ಶಾರುಕ್ ಖಾನ್, ಹನೂರು ಹನೂರು: ತಾಲ್ಲೂಕಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮನದ ಹಿನೆಲೆಯಲ್ಲಿ ಸಿಎಂ ಸಂಚರಿಸುವ ಮಾರ್ಗದ ರಸ್ತೆಗಳ ದುರಸ್ತಿಗೆ ಬಂದ ಲೋಕೋಪಯೋಗಿ ಇಲಾಖೆ ಅಂಬಿಯಂತರರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಘಟನೆ ಹನೂರು ಸಮೀಪ ನಡೆದಿದೆ. ದಿನನಿತ್ಯ ಸಾವಿರಾರು ಜನರು, ವಾಹನ ಸವಾರರು ಈ ಹದಗೆಟ್ಟ ರಸ್ತೆಯಲ್ಲಿ ಸಂಚರಿಸಿ ಪ್ರಾಣ ಕಳೆದುಕೊಂಡಿದ್ದಾರೆ. ಆವಾಗೆಲ್ಲಾ ನಿಮಗೆ ರಸ್ತೆ ರಿಪೇರಿ ಮಾಡಿಸಬೇಕು ಎಂದು ಗೊತ್ತಾಗಲಿಲ್ಲವೇ ಎಂದು ಪ್ರಕಾಶ್ ಎಂಬವರು ಕಿಡಿ ಕಾರಿದರು. ಗುಂಡಿ ಬಿದ್ದ ರಸ್ತೆಗಳಲ್ಲಿ ಅನೇಕ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ರಸ್ರೆಗೆ ತೇಪೆ ಹಾಕುವುದನ್ನು ನಿಲ್ಲಿಸಿ ಗುಣಮಟ್ಟದ ಹೊಸ ರಸ್ತೆ ಕಾಮಗಾರಿ ಪ್ರಾರಂಭಿಸಿ ಎಂದು ಜನರು ಒತ್ತಾಯಿಸಿದರು. ಸ್ಥಳದಲ್ಲಿ ಹಾಜರಿದ್ದ ಎಇ ಸುರೇಂದ್ರ ಮಾತನಾಡಿ, ರಸ್ತೆಗಳ ಅಭಿವೃದ್ಧಿಗೆ ಹೊಸದಾಗಿ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗುವುದು. ತಾಲ್ಲೂಕಿಗೆ ಮುಖ್ಯಮಂತ್ರಿ ಆಗಮನದ ಹಿನ್ನೆಲೆ 34 ಕಿಮೀ ರಸ್ತೆಗೆ ತೇಪೆ ಹಾಕಲು 9 ಲಕ್ಷ ರೂ ಹಣ ಬಿಡುಗಡೆಯಾಗಿದೆ. ಅದರಂತೆ ಇಂದು ಕಾಮಗಾರಿ ನಡೆಸುತ್ತಿದ್ದೇವೆ ಎಂದು ತಿಳಿಸಿದರು. ಈ ವೇಳೆ ಗ್ರಾಮಸ್ಥರಾದ ಪ್ರಕಾಶ್, ಚಿಕ್ಕರಾಜು, ರಮೇಶ್, ಪುಟ್ಟಸ್ವಾಮಿ, ರಾಹೀಲ್, ಮಹಾದೇವಸ್ವಾಮಿ ಇನ್ನಿತರರು ಇದ್ದರು.
0 ಕಾಮೆಂಟ್‌ಗಳು