ಪುದುರಾಮಾಪುರಕ್ಕೆ ಬಸ್‌ ಸೌಲಭ್ಯ : ಸಂತಸ ವ್ಯಕ್ತಪಡಿಸಿದ ಶಾಲಾ ಮಕ್ಕಳು, ಗ್ರಾಮಸ್ಥರು

ಹನೂರು: ಬಸ್‌ ಸಂಚಾರ ವ್ಯವಸ್ಥೆಯಿಂದ ವಂಚಿತವಾಗಿದ್ದ ತಾಲ್ಲೂಕಿನ ಪುದುರಾಮಪುರ ಗ್ರಾಮಕ್ಕೆ ಸಾರಿಗೆ ಇಲಾಖೆಯು ಬಸ್ ಸೌಲಭ್ಯ ಕಲ್ಪಿಸಿದ್ದು, ಗ್ರಾಮಕ್ಕೆ ಬಂದ ಬಸ್ಸಿಗೆ ಸಾರ್ವಜನಿಕರು ಹೂವಿನಿಂದ ಅಲಂಕರಿಸಿ, ಪೂಜೆ ಮಾಡಿ ಸಿಹಿ ಹಂಚಿ ಸಂಭ್ರಮಿಸಿದರು.
ಪುದುರಾಮಾಪುರಕ್ಕೆ ಬಸ್‌ ಸೌಕರ್ಯ ಇಲ್ಲದ ಕಾರಣ ಸಾರ್ವಜನಿಕರು, ಶಾಲಾ ಮಕ್ಕಳು ದಿನನಿತ್ಯ ದೂರದ ಊರುಗಳಿಗೆ ತೆರಳಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ರೈತ ಸಂಘ ಮುಖಂಡರು ಮತ್ತು ಗ್ರಾಮಸ್ಥರು ಸೇರಿ ಬಸ್‌ ಸಂಪರ್ಕ ಕಲ್ಪಿಸುವಂತೆ ಸಾರಿಗೆ ಇಲಾಖೆಗೆ ಮನವಿ ಮಾಡಿದ್ದರು.
ರೈತರ ಮನವಿಗೆ ಸ್ಪಂದಿಸಿದ ಸಾರಿಗೆ ಇಲಾಖೆ ಗ್ರಾಮಕ್ಕೆ ಬಸ್ ವ್ಯವಸ್ಥೆ ಮಾಡಿ ಕೊಟ್ಟಿದೆ. ಅಜ್ಜೀಪುರ, ಅಂಬಿಕಾಪುರ, ನಾಗಣ್ಣ ನಗರ, ಪುದುರಾಮಪುರ, ಪಳನಿಮೆಡು, ರಾಮಾಪುರ ಮಾರ್ಗವಾಗಿ ಈ ಬಸ್‌ ಸಂಚರಿಸಲಿದ್ದು, ಇದರಿಂದ ಈ ಭಾಗದ ಜನರಿಗೆ ಮತ್ತು ಶಾಲಾ ಮಕ್ಕಳಿಗೆ ಅನುಕೂಲವಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ವೇಲುಸ್ವಾಮಿ ಮಾತನಾಡಿ, ನಮ್ಮ ಗ್ರಾಮಕ್ಕೆ ಬಸ್ ಸಂಚಾರವೇ ಇರಲಿಲ್ಲ, ಸಾರಿಗೆ ಇಲಾಖೆಗೆ ರೈತಸಂಘದಿಂದ ನಿರಂತರವಾಗಿ ಮನವಿ ಮಾಡಿದ್ದರ ಪರಿಣಾಮ ಇಲಾಖೆ ನಮ್ಮ ಮನವಿಗೆ ಸ್ಪಂದಿಸಿ ಬಸ್ ವ್ಯವಸ್ಥೆ ಕಲ್ಪಿಸಿದೆ. ಇದರಿಂದ ಈ ಭಾಗದ ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ಅನುಕೂಲವಾಗಿದೆ. ಸಾರಿಗೆ ಇಲಾಖೆಗೆ ಅಭಿನಂದನೆಗಳು ಎಂದರು.
ಸಂದರ್ಭದಲ್ಲಿ ಗಂಗನ ದೊಡ್ಡಿ ಗ್ರಾಮ ಘಟಕದ ರೈತ ಸಂಘದ ಅಧ್ಯಕ್ಷ ಅಮ್ಜದ್ ಖಾನ್, ಕಾಂಚಳ್ಳಿ ಘಟಕದ ಅಧ್ಯಕ್ಷ ಬಸವರಾಜು, ಕನಕ, ಪಳನಿ ಸ್ವಾಮಿ,ಕುಮಾರ್, ಶಕ್ತಿವೇಲು, ರವಿಚಂದ್ರನ್ ಹಾಗೂ ರೈತ ಮುಖಂಡರು, ಶಾಲಾ ಮಕ್ಕಳು, ಗ್ರಾಮಸ್ಥರು ಹಾಜರಿದ್ದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು