2647 ವಾಹನ ತಪಾಸಣೆ, 695 ಪ್ರಕರಣ ದಾಖಲು, 41 ವಾಹನ ಜಪ್ತಿ
ಸಂಗ್ರಹ ಚಿತ್ರ
ಮೈಸೂರು : ಪೊಲೀಸ್ ಆಯುಕ್ತರ ನಿರ್ದೇಶನದಂತೆ ಸಂಚಾರ ನಿಯಮಗಳ ಜಾರಿ ಸಂಬಂಧ ಶುಕ್ರವಾರ ಬೆಳಿಗ್ಗೆಯಿಂದ ಸಂಜೆ ತನಕ ನಗರದ ಪ್ರಮುಖ ಸ್ಥಳಗಳಲ್ಲಿ ಸಂಚಾರ, ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರಿಂದ ನಡೆಸಿದ ಜಂಟಿ ವಾಹನ ತಪಾಸಣಾ ಕಾರ್ಯಾಚರಣೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಂದ 3.43 ಲಕ್ಷ ರೂ ದಂಡ ವಸೂಲಿ ಮಾಡಿರುವ ಬಗ್ಗೆ ವರದಿಯಾಗಿದೆ.
ನಗರ ಪೊಲೀಸ್ ಆಯುಕ್ತರೇ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದು, ನಗರದ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಲಾಗಿತ್ತು. ಶುಕ್ರವಾರ ಒಟ್ಟು 2647 ವಾಹನಗಳ ತಪಾಸಣೆ ನಡೆಸಿ 695 ಪ್ರಕರಣ ದಾಖಲು ಮಾಡಲಾಯಿತು. ಅಲ್ಲದೇ ಒಟ್ಟು 3,43,000 ರೂ. ದಂಡ ವಸೂಲಿ ಮಾಡಲಾಯಿತಲ್ಲದೇ 41 ವಾಹನಗಳನ್ನು ಜಪ್ತಿ ಮಾಡಲಾಯಿತು.
ಡಿಸೆಂಬರ್ 30 ರಂದು ನಡೆದ ಸಂಚಾರ ನಿಯಮ ಉಲ್ಲಂಘನೆ ಕಾರ್ಯಾಚರಣೆಯಲ್ಲಿ ಟ್ರಾಫಿಕ್ ಪೊಲೀಸ್ ಸೇರಿದಂತೆ ಎಲ್ಲಾ ಠಾಣಾ ವ್ಯಾಪ್ತಿಯಿಂದ 2448 ವಾಹನಗಳ ತಪಾಸಣೆ ನಡೆಸಿ 684 ಪ್ರಕರಣ ದಾಖಲಿಸಿ, 3,22,200 ರೂ. ದಂಡ ವಸೂಲಿ ಮಾಡಿ, 47 ವಾಹನಗಳನ್ನು ಜಪ್ತಿ ಮಾಡಲಾಗಿತ್ತು.
ಡಿ.ಸಿ.ಪಿ. ಕಾನೂನು ಮತ್ತು ಸುವ್ಯವಸ್ಥೆ, ಡಿ.ಸಿ.ಪಿ. ಕೇಂದ್ರಸ್ಥಾನ, ಅಪರಾಧ ಮತ್ತು ಸಂಚಾರ ಹಾಗೂ ವಿಭಾಗದ ಎಲ್ಲಾ ಎ.ಸಿ.ಪಿ.ರವರು, ನಗರದ ಎಲ್ಲಾ ಪೊಲೀಸ್ ಠಾಣೆಗಳ ಪೊಲೀಸ್ ಇನ್ಸ್‍ಪೆಕ್ಟರ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
0 ಕಾಮೆಂಟ್‌ಗಳು