19ನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ, ಜಿಟಿ ಜಿಟಿ ಮಳೆಯಲ್ಲೂ ಪ್ರತಿಭಟನೆ ನಡೆಸಿದ ಅನ್ನದಾತರು
ಬೆಂಗಳೂರು : ರಾಜ್ಯ ಸರ್ಕಾರ ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಸದಿದ್ದರೆ ಡಿ,13 ರಿಂದ 15ರ ತನಕ ಬೆಂಗಳುರಿನಲ್ಲಿ ನಡೆಯುವ ಜಿ-20 ರಾಷ್ಟ್ರಗಳ ಸಮಾವೇಶಕ್ಕೆ ಕಪ್ಪುಬಾವುಟ ಪ್ರ ದರ್ಶಿಸಲಾಗುವುದು ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಬೆಳಗಿನಿಂದಲೂ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಲ್ಲೂ ತಮ್ಮ ಹೋರಾಟ ಮುಂದುವರಿಸಿದ ರೈತರು ಸೋರುತ್ತಿರುವ ಶಾಮಿಯಾನದಡಿಯೇ ಅಡಿಗೆ ಮಾಡಿ ಊಟ ಮಾಡಿದರು.
ರೈತರ ಬದುಕೇ ಒಂದು ಹೋರಾಟ. ಮಳೆ, ಬಿಸಿಲು, ಚಳಿ ನಮಗೇನೂ ಇದು ಹೊಸದಲ್ಲ. ರೈತರು ಎಂದಿಗೂ ಬೆಚ್ಚಗೆ ಕುಳಿತಿಲ್ಲ. ನಾವೇನಾದರೂ ಮಳೆ, ಬಿಸಿಲು, ಚಳಿ ಎಂದು ಒಂದು ದಿನ ಮನೆಯಲ್ಲಿ ಕುಳಿತರೆ ಜಗತ್ತಿಗೆ ಒಂದು ಹೊತ್ತಿನ ಊಟ ಕಡಿಮೆಯಾಗುತ್ತದೆ ಎಂದ ಕುರುಬೂರು,
ಕೃಷಿ ಇಲಾಖೆ ವರದಿಯಲ್ಲಿ ಒಂದು ಎಕರೆ ಕಬ್ಬು ಬೆಳೆಯಲು 1.36 ಲಕ್ಷ ವೆಚ್ಚವಾಗುತ್ತದೆ. ಎಕರೆಗೆ 40 ಟನ್ ಕಬ್ಬು ಬೆಳೆದ ರೈತನಿಗೆ 20 ಸಾವಿರ ನಷ್ಟವಾಗುತ್ತದೆ ಎಂದು ಸರ್ಕಾರದ ವರದಿಗಳೇ ಹೇಳುತ್ತವೆ. ಆದಾಗ್ಯೂ ಕಬ್ಬಿಗೆ ಕೇವಲ 50 ರೂ. ಹೆಚ್ಚಳ ಯಾವ ನ್ಯಾಯ? ರೈತರಿಗೇನಾದರೂ ಅನುಕೂಲ ಮಾಡಬೇಕೆಂದರೇ ಭಿಕ್ಷೆ ನೀಡುವ ರೀತಿ ಅನುಸರಿಸಬೇಡಿ ಮೊದಲು ಕೃಷಿ ಇಲಾಖೆ ವರದಿಯನ್ನು ಸಕ್ಕರೆ ಸಚಿವರು ನೋಡಲಿ ಎಂದರು.
ರಾಜ್ಯದಲ್ಲಿ ಶುಗರ್ ಮಾಫಿಯಾ ಹೆಚ್ಚಾಗಿದೆ. ಸಕ್ಕರೆ ಕಾರ್ಖಾನೆಗಳು
ಕಬ್ಬಿನ ಕಟಾವು, ಸಾಗಾಣಿಕೆ ವೆಚ್ಚವನ್ನು ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಮಾಡಿದ್ದಾರೆ. ಇದರ ಹಿಂದೆ ದೊಡ್ಡ ಕೈವಾಡವೇ ಇದೆ. ಇದು ವಾಮಮಾರ್ಗದ ಚುನಾವಣಾ ನಿಧಿ ಸಂಗ್ರಹ ಎಂದು ಆರೋಪಿಸಿದರು.
ಕಬ್ಬಿನಿಂದ ಬರುವ ಸಕ್ಕರೆ, ಇಥೆನಾಲ್, ಮೊಲಾಸಿಸ್, ಬಗ್ಯಾಸ್, ಮಡ್ಡಿ, ಮತ್ತಿತರ ಉತ್ಪನ್ನಗಳ ಲಾಭದ ವರದಿ ತಯಾರಿಸುವ ಸಮಿತಿಯಲ್ಲಿ ರೈತ ಪ್ರತಿನಿಧಿಗಳು ಕಡ್ಡಾಯವಾಗಿ ಇರಬೇಕು. ಡಿ.19,20 ರಂದು ನವದೆಹಲಿಯಲ್ಲಿ ಕೇಂದ್ರ ಕೃಷಿ ಸಚಿವರು ಮತ್ತು ಆಹಾರ ಸಚಿವರನ್ನು ಭೇಟಿ ಮಾಡಿ ಕಬ್ಬು ಬೆಳೆಗಾರರ ಗಂಭೀರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲಾಗುವುದು. ನಾಳೆ ಧರಣಿ ಸ್ಥಳದಲ್ಲಿ ದೆಹಲಿ ಹೋರಾಟದಲ್ಲಿ ಮಡಿದ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು ಎಂದು ಕುರುಬೂರು ಹೇಳಿದರು.
ಪ್ರತಿಭಟನೆಯಲ್ಲಿ ಪಿ.ಸೋಮಶೇಖರ್, ಹತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕೆರೆಹುಂಡಿ ರಾಜಣ್ಣ, ಕಿರಗಸೂರ ಶಂಕರ, ಸಿದ್ದೇಶ
ಕೆಂಡಗಣ್ಣಸ್ವಾಮಿ, ಮಾದಪ್ಪ, ವೆಂಕಟೇಶ್, ಮಹದೇವಸ್ವಾಮಿ, ರಾಜು, ಅಂಬಳೆ ಮಂಜುನಾಥ ಮುಂತಾದವರು ಇದ್ದರು.
0 ಕಾಮೆಂಟ್‌ಗಳು