ಹುಲಿ ಯೋಜನೆ ಘೋಷಣೆ ತೀರ್ಮಾನವಾಗಿಲ್ಲ : ಸಿಎಂ ಬಸವರಾಜ ಬೊಮ್ಮಾಯಿ
ಡಿಸೆಂಬರ್ 14, 2022
-ಶಾರುಕ್ ಖಾನ್, ಹನೂರು ಹನೂರು : ಮಲೆ ಮಹದೇಶ್ವರ ಹುಲಿ ಯೋಜನೆ ಘೋಷಣೆ ವಿಚಾರ ವನ್ಯಜೀವಿ ಮಂಡಳಿ ಮುಂದಿದೆ. ಈ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಬೆಟ್ಟದ ವ್ಯಾಪ್ತಿಯಲ್ಲಿರುವ ಜನವಸತಿ ಪ್ರದೇಶಗಳಿಗೆ ಯಾವುದೇ ತೊಂದರೆಯಾಗಬಾರದು ಎಂಬ ದೃಷ್ಠಿಯಿಂದ ಹಲವು ಸ್ಪಷ್ಟನೆ ಕೇಳಿದ್ದೇನೆ ಎಂದು ಮಲೆ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಮಲೆ ಮಹದೇಶ್ವರಸ್ವಾಮಿ ದರ್ಶನ ಪಡೆದು ನಾಗಮಲೆ ಭವನದಲ್ಲಿ ಪ್ರಾಧಿಕಾರದ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬೆಟ್ಟಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸಮರ್ಪಕ ಮೂಲ ಸೌಕರ್ಯ ಕಲ್ಪಿಸುವುದು, ವಾಸ್ತವ್ಯಕ್ಕಾಗಿ ವಸತಿಗೃಹ ನಿರ್ಮಾಣ, ಒಳಚರಂಡಿ ವ್ಯವಸ್ಥೆ, ಮುಂದಿನ ತಿಂಗಳು ಮಹದೇಶ್ವರರ ಪ್ರತಿಮೆ ಉದ್ಘಾಟನೆ, ರಸ್ತೆ ನಿರ್ಮಾಣ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ತಜ್ಞರ ಸಲಹೆ ಪಡೆದು ಕ್ಷೇತ್ರದ ಅಭಿವೃದ್ಧಿ ಮಾಡಲು ಸೂಚಿಸಿದ್ದೇನೆ ಎಂದರು.
ನಾನು ಪುಣ್ಯವಂತ : ಚಾಮರಾಜನಗರ ಜಿಲ್ಲೆಗೆ ಯಾರು ಬರಲ್ವೋ ಅವರಿಗೇನಾದರೂ ಕೊರತೆ ಇರುತ್ತೆ. ನಿಮ್ಮ೦ತಹ ಮುಗ್ಧ ಜನರನ್ನು ಭೇಟಿಯಾದ ನಾನೇ ಪುಣ್ಯವಂತ. ಗಡಿ ಜಿಲ್ಲೆಯ ಅಭಿವೃದ್ಧಿಗೆ ನಮ್ಮ ಸರ್ಕಾರ ಹೆಚ್ಚು ಆದ್ಯತೆ ನೀಡಿದೆ, ನೀವೆಲ್ಲಾ ಪುಣ್ಯಭೂಮಿಯಲ್ಲಿ ವಾಸಿಸುತ್ತಿದ್ದೀರಿ. ಚಾಮರಾಜನಗರದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ನಾನು ನೀರಾವರಿ ಸಚಿವನಾಗಿದ್ದಾಗಲೇ ಆರಂಭ ಮಾಡಿದ್ದೆ. ಹೀಗಾಗಿ ಈ ಭಾಗದ ಜನರಿಗೆ ನೀರು ಸಿಗುತ್ತಿದೆ. ಕೃಷಿ ಬೆಳೆದಿದೆ, ಆದರೆ ಕೃಷಿಕ ಬೆಳೆದಿಲ್ಲ, ಇದನ್ನು ಮನಗಂಡು ರೈತನಿಗೆ ಶಕ್ತಿ ತುಂಬಲು ಕಾಯಕ ಯೋಜನೆಯಡಿ ೨೦ ಲಕ್ಷ ರೈತರಿಗೆ ಬಡ್ಡಿರಹಿತ ೫೦ ಸಾವಿರ ರೂ. ಸಾಲ ನೀಡುತ್ತಿದ್ದೇನೆ ಎಂದರು. ಸಭೆಯಲ್ಲಿ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಕಂದಾಯ ಸಚಿವ ಆರ್.ಅಶೋಕ, ಸಾಲೂರು ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶಾಸಕರಾದ ಆರ್.ನರೇಂದ್ರ, ಎನ್.ಮಹೇಶ್, ಸಿ.ಎಸ್.. ನಿರಂಜನ್ ಕುಮಾರ್, ಹಿರಿಯ ಅಧಿಕಾರಿಗಳಾದ ಜಯರಾಂ, ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ.ಪ್ರಕಾಶ್, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಮಲೆಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಎಸ್. ಕಾತ್ಯಾಯಿನಿದೇವಿ, ಜಿಪಂ ಸಿಇಓ ಕೆ.ಎಂ.ಗಾಯಿತ್ರಿ, ಎಸ್‌ಪಿ ಟಿ.ಪಿ. ಶಿವಕುಮಾರ್ ಸೇರಿದಂತೆ ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
0 ಕಾಮೆಂಟ್‌ಗಳು