ಟನ್ ಕಬ್ಬಿಗೆ 50 ರೂ. ಹೆಚ್ಚಳಕ್ಕೆ ವಿರೋಧ : ಸರ್ಕಾರದ ಆದೇಶ ಪ್ರತಿ ಸುಟ್ಟು ಹಾಕಿದ ಕುರುಬೂರು ಶಾಂತಕುಮಾರ್

17ನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ

ಬೆಂಗಳೂರು : ಕೇಂದ್ರ ಸರ್ಕಾರ ನಿಗದಿ ಮಾಡಿರುವ ಕಬ್ಬಿನ ಎಫ್‍ಆರ್‍ಪಿ ದರಕ್ಕೆ ಹೆಚ್ಚುವರಿಯಾಗಿ ಟನ್ ಕಬ್ಬಿಗೆ 50 ರೂ. ನೀಡಲು ರಾಜ್ಯ ಸರ್ಕಾರವನ್ನು ವಿರೋಧಿಸಿದ ಕಬ್ಬು ಬೆಳೆಗಾರರು, ಸರ್ಕಾರದ ಆದೇಶ ಪ್ರತಿಯನ್ನು ಸುಟ್ಟು ಹಾಕಿ ಪ್ರತಿಭಟನೆಯನ್ನು ಮುಂದುವರಿಸಿದರು.
ಈ ಸಂದರ್ಭದಲ್ಲಿ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಸರ್ಕಾರ ನಮಗೇನೂ ಭಿಕ್ಷೆ ನೀಡಬೇಕಿಲ್ಲ ಎನ್ನುತ್ತಾ ತಲೆ ಮೇಲೆ ಕಬ್ಬಿನ ಜಲ್ಲೆಗಳನ್ನು ಹೊತ್ತು ಆದೇಶವನ್ನು ಸುಟ್ಟು ಬೂದಿ ಮಾಡಿ, ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಸಕ್ಕರೆ ಕಾರ್ಖಾನೆ ಮಾಲೀಕರಿಂದ ಹೆಚ್ಚುವರಿ ಹಣ ಕೊಡಿಸಲು ಸರ್ಕಾರಕ್ಕೆ ಧೈರ್ಯವಿಲ್ಲದಿದ್ದರೆ ಸಕ್ಕರೆ ವಹಿವಾಟಿನಿಂದ ಸರ್ಕಾರಕ್ಕೆ ಬರುವ 5 ಸಾವಿರ ಕೋಟಿ ರೂ. ತೆರಿಗೆ ಹಣದಿಂದ ನಮಗೆ ಹೆಚ್ಚುವರಿ ಹಣ ನೀಡಲಿ, ಹಿಂದೆ ಬೆಳಗಾವಿ ಅಧಿವೇಶನದ ವೇಳೆ ರೈತನೊಬ್ಬ ಪ್ರಾಣ ಕಳೆದುಕೊಂಡಾಗ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಟನ್‍ಗೆ 160 ಹೆಚ್ಚುವರಿ ಹಣ ಘೋಷಣೆ ಮಾಡಿ 1600 ಕೋಟಿ ರೈತರಿಗೆ ನೀಡಿದ್ದಾರೆ ಅದರಂತೆ ಪ್ರಸಕ್ತ ಸರ್ಕಾರವು ನೀಡಲಿ ಎಂದು ಆಗ್ರಹಿಸಿದರು.
ರಾಜ್ಯಾದ್ಯಂತ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಕಟಾವು ಸಾಗಾಣಿಕೆ ವೆಚ್ಚವನ್ನು ಹಿಂದಿನ ವರ್ಷಕ್ಕಿಂತ ಈ ಬಾರಿ ಹೆಚ್ಚುವರಿಯಾಗಿ ಪ್ರತಿ ಟನ್‍ಗೆ 200 ರಿಂದ 300 ರೈತರ ಹಣದಲ್ಲಿ ಮುರಿದು ಕೊಳ್ಳುತ್ತಿದ್ದಾರೆ, ಇದನ್ನು ಕಡಿಮೆ ಮಾಡಲು ಕ್ರಮ ಕೈಗೊಂಡು ಸರ್ಕಾರ ರೈತರ ರಕ್ಷಣೆ ಮಾಡಲಿ, ಕಬ್ಬಿನಿಂದ ಬರುವ ಸಕ್ಕರೆ ಇಳುವರಿಯನ್ನ ಸಕ್ಕರೆ ಕಾರ್ಖಾನೆಗಳೇ ಪರೀಕ್ಷೆ ಮಾಡಿ ವರದಿ ನೀಡುವ ಕಾರಣ ರೈತರಿಗೆ ವಂಚನೆಯಾಗುತ್ತಿದೆ ಇದನ್ನು ಸರ್ಕಾರ ತಪ್ಪಿಸಬೇಕು. 
ಕಬ್ಬಿನಿಂದ ಬರುವ ಇಥೆನಾಲ್ ಉತ್ಪನ್ನದ ಲಾಭಾಂಶದ ಜತೆಗೆ ಮೊಲಾಸಿಸ್, ಬಗ್ಯಾಸ್, ಮಡ್ಡಿ ಸಕ್ಕರೆ ಉತ್ಪನ್ನಗಳ ಲಾಭವನ್ನು ಪರಿಗಣಿಸಿ ಉತ್ಪಾದನೆಗೆ ತಗಲುವ ಖರ್ಚನ್ನ ಕಳೆದು ರೈತರಿಗೆ ಹೆಚ್ಚುವರಿ ಹಣ ನಿಗದಿ ಮಾಡಲಿ ಎಂದು ಕುರುಬೂರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಉಳುವಪ್ಪ ಬಳಗೇರ, ರಮೇಶ್ ಹೂಗಾರ್, ಜಗದೀಶ್ ಪಾಟೀಲ್, ಸುರೇಶ್ ಮಾ. ಪಾಟೀಲ್, ಹತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್, ಶರಣು ಬಿಲ್ಲದ್ ಮುಂತಾದವರಿದ್ದರು.

``ರೈತ ಇಂದಿಗೂ ಸಾಲದ ಸುಳಿಯಲ್ಲಿದ್ದಾನೆ. ನೀವು ಇಥೇನಾಲ್‍ನಿಂದ 50 ಕೊಡುತ್ತೇವೆ ಎಂದರೆ ಭಿಕ್ಷೆ ಕೊಟ್ಟಂತೆ ನಮಗೆ ಭಿಕ್ಷೆ ಬೇಡ ನಮ್ಮ ಉತ್ಪಾದನೆಗೆ ತಕ್ಕ ಬೆಲೆಯನ್ನು ಕೊಡಿ’’
-ಕುರುಬೂರು ಶಾಂತಕುಮಾರ್




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು