ಜೆಡಿಎಸ್-ಬಿಜೆಪಿ ಕುತಂತ್ರದಿಂದ ಕಳೆದ ಸಲ ಸೋಲು : ಡಾ.ಎಚ್.ಸಿ.ಮಹದೇವಪ್ಪ ಬೇಸರ
ಡಿಸೆಂಬರ್ 19, 2022
ಟಿ.ನರಸೀಪುರ: ಕಳೆದ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಒಂದಾಗಿ ಕುತಂತ್ರ ರಾಜಕಾರಣ ಮಾಡಿದ ಕಾರಣ ನನಗೆ ಸೋಲಾಯಿತು ಎಂದು ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹೇಳಿದರು. ಬನ್ನೂರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ನಾನು ಮಾಡಿದ ಕೆಲಸಗಳನ್ನು ನಾನೇ ಮಾಡಿದೆ ಎಂದು ಎಲ್ಲೂ ಹೇಳಿಕೊಂಡು ತಿರುಗುತ್ತಿಲ್ಲ. ಆದರೆ, ನನ್ನ ಕೆಲಸವನ್ನು ನಾನು ಮಾಡಿಸಿದ್ದೇನೆಂದು ಬೇರೆಯವರು ಹೇಳಿಕೊಂಡು ಪ್ರಚಾರ ಗಿಟ್ಚಿಸಿಕೊಳ್ಳುತ್ತಿದ್ದಾರೆಂದು ಪರೋಕ್ಷವಾಗಿ ಶಾಸಕ ಅಶ್ವಿನ್ ಕುಮಾರ್ ಅವರನ್ನು ಟೀಕಿಸಿದರು. ಬಿಜೆಪಿ, ಜೆಡಿಎಸ್ ಪಕ್ಷಗಳ ನಾಯಕರುಗಳಾದಂತಹ ಯಡಿಯೂರಪ್ಪ, ಬೊಮ್ಮಾಯಿ, ಕುಮಾರಸ್ವಾಮಿ ಸೇರಿದಂತೆ ಹಲವಾರು ನಾಯಕರಿಗೆ ನಾನು ಸಚಿವನಾಗಿದ್ದಾಗ ಹಲವಾರು ಜನಪರ ಕೆಲಸಗಳನ್ನು ಮಾಡಿಕೊಟ್ಚಿದ್ದೇನೆ. ಮುಂಬರುವ ಚುನಾವಣೆಯಲ್ಲೂ ಸಹ ಬಿಜೆಪಿ, ಜೆಡಿಎಸ್ ಒಳಒಪ್ಪಂದ ಮಾಡಿಕೊಂಡು ಕಣಕ್ಕಿಳಿಯಲಿವೆ. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಸಂವಿಧಾನಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಜೆಡಿಎಸ್ ತನ್ನ ಸ್ವಂತ ಬಲದ ಮೇಲೆ ಈ ಭೂಮಿ ಇರುವ ತನಕ ಅಧಿಕಾರಕ್ಕೇರಲು ಸಾಧ್ಯವೇ ಇಲ್ಲ. ಕಾಂಗ್ರೆಸ್ ತನ್ನ ಅಧಿಕಾರವಧಿಯಲ್ಲಿ ಜನಪರ ಕೆಲಸಗಳನ್ನೇ ಮಾಡುತ್ತಾ ಬಂದಿದೆ. ಈಗ ಜನರಿಗೂ ಅರ್ಥವಾಗಿದೆ ಸುಭದ್ರ ಸರ್ಕಾರ ಹಾಗೂ ಜನರ ರಕ್ಷಣೆ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಎಂದು. ಹೀಗಾಗಿ ಈ ಬಾರಿ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಅಧಿಕಾರಕ್ಕೆ ತರಲಿದ್ದಾರೆ ಎಂದರು.
0 ಕಾಮೆಂಟ್‌ಗಳು