ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ, ಗಡಿ ಸಮಸ್ಯೆ ಇತ್ಯರ್ಥಕ್ಕೆ ದೆಹಲಿಗೆ ಪಯಣ : ಸಿಎಂ ಬಸವರಾಜ ಬೊಮ್ಮಾಯಿ
ಡಿಸೆಂಬರ್ 13, 2022
ಮೈಸೂರು: ಗಡಿ ವಿವಾದ ಸಮಸ್ಯೆ ಬಗೆಹರಿಸಲೆಂದೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದಿರುವುದು. ಈ ವೇಳೆ ಕರ್ನಾಟಕದ ನಿಲುವು ಏನು ಎಂಬುದನ್ನು ನಾವು ಆ ಸಭೆಯಲ್ಲಿ ತಿಳಿಸುತ್ತೇವೆ. ಸಚಿವ ಸಂಪುಟ ವಿಸ್ತರಣೆ ಚರ್ಚೆಗಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು. ಚಾಮರಾಜನಗರ ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ತೆರಳಲು ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಮಂಗಳವಾರ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಧ್ಯಮದವರೊಂದಿಗೆ ಮಾತನಾಡಿದರು. ಮಹಾರಾಷ್ಟ್ರ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ನಿಲುವನ್ನು ತಿಳಿಸುತ್ತೇನೆ. ಈ ಹಿಂದೆ ಏನೆಲ್ಲಾ ಆಗಿದೆ. ಸುಪ್ರೀಂ ಕೋಟ್9 ನಲ್ಲಿರುವ ವಿಚಾರವನ್ನು ಮನವರಿಕೆ ಮಾಡಲಾಗುವುದು ಎಂದು ತಿಳಿಸಿದರು. ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ನಮ್ಮನ್ನು ದೆಹಲಿಗೆ ಕರೆದಿಲ್ಲ, ಕರೆದಿರುವುದು ಗಡಿ ವಿಚಾರಕ್ಕೆ ಸಂಬಂಧ ಪಟ್ಟಂತೆ. ಗಡಿ ವಿಚಾರ ಮುಗಿದ ನಂತರ ಸಚಿವ ಸಂಪುಟ ವಿಸ್ತರಣೆ, ಅಥವಾ ಪುನರ್ ರಚನೆ ಬಗ್ಗೆ ಕೇಳಿದರೆ. ಅದಕ್ಕೆ ಸಂಬಂದ ಪಟ್ಟಂತೆ ಸಿದ್ದತೆ ಮಾಡಿಕೊಂಡೆ ಹೋಗಿರುತ್ತೇನೆ. ಅದಕ್ಕೆ ಸಂಬಂಧ ಪಟ್ಟಂತೆಯೂ ಮಾತನಾಡಲಿದ್ದೇನೆ ಎಂದರು. ಕಾಂಗ್ರೆಸ್ ನವರು ಒಟ್ಟಾಗಿ ಹೋಗುವುದಾಗಿ ಹೇಳಿದ್ದಾರಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ನವರು ಒಟ್ಟಾಗಿ ಹೋಗಲಿ, ಬೇರೆ ಹೋಗಲಿ ಅದು ನಮಗೆ ಸೇರಿದ ವಿಷಯವಲ್ಲ. ಅವರ ಮನಸ್ಸಿನಲ್ಲೇನಿದೆ ಎಂಬುದನ್ನು ಮಾಧ್ಯಮಗಳೇ ಜನರಿಗೆ ತೋರಿಸುತ್ತಿದ್ದಾರೆ. ಅವರು ಮಾಡಿರುವ ಅನ್ಯಾಯಗಳನ್ನು ಜನರು ಮರೆತಿದ್ದಾರೆ ಎಂದುಕೊಂಡಿದ್ದಾರೆ.ಮಹದಾಯಿ ಯೋಜನೆ ಸಮಸ್ಯೆ ಆಗಿದ್ದು ಕಾಂಗ್ರೆಸ್ ಪಕ್ಷದಿಂದ.ಅವರ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಗೋವಾ ಚುನಾವಣೆ ಸಂದರ್ಭದಲ್ಲಿ ಒಂದು ಹನಿ ನೀರನ್ನು ಕೊಡುವುದಿಲ್ಲ ಎಂದರು, ಕಾಂಗ್ರೆಸ್ ನವರು ಐದು ವರ್ಷ ಅಧಿಕಾರದಲ್ಲಿದ್ದಾಗ ಯಾಕೆ ಮಹದಾಯಿ ಯೋಜನೆ ಜಾರಿ ಮಾಡಲಿಲ್ಲ, ಇವರು ಚಾನೆಲ್ ಮೇಲೆ ಗೋಡೆ ಕಟ್ಟಿದ್ದು ಬಿಟ್ಟರೆ ಬೇರೆ ಏನು ಮಾಡಲಿಲ್ಲ. ಕೃಷ್ಣ ನದಿ ನೀರು ಹಂಚಿಕೆ ವಿಚಾರದಲ್ಲೂ ನ್ಯಾಯಾಲಯದಲ್ಲಿ ತಮ್ಮ ಹಕ್ಕನ್ನು ಪ್ರತಿಪಾದನೆ ಮಾಡಲು ಮೀನಮೇಷ ಎಣಿಸಿದರು. ಇವರಿಗೆ ಬಿಜೆಪಿ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಬಗ್ಗೆ 40 ವರ್ಷ ದಿಂದ ಹೋರಾಟ ಮಾಡುತ್ತಾ ಬಂದಿದ್ದರೂ ಕಾಂಗ್ರೆಸ್‍ನವರು ಆ ಸಮುದಾಯದ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಒಳ ಮೀಸಲಾತಿ ನೀಡುತ್ತೇವೆ ಎಂದು ಮೊನ್ನೆ ಸಿದ್ಧರಾಮಯ್ಯ ಟ್ವೀಟ್ ಮಾಡಿದ್ದಾರೆ. ಇವರು ಐದು ವರ್ಷ ಆಡಳಿತದಲ್ಲಿದ್ದಾಗ ಒಳ ಮೀಸಲಾತಿ ಜಾರಿಗೊಳಿಸುವ ಧೈರ್ಯ ಯಾಕೆ ಮಾಡಲಿಲ್ಲ. ಇವರು ಅಧಿಕಾರದಲ್ಲಿದ್ದಾಗ ಒಳ ಮೀಸಲಾತಿ ಜಾರಿಗೊಳಿಸುವಂತೆ ಒಂದು ದೊಡ್ಡ ಸಮಾವೇಶ ಮಾಡಲಾಗಿತ್ತು. ಆ ಸಮಾವೇಶದಲ್ಲಿ ಭಾಗವಹಿಸಿದ ಸಿದ್ದರಾಮಯ್ಯ ಬರಿ ದೀಪ ಹಚ್ಚಿ ಬಂದರೆ ಹೊರತು ಒಳ ಮೀಸಲಾತಿ ಜಾರಿ ಬಗ್ಗೆ ಒಂದೇ ಒಂದು ಮಾತನ್ನು ಆಡಲಿಲ್ಲ, ಇವರ ಎಲ್ಲಾ ನಡೆ ನುಡಿ ಜನರಿಗೆ ಗೊತ್ತಿದೆ. ಪದೇ ಪದೇ ಜನರನ್ನು ಇವರು ಮರಳು ಮಾಡಲು ಸಾಧ್ಯವಿಲ್ಲ ಎಂದು ಲೇವಡಿ ಮಾಡಿದರು. ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಕುರಿತು ಕೇಂದ್ರ ಸರ್ಕಾರ ಗೊಂದಲ ಇರುವುದರ ಬಗ್ಗೆ ಹೇಳಿದಿಯಲ್ಲ ಎಂಬ ಪ್ರಶ್ನೆಗೆ ಗರಂ ಆದ ಸಿಎಂ, ಯಾವುದೇ ಗೊಂದಲ ಇಲ್ಲ, ಕೇಂದ್ರ ಸರ್ಕಾರ ಸದ್ಯಕ್ಕೆ ನಮ್ಮ ಮುಂದೆ ಪ್ರಸ್ತಾವನೆ ಬಂದಿಲ್ಲ ಎಂದು ಹೇಳಿದೆ. ಮುಂದೆ ಪ್ರಸ್ತಾವನೆ ಹೋದಾಗ ಅದನ್ನು ಕೈಗೆತ್ತಿಕೊಳ್ಳಲಿದೆ. ಇದು ಕಾಂಗ್ರೆಸ್ ನವರು ಉಂಟು ಮಾಡುತ್ತಿರುವ ಗೊಂದಲ ಎಂದು ಹೇಳಿದರು. ನಾನು ಚಾಮರಾಜನಗರಕ್ಕೆ ಮೂರನೇ ಬಾರಿ ಭೇಟಿ ನೀಡುತ್ತಿದ್ದೇನೆ.ಇದರಲ್ಲಿ ವಿಶೇಷತೆ ಇದೆ ಅಂತ ನನಗನ್ನಿಸುವುದಿಲ್ಲ, 31 ಜಿಲ್ಲೆಗಳಂತೆ ಚಾಮರಾಜನಗರವೂ ಒಂದು ಭಾಗ, ಇದು ಇತಿಹಾಸ ಪ್ರಸಿದ್ಧ ಗಡಿ ಜಿಲ್ಲೆ ಎಂದರು.
0 ಕಾಮೆಂಟ್‌ಗಳು