ಪಶುವೈದ್ಯರ ನಿರ್ಲಕ್ಷ್ಯಕ್ಕೆ ಮತ್ತೊಂದು ಕರು ಸಾವು : ಹರಡುತ್ತಿರುವ ಜಾನುವಾರುಗಳ ಚರ್ಮಗಂಟು ರೋಗ

 

-ಶಾರೂಕ್ ಖಾನ್. ಹನೂರು

ಹನೂರು: ತಾಲೂಕಿನ ಕೆವಿಎನ್ ದೊಡ್ಡಿ ಗ್ರಾಮದಲ್ಲಿ ಜಾನುವಾರುಗಳಿಗೆ ಚರ್ಮದ ಗಂಟು ರೋಗ ದಿನೇ ದಿನೇ ಉಲ್ಬಣಗೊಳ್ಳುತ್ತಿದ್ದು, ಸಕಾಲಕ್ಕೆ ಚಿಕಿತ್ಸೆ ನೀಡದ ಪಶುವೈದ್ಯರ ನಿರ್ಲಕ್ಷ್ಯಕ್ಕೆ ನಿನ್ನೆ ಸಂಜೆ ಮತ್ತೊಂದು ಕರು ಸಾವನ್ನಪ್ಪಿದೆ.
ಗ್ರಾಮದ ನಾಗಲಕ್ಷ್ಮಿ ನಂಜಪ್ಪ, ನಾಗರಾಜ ದೇವತಿಮ್ಮಯ್ಯ ಅವರಿಗೆ ಸೇರಿದ ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡು ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಗದ ಕಾರಣ ಜಾನುವಾರುಗಳು ಸಾಯುತ್ತಿವೆ. ಅಲ್ಲದೇ, ಎಲ್ಲೇಮಾಳ ಸಮೀಪದ ಕೆಂಚಯ್ಯನ ದೊಡ್ಡಿ ಗ್ರಾಮದ ಕೆವಿ ಸಿದ್ದಪ್ಪ ಅವರ ಜಾನುವಾರುಗಳೂ ಚರ್ಮದ ಗಂಟು ರೋಗಕ್ಕೆ ತುತ್ತಾಗಿವೆ.
ಪಶುಸಂಗೋಪನೆಯನ್ನೇ ನಂಬಿರುವ ಈ ಭಾಗದ ರೈತರು ತಮ್ಮ ಜಾನುವಾರುಗಳಿಗೆ ಹರಡುತ್ತಿರುವ ಮಾರಕ ಚರ್ಮದ ಗಂಟು ರೋಗದಿಂದ ಭಯಭೀತರಾಗಿದ್ದಾರೆ. ಈಗಾಗಲೇ ಹತ್ತಾರು ಜಾನುವಾರುಗಳು ಮೃತಪಟ್ಟಿವೆ. ಈ ಬಗ್ಗೆ ಪಶುವೈದ್ಯರಿಗೆ ಹಲವು ಬಾರಿ ಮನವರಿಕೆ ಮಾಡಿಕೊಟ್ಟರೂ ಅವರು ಸೂಕ್ತ ಕಾಲದಲ್ಲಿ ಬಂದು ಚಿಕಿತ್ಸೆ ನೀಡುತ್ತಿಲ್ಲ ಎಂಬುದು ಈ ಭಾಗದ ಜನರ ಅಳಲು. 
ಕೂಡಲೇ ಈ ಬಗ್ಗೆ ಜಿಲ್ಲಾಧಿಕಾರಿಗಳು, ತಾಲ್ಲೂಕು ಆಡಳಿತ, ಶಾಸಕರು ಗಮನ ಹರಿಸಿ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಇಲ್ಲದಿದ್ದಲ್ಲಿ ಮೃತಪಟ್ಟ ಜಾನುವಾರುಗಳನ್ನು ಪಶುಸಂಗೋಪನಾ ಇಲಾಖೆ ಎದುರಿಟ್ಟು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು