ಅಮೂಲ್‌-ನಂದಿನಿ ಒಗ್ಗೂಡಿದರೆ ದೇಶದಲ್ಲಿ ಕ್ಷೀರಕ್ರಾಂತಿ :ಅಮಿತ್‌ ಶಾ

ಮಂಡ್ಯ: ಡೇರಿ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಕರ್ನಾಟಕದ ನಂದಿನಿ ಮತ್ತು ಗುಜರಾತಿನ ಅಮೂಲ್‌ ಸಂಸ್ಥೆಗಳು ಒಂದಾದರೆ ದೇಶದಲ್ಲಿ ಕ್ಷೀರಕ್ರಾಂತಿ ಮಾಡುವ ಮೂಲಕ ಹಾಲಿನ ಉತ್ಪನ್ನಗಳನ್ನು ನಾವು ವಿದೇಶಕ್ಕೆ ರಫ್ತು ಮಾಡಬಹುದು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಲಹೆ ನೀಡಿದರು.
ಮದ್ದೂರು ತಾಲ್ಲೂಕು ಗೆಜ್ಜಲಗೆರೆಯಲ್ಲಿ 260 ಕೋಟಿ ರೂ. ವೆಚ್ಚದಲ್ಲಿ ನೂತನ ಮೆಗಾ ಡೇರಿ ಉದ್ಘಾಟಿಸಿ ಅವರು ಮಾತನಾಡಿ, 1975 ರಲ್ಲಿ ಕೇವಲ 66 ಕಿಲೋ ಲೀಟರ್‌ ಹಾಲು ಸಂಸ್ಕರಣೆ ಮಾಡುತ್ತಿದ್ದ ನಂದಿನಿ ಇಂದು 82 ಲಕ್ಷ ಲೀಟರ್‌ ಹಾಲು ಸಂಸ್ಕರಣೆ ಮಾಡುವ ಮೂಲಕ ಈ ಭಾಗದ ರೈತರ ಆಶಾ ಕಿರಣವಾಗಿದೆ ಎಂದು ಶ್ಲಾಘಿಸಿದರು.
ಶ್ವೇತ ಕ್ರಾಂತಿಯಿಂದ ರೈತರ ಹಣೆ ಬರಹ ಬದಲಿಸಿದ ಗುಜರಾತಿನ ಅಮೂಲ್‌ ಸಂಸ್ಥೆ ಇಂದು 36 ಲಕ್ಷ ಮಹಿಳೆಯರಿಗೆ 60 ಸಾವಿರ ಕೋಟಿ ಹಣವನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡುತ್ತಿದ್ದು, ಕರ್ನಾಟಕದ ಜನರೂ ಅಮೂಲ್‌ ಸಂಸ್ಥೆಯ ಜತೆಗೂಡಿದರೆ 3 ವರ್ಷದಲ್ಲಿ ಕರ್ನಾಟಕದ ಎಲ್ಲ ಹಳ್ಳಗಳಲ್ಲೂ ಪ್ರಾಥಮಿಕ ಡೇರಿ ಸ್ಥಾಪಿಸಲಾಗುವುದು ಎಂದರು.
ಅಮೂಲ್‌ ಮತ್ತು ನಂದಿನಿ ಡೇರಿಗಳು ಕರ್ನಾಟಕದಲ್ಲಿ 2 ಲಕ್ಷ ಪ್ರಾಥಮಿಕ ಡೇರಿಗಳನ್ನು ಸ್ಥಾಪಿಸಲಾಗುವುದು. ಇದರಿಂದ ಡೇರಿ ಉತ್ಪನ್ನಗಳನ್ನು ವಿದೇಶಗಳಿಗೂ ರಫ್ತು ಮಾಡುವ ಮೂಲಕ ರೈತರ ಆದಾಯ ಹೆಚ್ಚಿಸಬಹುದು ಎಂದರು.
ಸ್ವಾತಂತ್ರ್ಯ ಬಂದ ನಂತರ ದೇಶದಲ್ಲಿ ಕೃಷಿ ಮಂತ್ರಾಲಯದಿಂದ ಸಹಕಾರ ಇಲಾಖೆ ಬೇರ್ಪಡಿಸಿದ್ದಿದ್ದರೆ ಇಂದು ರೈತರು ಮತ್ತು ಸಹಕಾರ ಇಲಾಖೆಯ ಚಿತ್ರಣವೇ ಬದಲಾಗುತ್ತಿತ್ತು, ಆದರೆ, ಹಾಗಾಗಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಸಹಕಾರ ಇಲಾಖೆಯನ್ನು ಕೃಷಿ ಇಲಾಖೆಯಿಂದ ಪ್ರತ್ಯೇಕ ಮಾಡುವ ಮೂಲಕ ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಿದ್ದಾರೆ ಎಂದರು.   
ಹೈನುಗಾರಿಕೆ ಮೂಲಕ ಈ ಭಾಗದ ಜನರು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಇಂದು ಉದ್ಘಾಟನೆಯಾದ 260 ಕೋಟಿ ವೆಚ್ದದ ಮೆಗಾ ಡೇರಿಯಲ್ಲಿ ನಿತ್ಯ 10 ಲಕ್ಷ ಲೀಟರ್‌ ಹಾಲು ಸಂಸ್ಕರಣೆ ಮಾಡುವ ವ್ಯವಸ್ಥೆ ಇದ್ದು, ಮುಂದಿನ ದಿನಗಳಲ್ಲಿ ಇದನ್ನು 14 ಲಕ್ಷ ಲೀಟರ್‌ ಸಂಸ್ಕರಣೆ ಮಾಡಲು ಮೇಲ್ದರ್ಜೆಗೆರಿಸಲಾಗುತ್ತದೆ ಎಂದರು.
ಹೈನುಗಾರಿಕೆಯಲ್ಲಿ ಕರ್ನಾಟಕ ಉತ್ತಮ ಸಾಧನೆ ಮಾಡಿದ್ದು, ರಾಜ್ಯದ 15,210 ಹಳ್ಳಿಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, 26.22 ಲಕ್ಷ ರೈತರು ಹಾಲು ಉತ್ಪಾದನೆ ಮaಡುತ್ತಾ ಹೈನುಗಾರಿಕೆಯಲ್ಲಿ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ರಾಜ್ಯ ಸರ್ಕಾರವೂ ಹೈನುಗಾರರ ನೆರವಿಗೆ ನಿಂತಿದ್ದು, 26 ಲಕ್ಷ ರೈತರಿಗೆ ತಿಂಗಳಿಗೆ 28 ಕೋಟಿ ರೂ. ಹಾಲಿನ ಸಹಾಯ ಧನವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡುತ್ತಿದೆ ಎಂದರು. ಇದರಿಂದಾಗಿ ಕೇವಲ 4 ಕೋಟಿ ಇದ್ದ ಮಿಲ್ಕ್‌ ಫೆಡರೇಷನ್‌ ವಾರ್ಷಿಕ ವಹಿವಾಟು ಇಂದು 25ಸಾವಿರ ಕೋಟಿ ದಾಟಿದೆ> ಈ ವಹಿವಾಟಿನ ಶೇ.80 ಭಾಗ ರೈತರ ಕೈ ಸೇರುತ್ತಿರುವುದು ಮಹತ್ವದ ವಿಚಾರ ಎಂದರು.
 
 
 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು