ಎಲೆಕ್ಷನ್‌ ಖರ್ಚಿಗೆ ೧೫ ಕೋಟಿ ಕೊಟ್ರೆ, ಅದರಲ್ಲೂ ೧೦ ಕೋಟಿ ಜೇಬಿಗಿಳಿಸಿದ ವಿಶ್ವನಾಥ್‌: ಹಳ್ಳಿ ಹಕ್ಕಿಯ ಪುಕ್ಕಕ್ಕೆ ಬೆಂಕಿ ಇಟ್ಟ ಶ್ರೀನಿವಾಸ ಪ್ರಸಾದ್‌

ತೀಟೆ ಮಾಡೋದೆ ವಿಶ್ವನಾಥ್‌ ಚಾಳಿ :  ಸಂಸದ ಶ್ರೀನಿವಾಸಪ್ರಸಾದ್‌ ವಾಗ್ದಾಳಿ

ಮೈಸೂರು : ನಾನೇನೂ ಅಲೆಮಾರಿಗಳ ರಾಜನಲ್ಲ. ಸ್ವಾಭಿಮಾನಿಗಳ ಚಕ್ರವರ್ತಿ. ಹಾಗಂತ ಜನರೇ ನನಗೆ ಬಿರುದು ಕೊಟ್ಟಿದ್ದಾರೆ. ನಾನು ಯಾವ ಪಕ್ಷದಲ್ಲಿದ್ದರೂ ಸ್ವಾಭಿಮಾನ, ಘನತೆಯಿಂದ ಇದ್ದೀನಿ. ನಿನ್ನ ಹಾಗೆ ಹೋದ ಕಡೆಯಲ್ಲೆಲ್ಲಾ ತೀಟೆ ಮಾಡಿಕೊಂಡು ತಿರುಗುತ್ತಿಲ್ಲ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್‌ ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ವಿರುದ್ಧ ವಾಗ್ದಾಳಿ ನಡೆಸಿದರು.
ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ನಾನು ಯಾವ ಪಕ್ಷಕ್ಕೂ ಹೋಗಿಲ್ಲ ಅವರೇ ನನ್ನನ್ನು ಕರೆಸಿಕೊಂಡಿದ್ದಾರೆ. ನಾನು ಯುವ ಕಾಂಗ್ರೆಸ್‌ ಅಧ್ಯಕ್ಷನಾಗಿದ್ದಾಗ ಡಿ.ಕೆ.ಶಿವಕುಮಾರ್‌, ರಮಾನಾಥ್‌ ರೈ, ವಿಶ್ವನಾಥ್‌ ಸೇರಿದಂತೆ ೪೩ ಜನರಿಗೆ ಟಿಕೆಟ್‌ ಕೊಡಿಸಿದ್ದೆ ಎಲ್ಲರೂ ಗೆದ್ದು ಬಂದರು. ಅಷ್ಟೊಂದು ಶಕ್ತಿ ನನ್ನಲ್ಲಿತ್ತು. ಯಾವ ಪಕ್ಷದಲ್ಲಿದ್ದರೂ ನಾನು ಆಸ್ತಿಯಾಗಿದ್ದೆ, ಗೌರವ ಘನತೆಯಿಂದ ಇದ್ದೆ . ನಿನ್ನ ಹಾಗೆ ಯಾಕಾದ್ರೂ ಬಂದನಪ್ಪ ಇವನು ಎಂದು ಹೇಳಿಸಿಕೊಳ್ಳುತ್ತಿರಲಿಲ್ಲ ಎಂದು ವಿಶ್ವನಾಥ್‌ ವಿರುದ್ಧ ಗುಡುಗಿದರು.
ನಾನಿಲ್ಲದಿದ್ದರೆ ವಿಶ್ವನಾಥ್‌ ರಾಜಕೀಯ ಜೀವನ ಮುಗಿದೇ ಹೋಗುತ್ತಿತ್ತು.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ರಾಜ್ಯದಲ್ಲಿ ಅರಸು ಕಾಂಗ್ರೆಸ್‌ ಮತ್ತು ಇಂದಿರಾ ಕಾಂಗ್ರೆಸ್‌ ಎಂದು ಇಬ್ಭಾಗವಾದಾಗ ವಿಶ್ವನಾಥ್‌ ಮತ್ತು ಮಲ್ಲಿಕಾರ್ಜುನ ಖರ್ಗೆ ಅರಸು ಕಾಂಗ್ರೆಸ್‌ ಸೇರಿಕೊಂಡಿದ್ದರು. ಆಗ ಇಂದಿರಾ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ಗುಂಡೂರಾವ್‌ ಮುಖ್ಯಮಂತ್ರಿಯಾದಾಗ ಮತ್ತೆ ಅರಸು ಬೆನ್ನಿಗೆ ಚೂರಿ ಹಾಕಿ ಇಂದಿರಾ ಕಾಂಗ್ರೆಸ್‌ ಸೇರಿಕೊಂಡರು. ಆಗಲೇ ಇವರಿಗೆ ಟಿಕೆಟ್‌ ಕೊಡುವುದು ಬೇಡ ಎಂದು ವೀರಪ್ಪ ಮೊಯಿಲಿ ಹೇಳಿದ್ದರೂ ನಾನೇ ಬಲವಂತ ಮಾಡಿ ಟಿಕೆಟ್‌ ಕೊಡಿಸಿದ್ದೆ ಎಂದು ಪ್ರಸಾದ್‌ ನೆನಪಿಸಿದರು.
ರಾಜ್ಯದಲ್ಲಿ ಎಲ್ಲ ರಾಜಕಾರಣಿಗಳೂ ನನಗೆ ಗೌರವ ಕೊಡುತ್ತಾರೆ. ಇವನೊಬ್ಬನೇ ಈ ರೀತಿ ನಡೆದುಕೊಳ್ಳುವುದು. ಸೋತು ಸುಣ್ಣವಾಗಿದ್ದ ಕಾಲದಲ್ಲಿ ನಾಲ್ಕು ವರ್ಷ ದೆಹಲಿಯಲ್ಲಿ ನನ್ನ ಮನೆಯಲ್ಲಿದ್ದ ಅದನ್ನೆಲ್ಲಾ ಮರೆತುಬಿಟ್ಟಾ ವಿಶ್ವನಾಥ್‌, ನೀನು ಜೆಡಿಎಸ್‌ ನಲ್ಲಿದ್ದಾಗ ಕೆ.ಆರ್‌.ನಗರದಲ್ಲಿ ನಾನು ಹೇಳಿದವರಿಗೆ ಟಿಕೆಟ್‌ ಕೊಡಲಿಲ್ಲ ಎಂದು ನನ್ನ ಬಳಿ ನೋವು ಹೇಳಿಕೊಂಡಾಗ ನಾನೇ ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ತಿಳಿಸಿದ್ದೆ.  ಅಷ್ಟೇ ಬಿಜೆಪಿಗೆ ಬಾ ಅಂತಾ ಕರೀಲಿಲ್ಲ. ನಂತರ ಬಿಜೆಪಿಗೆ ಸೇರಲು ಹಣ ಎಷ್ಟು ಪಡೆದಿದ್ದೀಯಾ ನನಗೆ ಗೊತ್ತಿಲ್ಲ  ಉಪಚುನಾವಣೆಯಲ್ಲಿ ಸ್ಪರ್ಧಿಸಲು ೧೫ ಕೋಟಿ ಈಸ್ಕೋಂಡು ೫ ಕೋಟಿ ರೂ.  ಖರ್ಚು ಮಾಡಿ ೧೦ ಕೋಟಿ ರೂ .ಜೇಬಿಗಿಳಿಸಿದ. ಅದು ಮಾತ್ರ ನನಗೆ ಗೊತ್ತು. ಬಾಂಬೆಯಲ್ಲಿ ನೀನು ಕುಡಿದು ತಿಂದು ಮಜಾ ಮಾಡಿದ್ದೂ ನನಗೆ ಗೊತ್ತು ಎಂದು ಪ್ರಸಾದ್‌ ವಿಶ್ವನಾಥ್‌ ವಿರುದ್ಧ ಹರಿಹಾಯ್ದರು.
ಸುದ್ದಿಗೋಷ್ಠಿಯಲ್ಲಿ ಕುಂಬರಹಳ್ಳಿ ಸುಬ್ಬಣ್ಣ  ಶಿವಕುಮಾರ್‌, ಭರತ್‌ ರಾಮಸ್ವಾಮಿ, ನಂಜುಂಡಸ್ವಾಮಿ ಇದ್ದರು.
 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು