ವಿಶ್ವ ಏಡ್ಸ್ ದಿನದ ಪ್ರಯುಕ್ತ ಸೆಂಟ್ ಜೋಸೆಫ್ ಮಹಿಳಾ ಕಾಲೇಜು ವಿದ್ಯಾರ್ಥಿನಿಯರಿಂದ ವಾಕಥಾನ್-2022
ಮೈಸೂರು : ದ್ವೇಷ, ಅಸೂಯೆ, ತಾರತಮ್ಯ ಏಡ್ಸ್ ಕಾಯಿಲೆಗಿಂತಲೂ ಮಾರಕವಾಗಿದ್ದು, ವಿದ್ಯಾರ್ಥಿಗಳು ವಿಶಾಲ ಮನೋಭಾವನೆ ಬೆಳೆಸಿಕೊಂಡು ಸಮಾಜಕ್ಕೆ ಕೊಡುಗೆಗಳಾಗಿ ಬದುಕಬೇಕೆಂದು ಮೈಸೂರು ಧರ್ಮ ಪ್ರಾಂತ್ಯದ ಬಿಷಪ್ ಡಾ.ಕೆ.ಆಂತೋಣಿ ವಿಲಿಯಂ ಸಲಹೆ ನೀಡಿದರು.
ನಗರದ ರಮ್ಮನಹಳ್ಳಿ ಬಳಿಯ ಸೆಂಟ್ ಜೋಸೆಫ್ ಮಹಿಳಾ ಕಾಲೇಜಿನಲ್ಲಿ ವಿಶ್ವ ಏಡ್ಸ್ ದಿನದ ಪ್ರಯುಕ್ತ ಭರವಸೆಯ ನಡಿಗೆ ಘೋಷವಾಕ್ಯದಡಿ ಏರ್ಪಡಿಸಿದ್ದ ವಾಕಥಾನ್-2022, ರಮ್ಮನಹಳ್ಳಿ ಗ್ರಾಮದಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮವನ್ನು ಕಾಲೇಜು ಆವರಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ಮನುಷ್ಯನ ನೆನಪಿನ ಶಕ್ತಿ ಅತ್ಯಂತ ಕಡಿಮೆ. ಇತ್ತೀಚೆಗೆ ಕರೋನಾ ಮಹಾಮಾರಿ ಸಂದರ್ಭದಲ್ಲಿ ನಡೆದ ಲಾಕ್‍ಡೌನ್, ಮಾಸ್ಕ್, ಸ್ಯಾನಿಟೈಝರ್ ಮುಂತಾದವುಗಳನ್ನೆಲ್ಲಾ ಮರೆತು ಮತ್ತೆ ತನ್ನ ಹಿಂದಿನ ವೈಭವಕ್ಕೆ ಮರಳಿದ್ದಾನೆ. ಆದರೆ, ವಿದ್ಯಾರ್ಥಿಗಳು ಇಂದು ನಡೆಸುವ ಏಡ್ಸ್ ಜಾಗೃತಿ ಕಾರ್ಯಕ್ರಮ ದೀರ್ಘಕಾಲದ ತನಕ ನೆನಪಿನಲ್ಲಿ ಉಳಿಯುವಂತಾಗಲಿ, ಸಾರ್ವಜನಿಕರಲ್ಲಿ ಏಡ್ಸ್ ಜಾಗೃತಿಯ ಜತೆ ಸ್ನೇಹ, ವಿಶ್ವಾಸ, ಬಾಂಧವ್ಯ, ಪ್ರೀತಿಯಿಂದ ಬದುಕುವುದರ ಬಗ್ಗೆ ತಿಳಿವಳಿಕೆ ನೀಡಿ ಎಂದರು.
ಇದಕ್ಕೂ ಮುನ್ನ ಸುಯೋಗ್ ಆಸ್ಪತ್ರೆಯ ವೈದ್ಯರಾದ ಡಾ.ಎಸ್.ಪಿ.ಯೋಗಣ್ಣ ಏಡ್ಸ್ ರೋಗವನ್ನು ತಡೆಗಟ್ಟುವ ಬಗ್ಗೆ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ವಿಧಾನಗಳ ಕುರಿತು ಸವಿಸ್ತಾರವಾಗಿ ವಿವರಣೆ ನೀಡಿದರು.
ಉದ್ಘಾಟನಾ ಸಮಾರಂಭದಲ್ಲಿ ಪಾದ್ರಿಗಳಾದ ಮದುಲೈ ಮುತ್ತು, ವಿಜಯಕುಮಾರ್, ಅವಿನಾಶ್, ಪ್ರಾಂಶುಪಾಲರಾದ ಪೃಥ್ವಿ ಶಿರಹಟ್ಟಿ, ಎನ್‍ಸಿಸಿ ಅಧಿಕಾರಿ ಸಂಗೀತಾ ಮುಂತಾದವರು ಇದ್ದರು.
0 ಕಾಮೆಂಟ್‌ಗಳು