಳಗಾಗಿರುವ ಮತದಾರರ ಹೆಸರನ್ನು ಪುನಃ ಸೇರ್ಪಡೆ ಮಾಡಲು 2 ತಿಂಗಳ ಕಾಲಮಿತಿ ನೀಡುವುದರ ಜತೆಗೆ ಜನತೆಯಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದು ಮಜೀದ್ ಒತ್ತಾಯಿಸಿದರು. 
ಸುದ್ದಿಗೋಷ್ಠಿಯಲ್ಲಿ ಎಸ್‍ಡಿಪಿಐ ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ, ರಾಜ್ಯಸಮಿತಿ ಸದಸ್ಯ ಅಮ್ಜದ್ ಖಾನ್, ಜಿಲ್ಲಾಧ್ಯಕ್ಷ ರಫತ್ ಉಲ್ಲಾ ಖಾನ್, ಮಹಾನಗರಪಾಲಿಕೆ ಸದಸ್ಯ ಸ್ವಾಮಿ ಇದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು