ಪುರಾಣಿ ಪೋಡಿನ ಸೋಲಿಗರ ಬದುಕಿನ ಶೋಚನೀಯ ಕತೆ

ಅಭಿವೃದ್ಧಿಗೆ ಅಡ್ಡಿಯಾದ ಅರಣ್ಯ ಇಲಾಖೆ ನಿಯಮಾವಳಿ

ವಾಹನ ಸಂಚಾರ ಸಾಧ್ಯವಾಗದ ಡಾಂಬರು ಕಾಣದ ರಸ್ತೆ

ವಿಶೇಷ ವರದಿ: ಗೂಳೀಪುರ ಎನ್. ವಿವೇಕಾನಂದ  
ಯಳಂದೂರು : ಕಲ್ಲು ಮುಳ್ಳುಗಳ ರಸ್ತೆ, ಮೇಲ್ಛಾವಣಿಯೇ ಇಲ್ಲದ ಬಿರುಕು ಬಿಟ್ಟ ಮನೆಗಳು, ಕಾಡು ಪ್ರಾಣಿಗಳ ಉಪಟಳದಲ್ಲೇ ಉತ್ತಿ, ಬಿತ್ತಿ, ಬೆಳೆದು ತಿನ್ನಬೇಕಾದ ಪರಿಸ್ಥಿತಿ, ಕಾಯಿಲೆಗೆ ತುತ್ತಾದಲ್ಲಿ ತಕ್ಷಣ ಆಸ್ಪತ್ರೆಗೆ ಹೋಗಲು ಪರದಾಡಬೇಕಾದ ಅನಿವಾರ್ಯತೆ, ಇದ್ಯಾವುದೋ ಓಬಿರಾಯನ ಕಾಲದ ಕತೆಯಲ್ಲ. ಪುರಾಣಿ ಪೋಡಿನ ಸೋಲಿಗರ ದೈನಂದಿನ ಬದುಕಿನ ಶೋಚನೀಯ ಕತೆ.  
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಯಾತ್ರಾ ಕ್ಷೇತ್ರವಾಗಿರುವ ಬಿಳಿಗಿರಿರಂಗನಬೆಟ್ಟದ ಸೋಲಿಗರ ಗ್ರಾಮ ಪುರಾಣಿ ಪೋಡಿನ ಇಂದಿನ ನೈಜ ದುಃಸ್ಥಿತಿ. 150ಕ್ಕೂ ಹೆಚ್ಚು ಸೋಲಿಗ ಕುಟುಂಬಗಳು ಇಲ್ಲಿ ವಾಸ ಮಾಡುತ್ತಿದ್ದು, ಮೂಲ ಸೌಲಭ್ಯಗಳು ಇಲ್ಲಿ ಮರಿಚಿಕೆಯಾಗಿವೆ. 


ವಾಹನ ಸಂಚಾರ ಅಸಾಧ್ಯವಾಗಿ ರೋಗಿಯನ್ನು ನಡೆಸಿಕೊಂಡು ಹೋಗುತ್ತಿರುವ ದೃಶ್ಯ
ಯಳಂದೂರು ಮಾರ್ಗವಾಗಿ ಬಿಳಿಗಿರಿರಂಗನಬೆಟ್ಟಕ್ಕೆ ತೆರಳುವ ಮುಖ್ಯರಸ್ತೆಯ ಬಳಿಯ ಚೈನ್ ಗೇಟ್‍ನಿಂದಷ್ಟೇ ಈ ಪೋಡಿಗೆ ತೆರಳಬೇಕು. ಡಾಂಬರ್ ಕಾಣದ ಕಚ್ಚಾ ರಸ್ತೆ, ಮಳೆಯಿಂದ ಮೇಲೆದ್ದ ಕಲ್ಲುಗಳು, ಈ ರಸ್ತೆಯಲ್ಲಿ ತಿರುಗಾಡುವುದೆಂದರೇ ಯಮಯಾತನೆ. ವಾಹನಗಳ ಪಾಡಂತೂ ಹೇಳತೀರದು. ಕಾಡಿನಲ್ಲಿರುವ ಈ ಪೋಡಿನ ಮನೆಗಳೆಲ್ಲಾ ಶಿಥಿಲವಾಗಿದ್ದು, ಮಳೆ, ಗಾಳಿಗೆ ಇಂದೋ ನಾಳೆಯೋ ಉದುರುವಂತಿವೆ. ಕುಡಿಯುವ ನೀರಿನ ಕೈಪಂಪು ಕೆಟ್ಟು ವರ್ಷಗಟ್ಟಲೇ ಕಳೆದಿದೆ. ದೂರದ ಹಳ್ಳದ ನೀರು ಸೋಲಿಗರ ಜೀವಸೆಲೆ. ಯಾರಿಗಾದರೂ ಅನಾರೋಗ್ಯವಾದಲ್ಲಿ ಮುಖ್ಯ ರಸ್ತೆಯ ತನಕ ನಡೆದೇ ಹೋಗಬೇಕು. ಇಲ್ಲ ರೋಗಿಷ್ಟರನ್ನು ಹೊತ್ತು ಸಾಗಬೇಕು. ವಾಹನಗಳಂತೂ  ಸಂಚರಿಸಲಾಗದಷ್ಟು ಈ ರಸ್ತೆ ಹದಗೆಟ್ಟಿದೆ. 
ಉರಿಯದ ಸೋಲಾರ್ ದೀಪಗಳು : ಈ ಹಿಂದೆ ಪೋಡಿಗೆ ಸೋಲಾರ್  ದೀಪಗಳನ್ನು ಅಳವಡಿಸಲಾಗಿದ್ದು, ಸರಿಯಾದ ನಿರ್ವಹಣೆ ಇಲ್ಲದೇ ಸಂಪೂರ್ಣ ಕೆಟ್ಟಿವೆ. ಇದರಿಂದ ಕತ್ತಲು ಕವಿಯುವ ಮುನ್ನ ಪೋಡಿ ಸೇರಬೇಕು. ಇದು ಪುರಾಣಿ ಪೋಡಿನ ಸೋಲಿಗರ ಬದುಕಿನ ಶೋಚನೀಯ ಕತೆ. 
ಪೋಡಿನ ಸುತ್ತ ಸೋಲಾರ್ ಬೇಲಿ ಇಲ್ಲದ ಕಾರಣ, ಕಾಡು ಪ್ರಾಣಿಗಳು ದಾಳಿ ನಡೆಸಿ ಬೆಳೆಗಳನ್ನು ನಾಶ ಮಾಡುತ್ತಿವೆ. ಪೋಡಿ ಜನರ ಸಂಕಷ್ಟ ನಿವಾರಣೆಗೆ ನೀಡಿದ ದೂರುಗಳು ಧೂಳು ಕುಡಿಯುತ್ತಿವೆ. ಅಧಿಕಾರಿಗಳು, ಜನಪ್ರತಿನಿಧಿಗಳ ಭರವಸೆಯೇ ಬದುಕಿಗೆ ಆಧಾರವಾಗಿವೆ. ಅಭಿವೃದ್ಧಿಗೆ ಅರಣ್ಯ ಇಲಾಖೆಯ ಕಠಿಣ ನಿಯಮಾವಳಿಗಳು ಅಡ್ಡಿಯಾಗಿದ್ದು, ಇದೇ ತಿಂಗಳ 12ಕ್ಕೆ ನಾಡಿನ ದೊರೆ ಜಿಲ್ಲೆಗೆ ಭೇಟಿ ನೀಡಲಿದ್ದು, ಸಾವಿರಾರು ಕೋಟಿಯ ಅಭಿವೃದ್ಧಿ ಕಾವiಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಇದರ ಒಂದಷ್ಟು ಪ್ರಯೋಜನ ನಮ್ಮ ಪೋಡಿಗೂ ಸಿಗಲಿ ಎಂದು ಸ್ಥಳೀಯರಾದ ನಾಗರಾಜು ಮತ್ತು ದಾಸ್ ಆಸೆಯಿಂದ ಹೇಳುತ್ತಾರೆ.

ಅರಣ್ಯ ಇಲಾಖೆ ಅನುಮತಿ ಅಗತ್ಯ
ಬಿಆರ್‍ಟಿ ಅರಣ್ಯದಲ್ಲಿರುವ ಪುರಾಣಿ ಪೋಡಿಗೆ ಮೂಲಭೂತ ಸೌಲಭ್ಯ ನೀಡುವುದು ಇಲಾಖೆ ಕರ್ತವ್ಯವಾಗಿದ್ದು, ರಸ್ತೆ ಅಭಿವೃದ್ಧಿಗೆ ಅರಣ್ಯ ಇಲಾಖೆಯಿಂದ ಅನುಮತಿ ದೊರೆತ ತಕ್ಷಣ ಕಾಮಗಾರಿ ಪ್ರಾರಂಭಿಸುತ್ತೇವೆ.
-ಮಂಜುಳ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ, ಚಾಮರಾಜನಗರ
ಅನುದಾನಕ್ಕೆ ಕೊರತೆ ಇಲ್ಲ
ಪುರಾಣಿ ಪೋಡಿಗೆ ರಸ್ತೆ ನಿರ್ಮಿಸಲು 46 ಲಕ್ಷ ರೂ ವೆಚ್ಚದ ಕ್ರಿಯಾ ಯೋಜನೆ ಮಾಡಲಾಗಿದ್ದು, ಅನುದಾನದ ಕೊರತೆಯಿಲ್ಲ. ಆದರೆ, ಅರಣ್ಯ ಇಲಾಖೆಯಿಂದ ಅನುಮತಿ ಇನ್ನೂ ದೊರಕಿಲ್ಲ.
-ಹರೀಶ್, ಎಇಇ, ಯಳಂದೂರು



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು