ದಸರಾ ಎಕ್ಸಿಬಿಷನ್‍ನಲ್ಲಿ ಅಗ್ನಿ ಅವಘಡ: 3 ಮಳಿಗೆಗಳು ಬೆಂಕಿಗಾಹುತಿ
ಡಿಸೆಂಬರ್ 15, 2022
ಮೈಸೂರು: ಅಗ್ನಿ ಅವಘಡದಿಂದ ದಸರಾ ವಸ್ತು ಪ್ರದರ್ಶನದ ಆವರಣದಲ್ಲಿರುವ ಮೂರು ಮಳಿಗೆಗಳು ಸುಟ್ಟುಹೋಗಿರುವ ಘಟನೆ ಇಂದು ನಡೆದಿದೆ. ವಸ್ತುಪ್ರದರ್ಶನದ ಮುಖ್ಯ ಪ್ರವೇಶದ್ವಾರದ ಬಳಿಯಿರುವ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರ ಕಛೇರಿಗೆ ಹೊಂದಿಕೊಂಡಂತಿರುವ ಮೂರು ಮಳಿಗೆಗಳಲ್ಲಿ ಇಂದು ಬೆಳಿಗ್ಗೆ 7 ಗಂಟೆಯ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿತು. ಮೇಲ್ಚಾವಣಿಯಿಂದ ದಟ್ಟವಾದ ಹೊಗೆ ಬರುತ್ತಿರುವುದನ್ನು ಗಮನಿಸಿದ ಪ್ರಾಧಿಕಾರದ ಸಿಬ್ಬಂದಿಗಳು ಹಾಗೂ ಇತರ ಮಳಿಗೆಗಳ ಬಾಡಿಗೆದಾರರು ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದರು. ಕೂಡಲೇ ಸ್ಥಳಕ್ಕೆ ಧಾವಿಸಿ ಬಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಮೈಸೂರು ನಗರ ಪೊಲೀಸ್ ವತಿಯಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸ್ಥಾಪಿಸಲಾಗಿದ್ದ ಸೈಬರ್ ಕ್ರೈಮ್ ಮತ್ತು ಸಂಚಾರ ಪೊಲೀಸ್ ವಿಭಾಗದ ಮಳಿಗೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಳಿಗೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮಳಿಗೆಗಳು ಸಂಪೂರ್ಣ ಬೆಂಕಿಗಾಹುತಿಯಾಗಿವೆ. ಮಳಿಗೆಗಳಲ್ಲಿದ್ದ ಪೀಠೋಪಕರಣಗಳು, ಪ್ರಚಾರ ಸಾಮಗ್ರಿಗಳು, ಮೇಲ್ಛಾವಣಿಗೆ ಅಳವಡಿಸಿದ್ದ ಫಾಲ್ಸ್ ರೂಫಿಂಗ್ ಮುಂತಾದವು ಸುಟ್ಟು ಭಸ್ಮವಾಗಿವೆ. ಒಂದು ಮಳಿಗೆಯಲ್ಲಿದ್ದ ಟಿವಿಯ ಪ್ಲಗ್ ಪಾಯಿಂಟ್‍ನಲ್ಲಿ ಸರಿಯಾಗಿ ವಿದ್ಯುತ್ ಸರಬರಾಜಾಗುತ್ತಿರಲಿಲ್ಲ ಎನ್ನಲಾಗಿದ್ದು ಅದರಿಂದ ಉಂಟಾದ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದೆ. ಆದರೆ ಬೆಂಕಿ ಅವಘಡಕ್ಕೆ ಬೇರೇನಾದರೂ ಕಾರಣವಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸ್ಥಳಕ್ಕೆ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
0 ಕಾಮೆಂಟ್‌ಗಳು