ಶುಚಿತ್ವ ಕಾಣದ ಶೆಟ್ಟಳ್ಳಿ ಸರ್ಕಾರಿ ಆಸ್ಪತ್ರೆ ಆವರಣ : ಪಂಚಾಯ್ತಿ ದುರಾಡಳಿತದ ಅನಾವರಣ
ಡಿಸೆಂಬರ್ 08, 2022
-ಶಾರುಕ್ ಖಾನ್, ಹನೂರು ಹನೂರು : ಸಾರ್ವಜನಿಕರ ಆರೋಗ್ಯ ಕಾಪಾಡಬೇಕಾದ ಸರ್ಕಾರಿ ಆಸ್ಪತ್ರೆಯ ಆವರಣಗಳೇ ಅನೈರ್ಮಲ್ಯದಿಂದ ಕೂಡಿದ್ದು, ಹಾವು ಹಲ್ಲಿಗಳ ಆವಾಸ ಸ್ಥಾನವಾಗಿದೆ ಇದು ಶೆಟ್ಟಳ್ಳಿ ಗ್ರಾಮ ಪಂಚಾಯ್ತಿ ಆಡಳಿತದ ನಿರ್ಲಕ್ಷ್ಯವನ್ನು ಪ್ರತಿಬಿಂಬಿಸುತ್ತಿದೆ. ಸುಮಾರು 1000 ಜನಸಂಖ್ಯೆ ಹೊಂದಿರುವ ಗ್ರಾಮ ಪಂಚಾಯ್ತಿ ಕೇಂದ್ರ ಸ್ಥಾನವಾದ ಶೆಟ್ಟಳ್ಳಿ ಸೇರಿದಂತೆ ಸುತ್ತಮುತ್ತಲ ಏಳೆಂಟು ಗ್ರಾಮಗಳಿಗೆ ಈ ಆರೋಗ್ಯ ಉಪ ಕೇಂದ್ರವೇ ದೊಡ್ಡಾಸ್ಪತ್ರೆ. ದಿನನಿತ್ಯ 30 ರಿಂದ 50 ಜನ ರೋಗಿಗಳು ಇಲ್ಲಿ ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಆಸ್ಪತ್ರೆ ಆ ವರಣವಂತೂ ಯಾವುದೋ ಪಾಳುಬಿದ್ದ ಜಾಗದಂತಿದೆ. ಆವರಣವೇ ಹೀಗೆ ಎನ್ನುವುದಾದರೇ, ಇನ್ನು ಚಿಕಿತ್ಸೆ ಹೇಗೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲಿನ ಪಿಡಿಓ ಶಿವಕುಮಾರ್ ಗ್ರಾಪಂ ಸದಸ್ಯರಾದ ರಾಣಿ ಮತ್ತು ಚಲ್ಲಮ್ಮಾ ಅವರು ಇತ್ತಕಡೆ ಬರುತ್ತಾರೋ ಇಲ್ಲವೊ ಗೊತ್ತಿಲ್ಲ. ಕನಿಷ್ಠ ತಮ್ಮ ಪಂಚಾಯ್ತಿ ನೌಕರರನ್ನಾದರೂ ಕಳಿಸಿ ಆಸ್ಪತ್ರೆ ಆವರಣದ ಸ್ವಚ್ಛತೆ ಕಾಪಾಡಲು ನೆರವಾದರೆ ಗ್ರಾಮಸ್ಥರ ಪುಣ್ಯ ಎನ್ನಬಹುದು. ಬಹುತೇಕ ಕೂಲಿ ಕಾರ್ಮಿಕರು, ಕೃಷಿಕರು, ನಿರ್ಗತಿಕರು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಯನ್ನೇ ನಂಬಿರುತ್ತಾರೆ. ಸಾಕಷ್ಟು ಸಂಬಳ, ಸೌಲಭ್ಯ ಪಡೆಯುವ ಅಧಿಕಾರಿಗಳು ಕನಿಷ್ಠ ಜನಪರವಾಗಿ ಕೆಲಸ ಮಾಡದಿದ್ದರೇ ಹೇಗೆ? ಎನ್ನುವುದು ಇಲ್ಲಿನ ಗ್ರಾಮಸ್ಥರ ಪ್ರಶ್ನೆಯಾಗಿದೆ. ಆಸ್ಪತ್ರೆ ಆವರಣದಲ್ಲಿ ಕುಡುಕರ ಹಾವಳಿಯೂ ಹೆಚ್ಚಾಗಿದ್ದು, ಹಗಲು, ರಾತ್ರಿ ಎನ್ನದೇ ಕುಡುಕರು ರಾಜಾರೋಷವಾಗಿ ಇಲ್ಲಿ ಮಧ್ಯಪಾನ ಸೇವಿಸಿ ತೂರಾಡುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಪೊಲೀಸರು ಈ ಬಗ್ಗೆ ಸೂಕ್ತ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ. ಸರ್ಕಾರಗಳು ಕಾಲಕಾಲಕ್ಕೆ ಸರ್ಕಾರಿ ಆಸ್ಪತ್ರೆಗಳ ಉನ್ನತೀಕರಣಕ್ಕೆ ಸಾಕಷ್ಟು ಅನುಕೂಲ ಮಾಡಿಕೊಟ್ಟರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರ ಮತ್ತು ಜನಪ್ರತಿನಿಧಿಗಳಿಗೆ ಕೆಟ್ಟ ಹೆಸರು ಬರುವುದು ಗ್ಯಾರಂಟಿ. ಕೂಡಲೇ ಈ ಆಸ್ಪತ್ರೆ ಆವರಣ ಸ್ವಚ್ಛಗೊಳಿಸಿ ಇಲ್ಲೊಂದು ಆಸ್ಪತ್ರೆ ಇದೆ ಎನ್ನುವುದನ್ನು ತೋರಿಸುವ ಸವಾಲು ಪಿಡಿಓ ಮುಂದಿದೆ.
ಆರೋಗ್ಯ ಉಪಕೇಂದ್ರದ ಆವರಣ ಅನೈರ್ಮಲ್ಯದಿಂದ ಕೂಡಿದ್ದು, ಪಂಚಾಯ್ತಿ ಅಧಿಕಾರಿಗಳ ಬೇಜವಾಬ್ದಾರಿ ಈ ಪರಿಸ್ಥಿತಿಗೆ ಕಾರಣವಾಗಿದೆ. ಇಲ್ಲಿ ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ಸಂಪರ್ಕ ಯಾವುದೂ ಇಲ್ಲ. -ವೆಂಕಟೇಶ್ ಮತ್ತು ಗೋಪಾಲ್ ರಾಜ್ ಗ್ರಾಮಸ್ಥರು.
ಆರೋಗ್ಯ ಉಪಕೇಂದ್ರದ ಆವರಣವನ್ನು ಸ್ವಚ್ಛವಾಗಿಡುವ ಜವಾಬ್ದಾರಿ ಗ್ರಾಮ ಪಂಚಾಯ್ತಿಗೆ ಸೇರಿದ್ದು, ನಾವು 6 ತಿಂಗಳಿನಿಂದಲೂ ಸ್ವಚ್ಛತೆ ಕಾಪಾಡಲು ಪಿಡಿಓ ಅವರಿಗೆ ಹೇಳುತ್ತಲೇ ಇದ್ದೇವೆ. ಆದರೂ ಬರುತ್ತಿಲ್ಲ. -ಆಸ್ಪತ್ರೆ ಸಿಬ್ಬಂದಿ
0 ಕಾಮೆಂಟ್‌ಗಳು