ಪಾಂಡವಪುರದಲ್ಲಿ ರೈತರಿಂದ ಮುಖ್ಯಮಂತ್ರಿಗೆ ಕಪ್ಪು ಬಾವುಟ ಪ್ರದರ್ಶನ

·   ರೈತರ ಬೇಡಿಕೆ ಈಡೇರಿಸುವಂತೆ ಒತ್ತಾಯ : ಬಿಜೆಪಿ ರೈತವಿರೋಧಿ ಸರ್ಕಾರ ಎಂದು ಆಕ್ರೋಶ 

ಪಾಂಡವಪುರ: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಶುಕ್ರವಾರ ಪಟ್ಟಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ನಡೆದ ಬಿಜೆಪಿ ಜನಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಾಹನ ಡಾ.ರಾಜಕುಮಾರ್‌ ವೃತ್ತದಲ್ಲಿ ಸಾಗುತ್ತಿದ್ದಂತೆ ಕರ್ನಾಟಕ ರಾಜ್ಯ ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್‌.ಕೆಂಪೂಗೌಡ ನೇತೃತ್ವದಲ್ಲಿ ಜಮಾಯಿಸಿದ್ದ ನೂರಾರು ಕಾರ್ಯಕರ್ತರು ಮುಖ್ಯಮಂತ್ರಿಗೆ ಕಪ್ಪು ಬಾವುಟ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಜತೆ ರೈತ ಮುಖಂಡರು ಮಾತನಾಡಲು ಅವಕಾಶ ಕಲ್ಪಿಸುವುದಾಗಿ ಹಿರಿಯ ಪೊಲೀಸ್‌ ಅಧಿಕಾರಿಗಳು ಹೇಳಿದ್ದರೂ ಸಿಎಂ ಜತೆ ಮಾತುಕತೆಗೆ ರೈತ ಮುಖಂಡರು ನಿರಾಕರಿಸಿದರು. ಮುಖ್ಯಮಂತ್ರಿ ವಾಹನ ಸಾಗುತ್ತಿದ್ದಂತೆ ಸಾವಿರಕ್ಕೂ ಹೆಚ್ಚು ರೈತರು ಕಪ್ಪು ಬಾವುಟ ಪ್ರದರ್ಶಿಸಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

 ಎ.ಎಲ್‌.ಕೆಂಪೂಗೌಡ ಮಾತನಾಡಿ, ಮುಖ್ಯಮಂತ್ರಿಗಳು ರೈತರ ಸಮಸ್ಯೆ ಈಡೇರಿಸಲು ತೀವ್ರ ನಿರ್ಲಕ್ಷ್ಯ ವಹಿಸಿದ್ದಾರೆ. ಕಳೆದ ೪೦ ದಿನಗಳಿಂದ ನಾವು ಮಂಡ್ಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ಯಾವುದಕ್ಕೂ ಸ್ಪಂದಿಸುತ್ತಿಲ್ಲ. ಹನೂರಿನಲ್ಲೂ ನಾವು ಸಿಎಂ ಭೇಟಿ ಮಾಡಲು ಹೋದಾಗ ನಮ್ಮನ್ನು ನೋಡಿ ಮುಖ ತಿರುಗಿಸಿಕೊಂಡು ಹೋದರು. ಕೇವಲ ಸಿಹಿ ಸುದ್ದಿ ಕೊಡ್ತೀನಿ ಅಂತಾರೇ, ಕಹಿ ಸುದ್ದಿಯನ್ನಾದರೂ ಕೊಡಿ ನಮ್ಮ ಕರ್ಮ ಎಂದುಕೊಳ್ಳುತ್ತೇವೆ ಎಂದು ಕಿಡಿ ಕಾರಿದರು.
ರೈತರ ಪ್ರತಿಭಟನೆ ಬಿಸಿ ವಿಚಾರ ತಿಳಿಯತ್ತಿದ್ದಂತೆ ಎಚ್ಚೆತ್ತ ಪೊಲೀಸರು ಪ್ರತಿಭಟನಾ ಸ್ಥಳದಲ್ಲಿ ಬ್ಯಾರಿಕೇಡ್‌ ಹಾಕಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿದ್ದರು. ಸಿಎಂ ವಾಹನ ಸಂಚರಿಸುವ ಮಾರ್ಗದಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ಸಿಎಂ ಜತೆ ಮಾತನಾಡಲೂ ಸಹ ಅವಕಾಶ ಕಲ್ಪಿಸಿದ್ದರೂ ರೈತ ಮುಖಂಡ ಕೆಂಪೂಗೌಡ ನಿರಾಕರಿಸಿದರು.
ನಮ್ಮ ಬೇಡಿಕೆ ಈಡೇರುವ ತನಕ ಮುಖ್ಯಮಂತ್ರಿ ಈ ರಾಜ್ಯದಲ್ಲಿ ಎಲ್ಲೇ ಪ್ರವಾಸ ಮಾಡಿದರೂ ನಾವು ಕಪ್ಪು ಬಾವುಟ ಪ್ರದರ್ಶನ ಮಾಡೇ ಮಾಡುತ್ತೇವೆ ಎಂದರು.
ಟನ್‌ ಕಬ್ಬಿಗೆ ೪,೫೦೦ ರೂ. ನಿಗದಿ, ಲೀಟರ್‌ ಹಾಲಿಗೆ ೪೦ ರೂ ಕೊಡುವುದು. ಜತೆಗೆ ವಿದ್ಯುತ್‌ ಬಾಕಿಯನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಕೆಂಪೂಗೌಡ ಒತ್ತಾಯಿಸಿದರು.
ತಾಲ್ಲೂಕು ರೈತಸಂಘದ ಅಧ್ಯಕ್ಷ ಪಿ.ನಾಗರಾಜು ಮುಖಂಡರಾದ ವಿಜಯಕುಮಾರ್‌, ಹೆಚ್‌.ಎಲ್‌.ಪ್ರಕಾಶ್‌, ವೈ.ಪಿ.ಮಂಜುನಾಥ್‌ ಮುಂತಾದವರು ಇದ್ದರು.
 
 
 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು