ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ : ಮುಖ್ಯೋಪಾಧ್ಯಾಯನ ಬಂದನ, ಸೇವೆಯಿಂದ ಅಮಾನತು

ಪಾಂಡವಪುರ: ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ತಾಲ್ಲೂಕಿನ ಕಟ್ಟೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನನ್ನು ಕೆಆರ್‌ಎಸ್‌ ಪೊಲೀಸರು ಬಂಧಿಸಿದ್ದು, ಸೇವೆಯಿಂದಲೂ ಅಮಾನತ್ತು ಮಾಡಲಾಗಿದೆ.
52 ವರ್ಷದ ಚಿನ್ಮಯಾನಂದಮೂರ್ತಿ ಬಂಧಿತ ಆರೋಪಿ. ಈತ ಕಟ್ಟೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಾಗಿದ್ದು, ತರಗತಿಗೆ ಬರುವ ವಿದ್ಯಾರ್ಥಿನಿಯರನ್ನು ತನ್ನ ಕಚೇರಿಗೆ ಕರೆಸಿ ಮೈ ಮುಟ್ಟುವುದು, ಲೈಂಗಿಕ ಕಿರುಕುಳ ನೀಡುವುದು ಸೇರಿದಂತೆ ತನ್ನ ಮೊಬೈಲ್‌ನಲ್ಲಿರುವ ಅಶ್ಲೀಲ ದೃಶ್ಯಗಳನ್ನು ವಿದ್ಯಾರ್ಥಿನಿಯರಿಗೆ ತೋರಿಸಿ ನೀವೂ ನನಗೆ ಈ ರೀತಿ ಮಾಡಿ ಎಂದು ಹೇಳುತ್ತಿದ್ದ ಎಂದು ಶಾಲೆಯ ಪಕ್ಕದಲ್ಲಿರುವ ಆರ್‌ಎಂಎಸ್‌ಎ ವಿದ್ಯಾರ್ಥಿನಿ ನಿಲಯದ ವಾರ್ಡನ್‌ ಕೆ.ಎಸ್‌.ನಮಿತಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಬುಧವಾರ ರಾತ್ರಿ ಸುಮಾರು 8 ಗಂಟೆಗೆ ಮುಖ್ಯೋಪಾಧ್ಯಾಯ ಚಿನ್ಮಯಾನಂದಮೂರ್ತಿ ಅವರನ್ನು ಕಚೇರಿಯಲ್ಲಿ ಕೂಡಿ ಹಾಕಿದ ವಿದ್ಯಾರ್ಥಿನಿಯರು ಗ್ರಾಮಸ್ಥರನ್ನು ಕರೆಸಿ ಆರೋಪಿ ಚಿನ್ಮಯಾನಂದಮೂರ್ತಿಯನ್ನು ಪೊಲೀಸರಿಗೆ ಒಪ್ಪಿಸಿದರು.
ಗುರುವಾರ ಬೆಳಿಗ್ಗೆ ಗ್ರಾಮಸ್ಥರು ಶಾಲೆ ಎದುರು ಪ್ರತಿಭಟನೆ ನಡೆಸಿ ಆರೋಪಿ ಚಿನ್ಮಯಾನಂದಮೂರ್ತಿಯನ್ನು ಸೇವೆಯಿಂದ ಅಮಾನತ್ತು ಮಾಡುವಂತೆ ಒತ್ತಾಯಿಸಿದರು. ಸ್ಥಳಕ್ಕೆ ಶಾಸಕ ಸಿ.ಎಸ್‌.ಪುಟ್ಟರಾಜು ಭೇಟಿ ನೀಡಿ ತಪ್ಪಿತಸ್ಥನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಅಲ್ಲದೇ ಸ್ಥಳಕ್ಕೆ ಭೇಟಿ ನೀಡಿದ್ದ ಡಿಡಿಪಿಐ ಆರೋಪಿಯನ್ನು ಅಮಾನತ್ತು ಮಾಡಿರುವುದಾಗಿ ಹೇಳಿದರು.
ಆರೋಪಿ ಚಿನ್ಮಯಾನಂದಮೂರ್ತಿ ವಿರುದ್ಧ ಪೋಕ್ಸೋ ಸೇರಿದಂತೆ ವಿವಿಧ ಪ್ರಕರಣ ದಾಖಲಾಗಿದೆ.
 
 
 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು