ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಮುಂದುವರಿದ ಪೊಲೀಸ್ ಸಮರ, ವಾಹನ ಸವಾರರು ಕಂಗಾಲು, ಮತ್ತೇ 2.43 ಲಕ್ಷ ದಂಡ ವಸೂಲಿ, 22 ವಾಹನಗಳ ಜಪ್ತಿ

ಎನ್.ಆರ್. ಠಾಣಾ ವ್ಯಾಪ್ತಿಯಲ್ಲಿ 651 ವಾಹನಗಳ ತಪಾಸಣೆ, 117 ಪ್ರಕರಣ ದಾಖಲು, 60 ಸಾವಿರ ದಂಡ ವಸೂಲಿ

ಮೈಸೂರು : ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಸಮರ ಸಾರಿರುವ ಮೈಸೂರು ಪೊಲೀಸರು ಶನಿವಾರ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆ ತನಕ ಕಾರ್ಯಾಚರಣೆ ನಡೆಸಿ ಸಂಚಾರ ನಿಯಮ ಉಲ್ಲಂಘಿಸುವವರಿಗೆ ಬಿಸಿ ಮುಟ್ಟಿಸಿದ್ದಾರೆ.

ಶನಿವಾರ ಟ್ರಾಫಿಕ್ ಪೊಲೀಸ್ ಸೇರಿದಂತೆ ಒಟ್ಟು ಎಲ್ಲಾ ಠಾಣೆಗಳಿಂದ 2295 ವಾಹನಗಳ ತಪಾಸಣೆ ನಡೆಸಿ 460 ಪ್ರಕರಣ ದಾಖಲಿಸಿ 2.43 ಲಕ್ಷ ರೂ. ದಂಡವನ್ನು ವಸೂಲಿ ಮಾಡಿ 22 ವಾಹನಗಳನ್ನು ಜಪ್ತಿ ಮಾಡಲಾಯಿತು.

ಎಲ್ಲೆಂದರಲ್ಲಿ ಪೊಲೀಸರು : ಸಾಮಾನ್ಯವಾಗಿ ಪೊಲೀಸ್ ತಪಾಸಣೆ ನಡೆಸುವ ಸ್ಥಳಗಳು ಸವಾರರಿಗೆ ತಿಳಿದಿದ್ದು, ಅದನ್ನು ತಪ್ಪಿಸಿ ಬೇರೆ ಬೇರೆ ದಾರಿಗಳನ್ನು ಹುಡುಕಿಕೊಂಡು ಹೋಗುವ ಸವಾರರು ಇಂದು ಬೆಸ್ತು ಬಿದ್ದರು. ಎಲ್ಲಾ ಕಳ್ಳದಾರಿಗಳಲ್ಲೂ ಪೊಲೀಸರು ತಪಾಸಣೆ ನಡೆಸಿ ವಾಹನ ಸವಾರರಿಗೆ ಬಿಸಿ ಮುಟ್ಟಿಸಿದರು.
ನರಸಿಂಹರಾಜ ಟ್ರಾಫಿಕ್ ಮತ್ತು ಪೊಲೀಸ್ ಠಾಣೆ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ 651 ವಾಹನಗಳ ತಪಾಸಣೆ ನಡೆಸಿ 117 ಪ್ರಕರಣ ದಾಖಲಿಸಲಾಯಿತು. ಜತೆಗೆ 60 ಸಾವಿರ ದಂಡವನ್ನೂ ಸಹ ವಸೂಲಿ ಮಾಡಲಾಯಿತು.
ಪೊಲೀಸರೂ ಹೈರಾಣ :  ಮೈಸೂರು ಪೊಲೀಸ್ ಆಯುಕ್ತರ ಆದೇಶದಂತೆ ಸಂಚಾರ ನಿಯಮ ಉಲ್ಲಂಟನೆ ವಿರುದ್ಧ ಕಾರ್ಯಾಚರಣೆ ನಡೆಸಿರುವ ಪೊಲೀಸರು ಸತತ ನಾಲ್ಕು ದಿನಗಳಿಂದ ಬೆಳಿಗ್ಗೆಯಿಂದ ಸಂಜೆ ತನಕವೂ ರಸ್ತೆ ಮಧ್ಯೆ ನಿಂತು ವಾಹನಗಳ ಹೊಗೆ ಮತ್ತು ರಸ್ತೆಯ ದೂಳು ಕುಡಿದು ಹೈರಾಣರಾಗಿದ್ದಾರೆ. ಕೆಲವರು ಮೂಗಿಗೆ ಕರ್ಚಿಫ್ ಕಟ್ಟಿದ್ದು ಬಿಟ್ಟರೆ ಹೊಗೆ ಮತ್ತು ದೂಳಿನಿಂದ ರಕ್ಷಿಸುವ ಯಾವುದೇ ಸಾಧನಗಳು ಅವರಲ್ಲಿ ಇರಲಿಲ್ಲ. 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು